ಜನವರಿ 29ರಂದು ರಾಷ್ಟ್ರಮಟ್ಟದ ಹಿಂದ್ ಕೇಸರಿ ಖಾಲಿ ಗಾಡಾ ಎತ್ತಿನ ಷರತ್ತು

KannadaprabhaNewsNetwork |  
Published : Oct 31, 2026, 02:15 AM IST
ಸಭೆಯಲ್ಲಿ ಕ್ರೀಡಾ ಆಯೋಜಕ ಹಾಗೂ ಸಮಾಜ ಸೇವಕ ರಾಜು ಮಾರುತಿ ಪೇಜೊಳ್ಳಿ ಮಾತನಾಡಿದರು. | Kannada Prabha

ಸಾರಾಂಶ

ಹಳಿಯಾಳ ಸೇರಿದಂತೆ ಅಳ್ನಾವರ ಮತ್ತು ಅಕ್ಕಪಕ್ಕದ ತಾಲೂಕುಗಳಲ್ಲಿ ಹೈನೋದ್ಯಮ ಹಾಗೂ ಪಶು ಸಂಗೋಪನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎತ್ತಿನ ಷರತ್ತನ್ನು ಆಯೋಜಿಸಲಾಗುತ್ತಿದೆ.

ಹಳಿಯಾಳ: ರೈತರ ಸಹಪಾಠಿಯಾದ ಎತ್ತುಗಳ ಸಾಮರ್ಥ್ಯವನ್ನು ಪ್ರದರ್ಶಿಸುವಂಥ ರಾಷ್ಟ್ರಮಟ್ಟದ ಹಿಂದ್ ಕೇಸರಿ ಖಾಲಿ ಗಾಡಾ ಎತ್ತಿನ ಷರತ್ತ(ಸ್ಪರ್ಧೆ)ನ್ನು 2027ರ ಜ. 29ರಂದು ತಾಲೂಕಿನ ದುಸಗಿ ಗ್ರಾಮದಲ್ಲಿ ಆಯೋಜಿಸಲಾಗುವುದು ಎಂದು ಕ್ರೀಡಾ ಆಯೋಜಕ, ಉದ್ಯಮಿ ರಾಜು ಮಾರುತಿ ಪೇಜೊಳ್ಳಿ ಘೋಷಿಸಿದರು.

ಶುಕ್ರವಾರ ಪಟ್ಟಣದ ಪುರಭವನದಲ್ಲಿ ಹಳಿಯಾಳ ಮತ್ತು ಅಳ್ನಾವರ ತಾಲೂಕಿನ ರೈತರ ಸಹಕಾರದಲ್ಲಿ ಆಯೋಜಿಸಲಾಗುತ್ತಿರುವ ಖಾಲಿ ಗಾಡಾ ಎತ್ತಿನ ಷರತ್ತು ಆಯೋಜನೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಹಳಿಯಾಳ ಸೇರಿದಂತೆ ಅಳ್ನಾವರ ಮತ್ತು ಅಕ್ಕಪಕ್ಕದ ತಾಲೂಕುಗಳಲ್ಲಿ ಹೈನೋದ್ಯಮ ಹಾಗೂ ಪಶು ಸಂಗೋಪನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎತ್ತಿನ ಷರತ್ತನ್ನು ಆಯೋಜಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಇದೊಂದು ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಯಾಗಿದ್ದರೂ, ನಾವು ಆಯೋಜಿಸುವ ಷರತ್ತು ವಿಭಿನ್ನವಾಗಿರಲಿದೆ. ಭಾಗವಹಿಸುವ ಎತ್ತುಗಳಿಗೂ ಹಾಗೂ ವಿಜೇತರಿಗೂ ಮಹೀಂದ್ರಾ ಸ್ಕಾರ್ಪಿಯೋ, ಬೊಲೆರೋ, ಸೆಲೆರಿಯೋ ಮತ್ತು ಅಲ್ಟೋ ಕಾರುಗಳು, ರಾಯಲ್ ಎನ್‌ಫೀಲ್ಡ್ ಬೈಕಗಳಂತಹ ಆಕರ್ಷಕ ಬಹುಮಾನ ನೀಡಲಾಗುವುದೆಂದರು.

ಶ್ರೇಷ್ಠ ತಳಿಯ ಎತ್ತುಗಳ ಆಗಮನ: ಗ್ರಾಮಾಂತರ ಭಾಗದ ಜನರಿಗಾಗಿ ದೇಶದ ವಿಭಿನ್ನ ತಳಿಯ, ಅಂದಾಜು ಒಂದು ಕೋಟಿಯಿಂದ ನಾಲ್ಕು ಕೋಟಿ ರು. ವರೆಗೆ ಬೆಲೆಬಾಳುವ ರಾಸುಗಳನ್ನು(ಎತ್ತುಗಳನ್ನು) ಷರತ್ತಿಗೆ ಬರಲಿವೆ. ರಾಜ್ಯದಲ್ಲಿನ ಬಲಿಷ್ಠ ಎತ್ತಿನ ತಳಿಗಳಾದ ಹಳ್ಳಿಕಾರ್, ಖಿಲಾರಿ ಮತ್ತು ಅಮೃತಮಹಲ್ ಹೋರಿಗಳು ಸಹ ಷರತ್ತಿನಲ್ಲಿ ಪಾಲ್ಗೊಳ್ಳಲಿವೆ.

ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ನಂಬರ್ ಒನ್ ಪ್ರಶಸ್ತಿ ಪಡೆದ ಎತ್ತುಗಳು ಭಾಗವಹಿಸಲಿವೆ. ರಾಷ್ಟ್ರಮಟ್ಟದ ಎತ್ತಿನ ಷರತ್ತನ್ನು ಯಶಸ್ವಿಗೊಳಿಸಲು ಹಳಿಯಾಳ ಮತ್ತು ಅಳ್ನಾವರ ತಾಲೂಕಿನ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.ಈ ವೇಳೆ ಹಳಿಯಾಳದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಕುಸ್ತಿ ದಂಗಲ್ ಆಯೋಜನೆಗೆ ಸಹಕರಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಅಳ್ನಾವರದ ಯುವ ಉದ್ಯಮಿ ಲಕನ್ ಬರಗುಂಡಿ, ಯಶ್ ಕಲಾಲ, ಪ್ರಶಾಂತ ಪಾಳೇಕರ, ನಾರಾಯಣ ನಾಕಾಡಿ, ರಾಘವೇಂದ್ರ ಸಾಂಬ್ರೇಕರ, ದಾವಲಸಾಬ್ ಹುಲಕೊಪ್ಪ, ತಾಲೂಕು ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ