- ಬೀರಲಿಂಗೇಶ್ವರ ದೇಗುಲ ಆವರಣದಲ್ಲಿ ಅಂಬುಛೇದನ ಬಳಿಕ ಡಿಸಿ ಜಿ.ಎಂ.ಗಂಗಾಧರ ಸ್ವಾಮಿ ಅಭಿಮತ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಆಧುನಿಕತೆಯ ಭರಾಟೆ, ವಿಶೇಷವಾಗಿ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದಾಗಿ ನಮ್ಮ ಸಮಾಜ ಮತ್ತು ಸಂಸ್ಕೃತಿಗಳು ನಶಿಸಿ ಹೋಗುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ನಮ್ಮ ನೆಲದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ನಾಡಹಬ್ಬಗಳ ಆಚರಣೆ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಹೇಳಿದರು.
ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಸಂಜೆ ವಿಶ್ವ ಹಿಂದೂ ಪರಿಷತ್ ಮತ್ತು ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಯಿಂದ ಆಯೋಜಿಸಿದ್ದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಅಂಬು ಛೇದ ಮಾಡಿ ಅವರು ಮಾತನಾಡಿದರು. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಮಕ್ಕಳನ್ನು ಸದ್ಧರ್ಮ ಮತ್ತು ಸರಿ ದಾರಿಯಲ್ಲಿ ಕರೆದೊಯ್ಯಬೇಕಿದೆ. ಮಕ್ಕಳಿಗೆ ಉತ್ತಮ ಆಸ್ತಿ ಮಾಡಬೇಕಾದರೆ ಅವರನ್ನು ದುಶ್ಚಟಗಳಿಂದ ದೂರ ಇಡಬೇಕು. ದಾವಣಗೆರೆಯಲ್ಲಿರುವಷ್ಟು ಧರ್ಮಛತ್ರಗಳನ್ನು ಅಥವಾ ಇಲ್ಲಿರುವಷ್ಟು ಧರ್ಮದರ್ಶಿಗಳನ್ನು ಬೇರೆಲ್ಲೂ ನೋಡಿಲ್ಲ. ದಾವಣಗೆರೆ ನಿಜಕ್ಕೂ ದಾನ-ಧರ್ಮಗಳ ನೆಲೆಬೀಡು. ಈ ಜನರ ಸಂಸ್ಕೃತಿ ಮತ್ತು ನೆಲದ ಸೊಗಡೇ ವಿಶಿಷ್ಟವಾಗಿದೆ. ಅದಕ್ಕಾಗಿಯೇ ಇಲ್ಲಿ ಹಲವು ಮಠಾಧೀಶರು ಆಗಮಿಸಿ ನೆಲೆಸುತ್ತಾರೆ ಎಂದರು.ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ದಿಕ್ಸೂಚಿ ಭಾಷಣದಲ್ಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಸ್ಥಾಪನೆಗೊಂಡು ನೂರು ವರ್ಷ ತುಂಬಿದ ಹಿನ್ನೆಲೆ ದೇಶದಲ್ಲಿ ಪಂಚ ಪರಿವರ್ತನೆಗಳಿಗೆ ಕರೆ ನೀಡಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ನೂರನೇ ವರ್ಷದಲ್ಲಿ ದೇಶದ ಪುನರುತ್ಥಾನಕ್ಕಾಗಿ ನೀಡಿದ ಪಂಚ ಪರಿವರ್ತನೆಗಳ ಮಹತ್ವವನ್ನು ವಿವರಿಸಿ, ಕುಟುಂಬ ಪ್ರಬೋಧನೆ, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಸ್ವದೇಶಿ ಜಾಗೃತಿ ಮತ್ತು ನಾಗರಿಕ ಜವಾಬ್ದಾರಿಗಳೆಂಬ ಪಂಚ ಪರಿವರ್ತನೆಗಳನ್ನು ಸರಿಯಾಗಿ ನಿಭಾಯಿಸಿದಾಗ ಮಾತ್ರ ದೇಶವು ಮತ್ತೊಮ್ಮೆ ಜಗದ್ಗುರುವಿನ ಸ್ಥಾನಕ್ಕೆ ಏರಲು ಸಾಧ್ಯ ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಕೆಟ್ಟ ಗುಣಗಳನ್ನು, ಪಾಲಕರು ಮತ್ತು ಸಾರ್ವಜನಿಕರು ತಮ್ಮ ಮಕ್ಕಳಿಗೆ ಹಾಗೂ ಯುವಕರಿಗೆ ಸಂಸ್ಕೃತಿ ಮತ್ತು ಧರ್ಮದಲ್ಲಿರುವ ಉತ್ತಮ ಮೌಲ್ಯಗಳ ಬಗ್ಗೆ ಹೆಚ್ಚು ಒತ್ತು ನೀಡಿ ತಿಳಿಹೇಳಬೇಕು. ಇದರಿಂದ ಪೊಲೀಸ್ ಇಲಾಖೆಗೆ ಸವಾಲುಗಳು ಕಡಿಮೆಯಾಗುತ್ತವೆ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಇಲಾಖೆಗೆ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಸಮಿತಿ ಅಧ್ಯಕ್ಷ ಎಂ.ಆನಂದ್ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಮಾಜಿ ಸದಸ್ಯ ಆರ್.ಎಲ್.ಶಿವಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗಳೂರಿನ ಕಣ್ವಕುಪ್ಪೆ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಂಬುಛೇದನದ ನಂತರ ಬನ್ನಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು.
- - --3ಕೆಡಿವಿಜಿ33:
ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅಂಬುಛೇದನ ನೆರವೇರಿಸಿದರು.