ಪ್ರಕಾಶ್ ಎಂ. ಸುವರ್ಣ
ಮೂಲ್ಕಿ: ಮೂಲ್ಕಿ ಪರಿಸರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡ ಸಂದರ್ಭ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮೂಲ್ಕಿ ಜಂಕ್ಷನ್ ಬಳಿ ನಿರಂತರವಾಗಿ ಅಪಘಾತ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂಲ್ಕಿ ಬಸ್ ನಿಲ್ದಾಣದ ಬಳಿ ಸುಮಾರು 500 ಮೀಟರ್ ಅಂತರದಲ್ಲಿ ಮೂಲ್ಕಿಯ ವಿಜಯ ಸನ್ನಿಧಿ ಬಳಿ, ಮೂಲ್ಕಿ ಬಸ್ಸು ನಿಲ್ದಾಣದ ಬಳಿ ಹಾಗೂ ಮೂಲ್ಕಿಯ ಬಪ್ಪನಾಡು ದೇವಳದ ಬಳಿ ಸೇರಿದಂತೆ ಒಟ್ಟು ಮೂರು ಕಡೆಗಳಲ್ಲಿ ಕ್ರಾಸಿಂಗ್ ನೀಡಲಾಗಿದೆ. ಇದರಿಂದಾಗಿ ಮೂರು ಕಡೆಗಳಲ್ಲಿ ವಾಹನಗಳು ಒಳ ರಸ್ತೆಯಿಂದ ಹೆದ್ದಾರಿಗೆ ತಿರುವು ಪಡೆಯುವ ಸಂದರ್ಭದಲ್ಲಿ ಹೆಚ್ಚಿನ ಅಪಘಾತಗಳು ನಡೆಯುತ್ತಿವೆ.ಹೆದ್ದಾರಿ ಚತುಷ್ಪಥಗೊಂಡ ಬಳಿ ಈ ವರೆಗೆ ನಡೆದ ಅಪಘಾತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವುಗಳೂ ಸಂಭವಿಸಿವೆ. ಎಲ್ಲೆಲ್ಲಿ ಸಮಸ್ಯೆ?: ಮೂಡುಬಿದಿರೆ, ಕಟೀಲು, ಕಿನ್ನಿಗೋಳಿ ಕಡೆಯಿಂದ ಬರುವ ವಾಹನಗಳು ಮೂಲ್ಕಿಯ ವಿಜಯ ಸನ್ನಿಧಿ ಬಳಿ ರಾಷ್ಟ್ರೀಯ ಹೆದ್ದಾರಿಗೆ ತಿರುವು ಪಡೆಯುವ ಸಂದರ್ಭದಲ್ಲಿ ಹೆಚ್ಚಿನ ಅಪಘಾತಗಳು ನಡೆದಿವೆ. ಮೂಲ್ಕಿ ಜಂಕ್ಷನ್‌ನಲ್ಲಿ ಯಾವುದೇ ಅಂಡರ್ ಪಾಸ್ ನೀಡದ ಕಾರಣ ಜನರು ರಸ್ತೆ ದಾಟುವ ಸಂದರ್ಭದಲ್ಲಿ ಕೂಡ ಹೆಚ್ಚಿನ ಅಪಘಾತಗಳು ನಡೆದಿವೆ. ಅವೈಜ್ಞಾನಿಕ ಕಾಮಗಾರಿ ಹಾಗೂ ಅರ್ಧಂಬರ್ಧ ಸರ್ವಿಸ್ ರಸ್ತೆ ನಿರ್ಮಾಣದಿಂದಾಗಿ ಮಳೆಗಾಲದ ಸಂದರ್ಭದಲ್ಲಿ ರಸ್ತೆಯಲ್ಲಿ ನೀರು ಹರಿದು ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.ಮೂಲ್ಕಿಯ ಕೊಕ್ಕರ್ ಕಲ್ ಬಳಿ ರಸ್ತೆ ತುಂಬಾ ಇಳಿಜಾರು ಇರುವುದರಿಂದ ಮಳೆ ನೀರು ರಸ್ತೆಯಲ್ಲಿ ನಿಂತು ಹೆಚ್ಚಿನ ಅಪಘಾತಗಳು ಸಂಭವಿಸಿವೆ. ಹೆಜಮಾಡಿಯ ಟೋಲ್ ಗೇಟ್‌ನಲ್ಲಿ ಟೋಲ್ ನೀಡಿ ಸಂಚರಿಸುವ ವಾಹನಗಳಿಗೆ ಮೂಲ್ಕಿಯಲ್ಲಿ ಕೇವಲ 500 ಮೀಟರ್ ಅಂತರದಲ್ಲಿ ಮೂರು ಕಡೆಗಳಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿರುವುದರಿಂದ ಹೆಚ್ಚು ವೇಗವಾಗಿ ವಾಹನ ಸಂಚರಿಸುವಂತಿಲ್ಲ.ಸಾಸ್ತಾನದಲ್ಲಿ ಅಲ್ಲಿನ ಪರಿಸರದ ಗ್ರಾಮಗಳ ವಾಸಿಗಳ ವಾಹನಗಳಿಗೆ ಟೋಲ್ ವಿನಾಯಿತಿಯಿದೆ. ಆದರೆ ಹೆಜಮಾಡಿ ಟೋಲ್ ನಲ್ಲಿ ಕೇವಲ 1 ಕಿ.ಮೀ.ಅಂತರದಲ್ಲಿರುವ ಮೂಲ್ಕಿ ಪರಿಸರದವರಿಗೆ ಯಾವುದೇ ವಿನಾಯಿತಿ ನೀಡುತ್ತಿಲ್ಲ.ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಬಗ್ಗೆ ಹಲವಾರು ಬಾರಿ ಮೂಲ್ಕಿ ನಗರ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದಿದ್ದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಭೆಯಲ್ಲಿ ಭಾಗವಹಿಸಲು ಪತ್ರ ನೀಡಿದರೂ ಸ್ಪಂದಿಸುತ್ತಿಲ್ಲ.ಹೆದ್ದಾರಿ ಸಮಸ್ಯೆ ಬಗ್ಗೆ ಹಲವಾರು ಬಾರಿ ಪತ್ರಿಕೆಗಳಲ್ಲಿ ವರದಿ ಬಂದಿದ್ದರೂ ಹೆದ್ದಾರಿ ಪ್ರಾಧಿಕಾರದವರು ಗಂಭೀರವಾಗಿ ಪರಿಗಣಿಸಿದಂತಿಲ್ಲ.
ಮೂಲ್ಕಿಯಲ್ಲಿ ಅಂಡರ್ ಪಾಸ್ ಅಥವಾ ಓವರ್ ಬ್ರಿಜ್ ಹಾಗೂ ಈಗ ಮೂರು ಕಡೆಯಲ್ಲಿ ನೀಡಿರುವ ಕ್ರಾಸಿಂಗ್ ನ ಬದಲಿಗೆ ಒಂದೇ ಕಡೆ ಕ್ರಾಸಿಂಗ್ ನೀಡಿ ಹೆಚ್ಚಿನ ಅನಾಹುತ ತಪ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.ಮೂಲ್ಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತರಲಾಗಿದೆ. ಸಮಸ್ಯೆ ಬಗ್ಗೆ ಚರ್ಚಿಸಲು ಮೂಲ್ಕಿ ನಗರ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪತ್ರ ನೀಡಿದರೂ ಭಾಗವಹಿಸುತ್ತಿಲ್ಲ ಹಾಗೂ ಸ್ಪಂದಿಸುತ್ತಿಲ್ಲ.-ಮಧುಕರ್ ಕೆ., ಮುಖ್ಯಾಧಿಕಾರಿ ಮೂಲ್ಕಿ ನ.ಪಂ.
ಮೂಲ್ಕಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮೂಲ್ಕಿಯ ಜಂಕ್ಷನ್‌ನಲ್ಲಿ ಹಲವಾರು ಅಪಘಾತಗಳು ನಡೆದು ಸಾವುಗಳೂ ಸಂಭವಿಸಿವೆ. ಹೆದ್ದಾರಿ ಸಮಸ್ಯೆ ಬಗ್ಗೆ ಸಂಸದರ ಗಮನಕ್ಕೆ ತರಲಾಗಿದೆ. ಕೂಡಲೇ ಸರ್ವಿಸ್ ರಸ್ತೆ ನಿರ್ಮಾಣ ಹಾಗೂ ಸಮಸ್ಯೆ ಪರಿಹರಿಸುವ ಬಗ್ಗೆ ಸಂಸದರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ್ದಾರೆ.-ಸತೀಶ್ ಅಂಚನ್, ಮೂಲ್ಕಿ ನ.ಪಂ. ಅಧ್ಯಕ್ಷ.