ಹಳ್ಳಿಗಳ ಸಮಗ್ರ ಅಭಿವೃದ್ಧಿಯಾಗದೇ ರಾಷ್ಟ್ರಾಭಿವೃದ್ಧಿ ಅಸಾಧ್ಯ-ಶಾಸಕ ಲಮಾಣಿ

KannadaprabhaNewsNetwork |  
Published : Sep 10, 2025, 01:04 AM IST
ಪೋಟೊ-೯ ಎಸ್.ಎಚ್.ಟಿ. ೧ಕೆ- ಶಾಸಕ ಡಾ. ಚಂದ್ರು ಕೆ.  ಲಮಾಣಿ ಹೊಸಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಸಂವಿಧಾನದ ೭೩ ಮತ್ತು ೭೪ನೇ ತಿದ್ದುಪಡಿ ಅನ್ವಯ ಹಳ್ಳಿಗಳಿಗೆ ಸಿಕ್ಕ ಅಧಿಕಾರ ಮತ್ತು ಧನಸಹಾಯ ದಾನವಲ್ಲ. ಭಾರತ ಹಳ್ಳಿಗಳ ದೇಶ, ಹಳ್ಳಿಗಳ ಸಮಗ್ರ ಅಭಿವೃದ್ಧಿಯಾಗದೇ ರಾಷ್ಟ್ರದ ಸಂಪೂರ್ಣ ಅಭಿವೃದ್ಧಿ ಅಸಾಧ್ಯವಾಗಿದೆ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.

ಶಿರಹಟ್ಟಿ: ಸಂವಿಧಾನದ ೭೩ ಮತ್ತು ೭೪ನೇ ತಿದ್ದುಪಡಿ ಅನ್ವಯ ಹಳ್ಳಿಗಳಿಗೆ ಸಿಕ್ಕ ಅಧಿಕಾರ ಮತ್ತು ಧನಸಹಾಯ ದಾನವಲ್ಲ. ಭಾರತ ಹಳ್ಳಿಗಳ ದೇಶ, ಹಳ್ಳಿಗಳ ಸಮಗ್ರ ಅಭಿವೃದ್ಧಿಯಾಗದೇ ರಾಷ್ಟ್ರದ ಸಂಪೂರ್ಣ ಅಭಿವೃದ್ಧಿ ಅಸಾಧ್ಯವಾಗಿದೆ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು. ಜಿಲ್ಲಾ ಪಂಚಾಯತ್‌, ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಎಂಜಿನಿಯರಿಂಗ್‌ ಉಪ ವಿಭಾಗ ಶಿರಹಟ್ಟಿ ವತಿಯಿಂದ ೨೦೨೪-೨೫ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ₹ ೫ ಲಕ್ಷ ಹಾಗೂ ೨೦೨೫-೨೬ನೇ ಸಾಲಿನ ಬಯಲು ಸೀಮೆ ಪ್ರದೇಶಾಭಿವೃದ್ಧಿ ಯೋಜನೆಯಡಿ ₹ ೫ ಲಕ್ಷ ವೆಚ್ಚದಲ್ಲಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಅಭಿವೃದ್ಧಿ ಭರಾಟೆಯಲ್ಲಿ ಗ್ರಾಮಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದು, ಸಂವಿಧಾನ ನೀಡಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ರಾಷ್ಟ್ರಕ್ಕೆ ಅಭಿವೃದ್ಧಿ ವಿಷಯದಲ್ಲಿ ಪಾಠಮಾಡಬಲ್ಲ ಗುರುವಿನ ಸ್ಥಾನವನ್ನು ಹಳ್ಳಿಗಳು ಪಡೆಯಬೇಕು. ರಾಷ್ಟ್ರದ ಅಭಿವೃದ್ಧಿಗಾಗಿ ಯೋಜನೆ ರೂಪಿಸುವ ತಜ್ಞರಿಗೆ, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮಾರ್ಗದರ್ಶನ ಮಾಡುವ ಸ್ಥಾನದಲ್ಲಿ ನಿಲ್ಲಬೇಕು ಎಂದು ಹೇಳಿದರು.

ತಾಲೂಕಿನ ಹೊಸಳ್ಳಿ ಗ್ರಾಮ ಶಿರಹಟ್ಟಿ ತಾಲೂಕಿನ ಕಡೆಯ ಹಳ್ಳಿಯಾಗಿದ್ದು, ತೀರಾ ಹಿಂದುಳಿದ ಕುಗ್ರಾಮವಾಗಿದೆ. ಈ ಗ್ರಾಮಕ್ಕೆ ಯಾವುದೇ ಮೂಲಭೂತ ಸೌಲಭ್ಯ ಇಲ್ಲದಿರುವುದನ್ನು ಗಮನಿಸಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದರು. ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಿಸಿ ರಸ್ತೆ ಗುಣಮಟ್ಟದಿಂದ ಕೂಡಿರುವಂತೆ ಗುತ್ತಿಗೆದಾರರು ಜವಾಬ್ದಾರಿ ವಹಿಸಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.ಈ ಬಾರಿ ತಾಲೂಕಿನಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ರೈತರ ಬೆಳೆಗಳಷ್ಟೇ ಅಲ್ಲದೇ ಗ್ರಾಮೀಣ ಪ್ರದೇಶದ ರಸ್ತೆಗಳೆಲ್ಲವೂ ಹಾಳಾಗಿ ಹೋಗಿವೆ. ಈ ಕುರಿತಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಳಾದ ರಸ್ತೆಗಳ ಬಗ್ಗೆ ವರದಿ ನೀಡಿದ್ದಾರೆ. ಹಂತಹಂತವಾಗಿ ಅನುದಾನ ಬಂದ ಮೇಲೆ ಎಲ್ಲ ರಸ್ತೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಗ್ರಾಮಗಳು ಎಲ್ಲ ರೀತಿಯಿಂದಲೂ ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಸರ್ಕಾರ ನೀಡುವ ಅನುದಾನ ಮತ್ತು ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯತ್ತ ಎಲ್ಲರೂ ಗಮನ ಹರಿಸಬೇಕು. ಜನರ ನೆಮ್ಮದಿಯ ಜೀವನ ಸಾಗಿಸಲು ಉತ್ತಮ ವಾತಾವರಣ ನಿರ್ಮಾಣಕ್ಕೆ ಶ್ರಮಿಸುವುದಾಗಿ ತಿಳಿಸಿದರು. ಜನರು ಸರ್ಕಾರದ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಿ ಅದರ ಸಮಗ್ರ ಲಾಭವನ್ನು ಪಡೆದಾಗ ಮಾತ್ರ ಯೋಜನೆಗಳು ಸಾಕಾರವಾದಂತೆ. ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಹಾಳಾಗಿ ಗುಂಡಿಗಳು ನಿರ್ಮಾಣವಾಗಿವೆ. ಸಂಚಾರಕ್ಕೆ ಜನತೆ ಪರಿತಪಿಸುವಂತಾಗಿದೆ. ಜನಸಾಮಾನ್ಯರು ರಸ್ತೆ, ಕುಡಿಯುವ ನೀರು, ಶೌಚಾಲಯ, ಮೂಲ ಸೌಕರ್ಯಗಳನ್ನು ಕೇಳುತ್ತಾರೆ. ಸರ್ಕಾರ ಬಿಟ್ಟಿಭಾಗ್ಯಗಳಿಗೆ ಹಣ ಹೊಂದಿಸುವ ಸಲುವಾಗಿ ಸಮರ್ಪಕ ಅನುದಾನ ನೀಡದೇ ಇರುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂದರು.

ಈ ವೇಳೆ ತಿಪ್ಪಣ್ಣ ಕೊಂಚಿಗೇರಿ, ಫಕೀರೇಶ ರಟ್ಟಿಹಳ್ಳಿ, ಸಂದೇಶ ಗಾಣಗೇರ, ಶಂಕರ ಮರಾಠೆ, ಗುತ್ತಿಗೆದಾರ ಮಹೇಶ ಪವಾರ, ನಿಂಗಪ್ಪ ಮಾಚೇನಹಳ್ಳಿ, ಪ್ರಕಾಶ ರಾವುತರ, ರಾಮಣ್ಣ ಹರ್ಲಾಪೂರ, ರಾಘವೇಂದ್ರ ಹಾರುಗೇರಿ, ರವಿ ಯರೇಮನಿ, ಸತ್ಯಪ್ಪ ಹಾರುಗೇರಿ, ರಾಯಪ್ಪ ಉಪ್ಪಾರ, ಶರಣಪ್ಪ ನಿಟ್ಟಾಲಿ, ಮಹಾದೇವಪ್ಪ ಹಾರುಗೇರಿ, ಚನ್ನವೀರಪ್ಪ ಸ್ವಾಮಿ, ರಮೇಶ ನರ್ತಿ ಇದ್ದರು.

PREV

Recommended Stories

ಅಕ್ಕಿ ಅಕ್ರಮ ಹಗರಣ: ಸತ್ತವರಿಗೂ ಅನ್ನಭಾಗ್ಯ !
ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ 2 ರೈಸ್‌ಮಿಲ್‌ ಜಫ್ತಿ: ಕೇಸು