ರಾಷ್ಟ್ರಮಟ್ಟದ ‘ಸಾಗರ ನೌಕಾಯಾನ ದಂಡಯಾತ್ರೆ’ಗೆ ಚಾಲನೆ

KannadaprabhaNewsNetwork |  
Published : Oct 08, 2025, 01:01 AM IST
07ದಂಡಯಾತ್ರೆಉದ್ಯಾವರದಲ್ಲಿ ಸಾಗರ ನೌಕಾಯಾನ ದಂಡಯಾತ್ರೆಗೆ ಚಾಲನೆ | Kannada Prabha

ಸಾರಾಂಶ

‘ಯುವ ನಾವಿಕರು - ಬಲಿಷ್ಠ ಸಮುದ್ರ ರಕ್ಷಕರು’ ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ದೇಶದ 16 ಎನ್‌ಸಿಸಿ ನಿರ್ದೇಶನಾಲಯಗಳ ಕೆಡೆಟ್‌ಗಳು ಸ್ಪರ್ಧಿಸಲಿದ್ದಾರೆ.

ದೇಶದ 16 ತಂಡಗಳ 72 ಎನ್‌ಸಿಸಿ ಕೆಡೆಟ್‌ ಭಾಗಿ । 219 ಕಿ.ಮೀ. ಸಮುದ್ರ ಯಾನ ಸ್ಪರ್ಧೆ । ಅ.15ಕ್ಕೆ ಮುಕ್ತಾಯಕನ್ನಡಪ್ರಭ ವಾರ್ತೆ ಉದ್ಯಾವರಕರ್ನಾಟಕ- ಗೋವಾದ ನೌಕಾಪಡೆಯ ಎನ್‌ಸಿಸಿ ನಿರ್ದೇಶನಾಲಯದ ವತಿಯಿಂದ ರಾಷ್ಟ್ರಮಟ್ಟದ ಸಾಗರ ನೌಕಾಯಾನ ದಂಡಯಾತ್ರೆ ಸ್ಪರ್ಧೆಗೆ ಮಂಗಳವಾರ ಇಲ್ಲಿನ ಉದ್ಯಾವರ ನದಿಯ ಬೋಟ್ ಕ್ಯಾಂಪ್‌ನಲ್ಲಿ ಚಾಲನೆ ನೀಡಲಾಯಿತು.

‘ಯುವ ನಾವಿಕರು - ಬಲಿಷ್ಠ ಸಮುದ್ರ ರಕ್ಷಕರು’ ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ದೇಶದ 16 ಎನ್‌ಸಿಸಿ ನಿರ್ದೇಶನಾಲಯಗಳ ಕೆಡೆಟ್‌ಗಳು ಸ್ಪರ್ಧಿಸಲಿದ್ದಾರೆ. ಉದ್ಯಾವರ ಕ್ಯಾಂಪ್‌ನಿಂದ ಪ್ರಶಾಂತವಾಗಿ ಹರಿಯುವ ಪಾಪನಾಶಿನಿ ನದಿಯಲ್ಲಿ ಹೊರಟು, ಮಲ್ಪೆ ಬಂದರಿನಲ್ಲಿ ಅಲೆಗಳ ಅಬ್ಬರದ ಅರಬಿ ಸಮುದ್ರ ಸೇರಿ, ಅಲ್ಲಿಂದ ಕಾಪು, ಪಡುಬಿದ್ರಿ, ದ.ಕ. ಜಿಲ್ಲೆಯ ಮೂಲ್ಕಿ, ಸುರತ್ಕಲ್‌ ಮೂಲಕ ನವಮಂಗಳೂರುವ ಬಂದರು ತಲುಪಿ, ಅಲ್ಲಿಂದ ಮತ್ತದೇ ಮಾರ್ಗವಾಗಿ ಉದ್ಯಾವರ ಕ್ಯಾಂಪ್ ವರೆಗೆ ಸುಮಾರು 219 ಕಿ.ಮೀ.ಯನ್ನು ಈ ಸ್ಪರ್ಧಿಗಳು ಕ್ರಮಿಸಲಿದ್ದಾರೆ.ಈ ದಂಡಯಾತ್ರೆಯಲ್ಲಿ 72 ಕೆಡೆಟ್‌ಗಳು ಭಾಗವಹಿಸುತ್ತಿದ್ದಾರೆ. 27 ಅಡಿ ಉದ್ದದ ಡಿಕೆ ವೇಲರ್ ಕ್ಲಾಸ್ ದೋಣಿಗಳಲ್ಲಿ ಸ್ಪರ್ಧೆ ನಡೆಯುತ್ತದೆ. ಪ್ರತಿ ದೋಣಿಯಲ್ಲಿ 4 ಹುಡುಗರು ಮತ್ತು 2 ಹುಡುಗಿಯರು ಸೇರಿ 6 ಕೆಡೆಟ್‌ಗಳಿರುತ್ತಾರೆ.ಈ ಸಾಹಸಮಯ ಸ್ಪರ್ಧೆಯು ಮಂಗಳವಾರ ಆರಂಭವಾಗಿದ್ದು, ಅ.15ರಂದು ಕೊನೆಗೊಳ್ಳುತ್ತದೆ. ಮಂಗಳವಾರ ಈ ಸ್ಪರ್ಧೆಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಚಾಲನೆ ನೀಡಿ ಶುಭ ಹಾರೈಸಿದರು. ಕ್ಯಾಂಪ್ ಕಮಾಂಡರ್ ಅಶ್ವಿನ್ ಎಂ. ರಾವ್ ಅವರು ಅಧಿಕೃತ ಆರಂಭವನ್ನು ಘೋಷಿಸಿದರು.ಕಾರ್ಯಕ್ರಮದಲ್ಲಿ ಶಿಬಿರದ ಸಹಾಯಕ ಮುಖ್ಯಸ್ಥೆ ಸಿಡಿಆರ್ ಲಿಬಿನ್ ಜಾನ್ಸನ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂದ್ಯಾ ಎನ್.ಎಂ., ಸಿಡಿಎಫ್ ನಿರ್ದೇಶಕಿ ಡಾ. ವಿಜಯೇಂದ್ರ ರಾವ್, ಉಡುಪಿ ಶಾರದಾ ವಸತಿ ಶಾಲೆಯ ಪ್ರಾಂಶುಪಾಲ ಕೇಶವ್ ಭಾಗವಹಿಸಿದ್ದರು.ಈ ದಂಡಯಾತ್ರೆಗೆ ಪೂರ್ವಭಾವಿಯಾಗಿ ಶಾರದಾ ವಸತಿ ಶಾಲೆಯಲ್ಲಿ ನಡೆದ ಶಿಬಿರದಲ್ಲಿ ಕೆಡೆಟ್‌ಗಳಿಗೆ ಉಡುಪಿ ಜಿಲ್ಲೆಯ ಸಂಸ್ಕೃತಿ ಮತ್ತು ಪರಂಪರೆಯ ಪರಿಚಯಕ್ಕಾಗಿ ಪ್ರವಾಸ, ಚಾರಣ, ಬೀಚ್ ಕ್ಲೀನ್‌ ಅಭಿಯಾನ, ಸ್ಮಾರಕಗಳ ಸ್ವಚ್ಛತೆ, ಮಾದಕವಸ್ತು ವಿರುದ್ಧ ಜಾಗೃತಿ ರೂಟ್ ಮಾರ್ಚ್, ಆರೋಗ್ಯ ಜಾಗೃತಿ ಕಾರ್ಯಾಗಾರ, ಸೇನೆ, ನೌಕಾಪಡೆ ಮತ್ತು ವಾಯುಪಡೆ ನೇಮಕಾತಿ ಅಧಿಕಾರಿಗಳ ಶೈಕ್ಷಣಿಕ ಕಾರ್ಯಾಗಾರಗಳನ್ನು ನಡೆಸಲಾಗಿತ್ತು.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ