ಕನ್ನಡಪ್ರಭ ವಾರ್ತೆ ತುಮಕೂರು ಏಪ್ರಿಲ್ 24 ರಿಂದ 3 ದಿನಗಳ ಕಾಲ ತುಮಕೂರಿನಲ್ಲಿ 20ವರ್ಷದೊಳಗಿನವರ 24ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಸ್ಪರ್ಧೆಗಳು ನಡೆಯಲಿವೆ ಎಂದು ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ಕ್ರೀಡಾಕೂಟ ಕುರಿತು ಬುಧವಾರ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸುದ್ಧಿಗೋಷ್ಠಿ ನಡೆಸಿದ ಅವರು, ಕರ್ನಾಟಕದಲ್ಲಿ ಅದರಲ್ಲೂ ತುಮಕೂರಿನಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟ ನಡೆಯುತ್ತಿದ್ದು, ಇದು ಜಿಲ್ಲೆಗೆ ಹೆಮ್ಮೆಯ ವಿಷಯ ಎಂದು ಹೇಳಿದರು. ಹೊಸದಾಗಿ ಅಭಿವೃದ್ಧಿಪಡಿಸಿರುವ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ವಿಶ್ವದರ್ಜೆಯ ಸಿಂಥೆಟಿಕ್ ಟ್ರ್ಯಾಕ್ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದ್ದು, ರಾಷ್ಟ್ರೀಯ ಮಟ್ಟದ ಇಂತಹ ಚಾಂಪಿಯನ್ ಶಿಪ್ ಕ್ರೀಡಾಕೂಟ ನಡೆಯುತ್ತಿದ್ದು, ತುಮಕೂರು ಈಗ ವಿಶ್ವದ ಗಮನ ಸೆಳೆಯುತ್ತಿದೆ ಎಂದರು. ರಾಷ್ಟ್ರದ ಮೂಲೆ ಮೂಲೆಯಿಂದ 28 ರಾಜ್ಯಗಳಿಂದಲೂ ಬಾಲಕ ಬಾಲಕಿಯರು ಸೇರಿ ಸುಮಾರು 1500 ಕ್ರೀಡಾಪಟುಗಳು ತಮ್ಮ ರಾಜ್ಯವನ್ನು ಪ್ರತಿನಿಧಿಸಿ 40 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಜೆಎಸ್‌ಡಬ್ಲ್ಯು ಸ್ಪೋಟ್ಸ್ ಮತ್ತು ರಿಲೆಯನ್ಸ್ ಫೌಂಡೇಶನ್ ತಂಡಗಳು ಕರ್ನಾಟಕದ ಬಲಿಷ್ಠ ತಂಡಗಳಾಗಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಪ್ರತ್ಯೇಕವಾಗಿ ಪ್ರತಿನಿಧಿಸುತ್ತಿದ್ದು, ಆಗಸ್ಟ್ 5ರಿಂದ 9ರವರೆಗೆ ಅಮೆರಿಕಾದ ಒರೆಗಾನ್ ಸ್ಟೇಟ್‌ನಲ್ಲಿ ನಡೆಯುವ ವಿಶ್ವ ಚಾಂಪಿಯನ್ ಶಿಪ್ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಭಾರತ ಪ್ರತಿನಿಧಿಸುವ ಕ್ರೀಡಾಪಟುಗಳನ್ನು ಈ ಕ್ರೀಡಾಕೂಟದಲ್ಲಿ ಆಯ್ಕೆ ಮಾಡುವ ಅತ್ಯಂತ ಪ್ರಮುಖ ಕ್ರೀಡಾಕೂಟ ಇದಾಗಿದೆ ಎಂದು ಅವರು ತಿಳಿಸಿದರು. ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಮುಂಜಾನೆಯಿಂದ ಬೆಳಿಗ್ಗೆ 10ಗಂಟೆಯವರೆಗೆ ಹಾಗೂ ಸಂಜೆ ಹೊನಲು ಬೆಳಕಿನಲ್ಲಿ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಮಧ್ಯಾಹ್ನ ತೀವ್ರ ಬಿಸಿಲಿನ ಬೇಗೆ ಇರುವ ಕಾರಣ ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಭಾರತದ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದರಿಂದ ಸರಿಯಾದ ತೀರ್ಪುಗಳನ್ನು ನೀಡಲು ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾದ ಅಧಿಕಾರಿಗಳು ಹಾಗೂ ತಾಂತ್ರಿಕ ವರ್ಗದವರು ಕ್ರೀಡಾಕೂಟಕ್ಕೆ ಆಗಮಿಸಲಿದ್ದು, ಫೋಟೋ ಫಿನೀಷ್ ರೀತಿಯ ತಾಂತ್ರಿಕ ಉಪಕರಣಗಳನ್ನು ಬಳಸಲಾಗುತ್ತಿದೆ ಎಂದು ಅವರು ವಿವರಿಸಿದರು. ಅಥ್ಲೆಟಿಕ್ ಕೂಟದಲ್ಲಿ ಯಾವುದೇ ತೊಂದರೆ ಅಥವಾ ಅನುಮಾನಗಳಿಲ್ಲದಂತೆ ನಡೆಸುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಉದ್ದೀಪನ ಪರೀಕ್ಷೆಗೊಳಪಡಿಸುವ ಡೋಬ್ ಟೆಸ್ಟ್ ಕೂಡ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.24ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಪ್ರತಿಷ್ಠಿತ ಕ್ರೀಡಾಕೂಟವನ್ನು ತುಮಕೂರಿನಲ್ಲಿ ನಡೆಸಲು ಅವಕಾಶ ಕಲ್ಪಿಸಿದ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾದ ಮುಖ್ಯಸ್ಥರಿಗೆ ಧನ್ಯವಾದ ಅರ್ಪಿಸಿದ ಅವರು, ತುಮಕೂರಿನಲ್ಲಿ ಇಂತಹ ಪ್ರತಿಷ್ಠಿತ ಕ್ರೀಡಾಕೂಟ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಜಿಲ್ಲೆಯ ಯುವ ಪ್ರತಿಭೆಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ. ಅಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್, ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ಸತ್ಯನಾರಾಯಣ್ ಹಾಗೂ ಸಂಸ್ಥೆಯ ಪ್ರತಿನಿಧಿ ರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.