ಕನ್ನಡಪ್ರಭ ವಾರ್ತೆ ಬೆಳಗಾವಿ
ಅನಧಿಕೃತ ಕಾಲ್ ಸೆಂಟರ್‌ವೊಂದರ ಮೇಲೆ ದಾಳಿ ನಡೆಸಿ ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಸೈಬರ್ ವಂಚಕರ ಜಾಲವನ್ನು ಪತ್ತೆ ಹಚ್ಚಿದ್ದು, 33 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕುಮಾರ ಹೌಲ್ ಬಾಕ್ಸೈಟ್ ರೋಡಿನಲ್ಲಿರುವ ಈ ಅನಧಿಕೃತ ಕಾಲ್ ಸೆಂಟರ್ ಮೇಲೆ ಮಾಳ ಮಾರುತಿ ಠಾಣೆ ಸಿಪಿಐ ಗಡ್ಡೇಕರ್ ಹಾಗೂ ಎಪಿಎಂಸಿ ಠಾಣೆ ಸಿಪಿಐ ಅವಟಿ ಅವರು ದಾಳಿ ನಡೆಸಿದ್ದರು. ಅಲ್ಲದೇ, ಬಂಧಿತರಿಂದ 37 ಲ್ಯಾಪ್‌ಟಾಪ್, 37 ಮೊಬೈಲ್ ಸೇರಿ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಗುಜರಾತನ ಪ್ರಿತೇಶ ನವೀನಚಂದ್ರ ಪಟೇಲ, ಮೀತ ರಾಜು ಭಾಯ್ ಗುಪ್ತಾ, ಕರಣ ಬಹಾದ್ದೂರ ರಾಜಪುತ, ಪರಿಕಿಶನ್ ವಿಷ್ಣು ಪ್ರಸಾದ ಉಪಾಧ್ಯಾಯ, ದೆಹಲಿಯ ಅಶುತೋಷ ವಿಜಯಕುಮಾರ, ಮಹಾರಾಷ್ಟ್ರದ ಸುರೇಂದ್ರ ದುಧನಾಥ ಯಾದವ ಸೇರಿ 33 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಬೇರೆ ಹೆಸರಿನಲ್ಲಿ ಕರೆ ಮಾಡುತ್ತಿದ್ದ ಗ್ಯಾಂಗ್ ಈ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ 32 ಜನ ಯುವಕರು ವಿದ್ಯಾವಂತರಾಗಿದ್ದು, ಜನರಿಗೆ ಬೇರೆ ಬೇರೆ ಹೆಸರಿನಲ್ಲಿ ಕರೆ ಮಾಡಿ ತಮ್ಮ ಮೋಸದ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು. ಷೇರು ಟ್ರೇಡಿಂಗ್ ಹೂಡಿಕೆ, ಹೊಸ ಮೊಬೈಲ್‌ಗಳ ಖರೀದಿ ಸೇರಿದಂತೆ ವಿವಿಧ ವಿಷಯಗಳ ಮೇಲೆ ಹಣ ದೋಚುತ್ತಿದ್ದರು. ದಾಳಿ ವೇಳೆ ಪತ್ತೆಯಾದ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಪರಿಶೀಲಿಸಲಾಗುತ್ತಿದ್ದು, ಅಸಂಖ್ಯಾತ ಮೊಬೈಲ್‌ಗಳಿಗೆ ಕರೆ ಮಾಡಿರುವುದು ಪ್ರಾಥಮಿಕ ಹಂತದಲ್ಲಿ ಗೊತ್ತಾಗಿದೆ ಎಂದು ಆಯುಕ್ತರು ತಿಳಿಸಿದರು.ಈ ಕಾರ್ಯಾಚರಣೆಯಲ್ಲಿ ಮಾಳಮಾರುತಿ ಠಾಣೆಯ ಸಿಪಿಐ ಬಿ.ಆರ್.ಗಡ್ಡೆಕರ ಹಾಗೂ ಎಪಿಎಂಸಿ ಠಾಣೆಯ ಸಿಪಿಐ ಯು.ಎಸ್.ಅವಟಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.ಬಾಕ್ಸ್ಅನಾಚಾರ ಕಂಡು ಪೊಲೀಸರೇ ಬೆಸ್ತುಕಳೆದ ಮೂರು ದಿನಗಳ ಹಿಂದೆ ಈ ಅನಧಿಕೃತ ಕಾಲ್ ಸೆಂಟರ್ ನಡೆಸುವ ಕುರಿತು ಪೊಲೀಸ್ ಠಾಣೆಗೆ ಅನಾಮಧೇಯ ಪತ್ರವೊಂದು ಬಂದಿತ್ತು. ಈ ಪತ್ರದ ಜಾಡು ಬೆನ್ನಟ್ಟಿದ ಮಾಳ ಮಾರುತಿ ಹಾಗೂ ಎಪಿಎಂಸಿ ಠಾಣೆಯ ಪೊಲೀಸರು ಕಾಲ್ ಸೆಂಟರ್ ಮೇಲೆ ದಾಳಿ ಮಾಡಿ ಸೈಬರ್ ಮೋಸದ ಜಾಲವನ್ನು ಬೇಧಿಸಿದ್ದಾರೆ. ಈ ದಾಳಿ ವೇಳೆ ಅಲ್ಲಿಯ ಅನಾಚಾರ ಕಂಡು ಸ್ವತಃ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಈ ಗ್ಯಾಂಗ್‌ನಲ್ಲಿ ಒಟ್ಟು 33 ಜನರಿದ್ದು, 11 ಜನರು ಮಾತ್ರ ಬೇರೆ ಬೇರೆ ಪ್ಲಾನ್ ಮುಖಾಂತರ ಅಮೆರಿಕದ ಜನರಿಗೆ ಕರೆ ಮಾಡಿ ಮಂಕೂಬೂದಿ ಎರಚಿ ಹಣ ದೋಚುತ್ತಿದ್ದರು. ಆರೋಪಿಗಳು ಅಸ್ಸಾಂ, ನ್ಯಾಗಾಲ್ಯಾಂಡ್, ರಾಜಾಸ್ಥಾನ, ಉತ್ತರಾಖಾಂಡ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯದವರಾಗಿದ್ದಾರೆ ಎಂಬುವುದು ಗೊತ್ತಾಗಿದೆ.