ಇಂತಹ ಕಾರ‍್ಯಕ್ರಮಗಳ ಮೂಲಕ ನಮ್ಮ ಉಪ್ಪಿನಂಗಡಿ ದೇಶ ಮಟ್ಟದಲ್ಲಿ ಗುರುತಿಸಲ್ಪಡುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಲಿದ್ದು, ಅವರಿಗೆ ಆತಿಥ್ಯ ಮತ್ತು ಇನ್ನಿತರ ಸೌಲಭ್ಯಗಳನ್ನು ಒದಗಿಸುವರೇ ಊರಿನ ಎಲ್ಲರೂ ಒಗ್ಗೂಡಿ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಸಹಕಾರಿಗಳಾಗಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ರಾಷ್ಟ್ರಮಟ್ಟದ ಕ್ರೀಡಾಕೂಟ ಕ್ರಾಸ್ ಕಂಟ್ರಿ ರೇಸ್ (ಗುಡ್ಡಗಾಡು ಓಟ) ಸ್ಪರ್ಧೆಯು ಗ್ರಾಮೀಣ ಪ್ರದೇಶವಾದ ಉಪ್ಪಿನಂಗಡಿಯಲ್ಲಿ ನಡೆಯಲಿದ್ದು, ಇತಿಹಾಸದಲ್ಲೇ ಮೊದಲೆಂಬಂತೆ ಸ್ಪರ್ಧೆಯ ಆಯೋಜನೆಯ ಅವಕಾಶವು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಲಭಿಸಿದೆ. ಈ ಸ್ಪರ್ಧಾಕೂಟವನ್ನು ಊರಿಗೆ ಹೆಗ್ಗಳಿಕೆ ತರುವಂತೆ ನಡೆಸಬೇಕಾಗಿದೆ ಎಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗುವ ಕ್ರೀಡಾಕೂಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿರುವ ನಮ್ಮ ಸರ್ಕಾರಿ ಕಾಲೇಜಿಗೆ ರಾಷ್ಟ್ರಮಟ್ಟದ ಕ್ರೀಡೆ ಆಯೋಜನೆ ಮಾಡಲು ಅವಕಾಶ ಲಭಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಇಂತಹ ಕಾರ‍್ಯಕ್ರಮಗಳ ಮೂಲಕ ನಮ್ಮ ಉಪ್ಪಿನಂಗಡಿ ದೇಶ ಮಟ್ಟದಲ್ಲಿ ಗುರುತಿಸಲ್ಪಡುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಲಿದ್ದು, ಅವರಿಗೆ ಆತಿಥ್ಯ ಮತ್ತು ಇನ್ನಿತರ ಸೌಲಭ್ಯಗಳನ್ನು ಒದಗಿಸುವರೇ ಊರಿನ ಎಲ್ಲರೂ ಒಗ್ಗೂಡಿ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಸಹಕಾರಿಗಳಾಗಬೇಕು ಎಂದರು.ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ, ೧೦ ಕಿ.ಲೋ. ಮೀಟರ್ ದೂರದ ಕ್ರಾಸ್ ಕಂಟ್ರಿ ರೇಸ್ ನಡೆಯಲಿದ್ದು, ದೇಶದಾದ್ಯಂತ ೧೫೦ ವಿಶ್ವವಿದ್ಯಾನಿಲಯಗಳಿಂದ ಕನಿಷ್ಠ ೧೨೦೦ ಮಂದಿ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ೩೦ ಮಂದಿ ಟೆಕ್ನಿಕಲ್ ಅಧಿಕಾರಿಗಳು ಬರಲಿದ್ದಾರೆ. ದೇಶದಲ್ಲೇ ಪ್ರಥಮ ಬಾರಿಗೆ ಸ್ಪರ್ಧೆಯ ದಾಖಲೆಗಳನ್ನು ಚಿಪ್ ಆಧಾರಿತವಾಗಿಕಂಪ್ಯೂಟರೀಕೃತವಾಗಿ ದಾಖಲು ಮಾಡಲಾಗುವುದು ಎಂದು ತಿಳಿಸಿದರು.ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಮಾತನಾಡಿದರು.ಸಭೆಯಲ್ಲಿ ಸೇರಿರುವ ಊರ ನಾಗರೀಕರನ್ನು ಒಳಗೊಂಡಂತೆ ಸಮಿತಿ ರಚಿಸಲಾಗಿರುವ ಬಗ್ಗೆ ಡಾ. ರಾಜಾರಾಮ್ ಕೆ.ಬಿ. ಸಭೆಯಲ್ಲಿ ಪ್ರಸ್ತಾಪಿಸಿದರು. ಸಭೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಸದಸ್ಯರಾದ ಸೋಮನಾಥ, ಕೃಷ್ಣ ರಾವ್ ಅರ್ತಿಲ, ದೇವಿದಾಸ ರೈ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅಶ್ರಫ್ ಬಸ್ತಿಕ್ಕಾರ್, ಜಾನ್ ಕೆನ್ಯೂಟ್, ವಿನ್ಸೆಂಟ್ ಫರ್ನಾಂಡಿಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಯು.ಟಿ. ತೌಸೀಫ್, ಅಬ್ದುಲ್ ರಶೀದ್, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳಾದ ಅಜೀಜ್ ಬಸ್ತಿಕ್ಕಾರ್, ಜಯಂತ ಪೊರೋಳಿ, ಇಸ್ಮಾಯಿಲ್ ಇಕ್ಬಾಲ್, ಚಂದಪ್ಪ ಮೂಲ್ಯ, ಆದಂ ಕೊಪ್ಪಳ, ಅನಿ ಮೆನೇಜಸ್, ಅನುರಾಧಾ ಶೆಟ್ಟಿ, ಕೈಲಾರ್ ರಾಜ್‌ಗೋಪಾಲ್ ಭಟ್, ಶರೀಕ್ ಅರಫ, ಯು. ರಾಮ, ನಝೀರ್ ಮಠ ಮತ್ತಿತರರು ಉಪಸ್ಥಿತರಿದ್ದರು.ಕಾಲೇಜಿನ ಪ್ರಾಚಾರ್ಯ ಶೇಖರ್ ಕನ್ನಡ ಸ್ವಾಗತಿಸಿದರು. ಉಪನ್ಯಾಸಕ ಬಾಲಾಜಿ ವಂದಿಸಿದರು. ಪ್ರಮೋದ್ ಕಾರ‍್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.