ಹಳ್ಳಿಯಲ್ಲಿ ಅರಳಿದ ಹರ್ಬಲ್ಸ್ ಸಂಸ್ಥೆಗೆ ರಾಷ್ಟ್ರ ಮಟ್ಟದಲ್ಲಿ ಮನ್ನಣೆ

KannadaprabhaNewsNetwork |  
Published : Sep 19, 2024, 01:52 AM IST
111 | Kannada Prabha

ಸಾರಾಂಶ

ಕಳೆದ ೨೦೨೧ರ ನವೆಂಬರ್‌ನಲ್ಲಿ ಪೇಟೆಂಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕ್ರಿಯೆ ಅನೇಕ ಹಂತಗಳನ್ನು ದಾಟಿ, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರದ ಅನುಮೋದನೆ ಪಡೆದು, ಕೇಂದ್ರ ಸರ್ಕಾರದಿಂದ ಸೆ.೧೩ರಂದು ಅಧಿಕೃತವಾಗಿ ಪೇಟೆಂಟ್ ಪಡೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿಯೊಂದರಲ್ಲಿ ಬೆಳೆದು ಬಂದಿರುವ ಹರ್ಬಲ್ಸ್ (ಗಿಡಮೂಲಿಕೆಗಳು) ಸಂಸ್ಥೆಯೊಂದಕ್ಕೆ ಇದೀಗ ರಾಷ್ಟ್ರ ಮಟ್ಟದ ಮನ್ನಣೆ ದೊರಕಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟು ಊರಾದ ಕೆದಿಲ ಎಂಬ ಹಳ್ಳಿ ಪ್ರದೇಶದಲ್ಲಿ ಸಣ್ಣ ಮಟ್ಟದಲ್ಲಿ ಆರಂಭಗೊಂಡು ಬೆಳೆಯುತ್ತಿರುವ ಹಾರ್ದಿಕ್ ಹರ್ಬಲ್ಸ್ ಸಂಸ್ಥೆಯು ಈಗ ದೇಶದ ಗಮನ ಸೆಳೆದಿದೆ. ಹಾರ್ದಿಕ್ ಹರ್ಬಲ್ಸ್ ಸಂಸ್ಥೆಯ ಉತ್ಪನ್ನ ‘ಸತ್ವಮ್ ಕೊಕೋರೇಕಾ ಹರ್ಬಲ್ ಬಾಥಿಂಗ್ ಸೋಪ್’ ಗೆ ಭಾರತ ಸರ್ಕಾರದಿಂದ ಪೇಟೆಂಟ್ ಪಡೆದುಕೊಂಡಿದೆ.

ಹಾರ್ದಿಕ್ ಹರ್ಬಲ್ಸ್ ಸಂಸ್ಥೆಯು ತನ್ನ ಸತ್ವಮ್ ಬ್ರಾಂಡ್‌ನ ಮೂಲಕ ಯಾವುದೇ ರಾಸಾಯನಿಕ ಬಳಸದೆ ಸತ್ವಮ್ ಕೊಕೋರೇಕಾ ಹರ್ಬಲ್ ಬಾಥಿಂಗ್ ಸೋಪ್ ತಯಾರಿಸುತ್ತಿದೆ. ಅಡಕೆ ಸಿಪ್ಪೆಯ ರಸ, ತೆಂಗಿನ ಎಣ್ಣೆ, ಅಲೋವೆರಾ, ಸಾಗುವಾನಿ ಎಲೆ, ಅರಿಶಿನ ಎಣ್ಣೆ, ಕೊತ್ತಂಬರಿ ಮತ್ತು ಲಾವಂಚದಂತಹ ಪ್ರಮುಖ ಗಿಡಮೂಲಿಕೆಗಳಿಂದ ಈ ಸಾಬೂನು ತಯಾರಿಸಲಾಗುತ್ತಿದೆ. ಹಣ್ಣು ಅಡಕೆಯ ಸಿಪ್ಪೆಗಳನ್ನು ಜಜ್ಜಿ ಸಾಗುವಾನಿ ಎಲೆಯೊಂದಿಗೆ ಬೇಯಿಸಿ ಅದರಿಂದ ಬರುವ ಅರ್ಕವನ್ನು ಸಾಬೂನು ಉತ್ಪಾದನೆಗೆ ಪ್ರಮುಖವಾಗಿ ಬಳಸಲಾಗುತ್ತದೆ.

ಹಲವು ಸಮಸ್ಯೆಗಳಿಗೆ ಪರಿಹಾರ: ಸತ್ವಮ್ ಸಾಬೂನು ಆರೋಗ್ಯಪೂರ್ಣವಾಗಿದೆ. ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಈ ಸೋಪು ತ್ವಚೆಯನ್ನು ರಕ್ಷಣೆ ಮಾಡಿ ಬಲಪಡಿಸುತ್ತದೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ದೇಹಕ್ಕೆ ಮಾಯಿಶ್ಚರೈಸರ್ ಆಗಿ ಕೂಡಾ ಈ ಸೋಪು ಕಾರ್ಯನಿರ್ವಹಿಸುತ್ತದೆ. ವೈಟ್ ಪ್ಯಾಚ್ ಅಥವಾ ಬಿಳಿ ಮಚ್ಚೆ (ಸಿಬ್ಬ) ನಿವಾರಣೆಗೂ ಸಹಾಯಕವಾಗಿದೆ. ಮೈ ತುರಿಕೆ ನಿವಾರಿಸಿ, ಗಾಯಗಳನ್ನು ತ್ವರಿತವಾಗಿ ಗುಣಪಡಿಸುವಲ್ಲೂ ಸಾಬೂನು ಸಹಕರಿಸುತ್ತದೆ. ಈ ಉತ್ಪನ್ನವು ಚರ್ಮದ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲದೆ ಸುಸ್ಥಿರತೆ ಕಾಯ್ದುಕೊಳ್ಳಲು ನೆರವಾಗುತ್ತದೆ ಎಂಬುದು ಸಂಸ್ಥೆಯ ಭರವಸೆ.

೨೦ ವರ್ಷಗಳ ಪೇಟೆಂಟ್: ಕಳೆದ ೨೦೨೧ರ ನವೆಂಬರ್‌ನಲ್ಲಿ ಪೇಟೆಂಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕ್ರಿಯೆ ಅನೇಕ ಹಂತಗಳನ್ನು ದಾಟಿ, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರದ ಅನುಮೋದನೆ ಪಡೆದು, ಕೇಂದ್ರ ಸರ್ಕಾರದಿಂದ ಸೆ.೧೩ರಂದು ಅಧಿಕೃತವಾಗಿ ಪೇಟೆಂಟ್ ಪಡೆದುಕೊಂಡಿದೆ. ಇದರೊಂದಿಗೆ ಈ ವಿಶೇಷ ಉತ್ಪನ್ನದ ಹಕ್ಕುಸ್ವಾಮ್ಯವನ್ನು ಮುಂದಿನ ೨೦ ವರ್ಷಗಳಿಗೆ ಹಾರ್ದಿಕ್ ಹರ್ಬಲ್ಸ್ ಕಾಯ್ದಿರಿಸಿಕೊಂಡಿದೆ. ಸೋಪ್‌ಗೆ ಪೇಟೆಂಟ್ ಸಿಕ್ಕಿರುವುದು ಬರೀ ಕಂಪನಿಗಷ್ಟೇ ಅಲ್ಲ, ವಿವಿಧ ಸವಾಲುಗಳ ನಡುವೆ ಅಡಕೆ ಕೃಷಿ ಮಾಡುತ್ತಿರುವ ಕರಾವಳಿ, ಮಲೆನಾಡು ಭಾಗದ ಬೆಳೆಗಾರರಲ್ಲೂ ಹೊರ ಭರವಸೆ ಮೂಡಿಸಿದೆ.2013ರಲ್ಲಿ ನಾನು ಮತ್ತು ನನ್ನ ಪತ್ನಿ ಹರ್ಬಲ್‌ ಉತ್ಪನ್ನಗಳ ‘ಸತ್ವಮ್‌’ ಕುಡಿಯುವ ನೀರಿನ ಉದ್ಯಮ ಆರಂಭಿಸಿದೆವು. ಕೋವಿಡ್‌ ಸಮಯದಲ್ಲಿ ಇಮ್ಯುನಿಟಿ ಹೆಚ್ಚಿಸುವ ನೀರು, ಕಷಾಯ, ಸಾಬೂನು ತಯಾರು ಮಾಡಿದ್ದೇವೆ. ಇದೀಗ ತೆಂಗು ಮತ್ತು ಅಡಕೆ ಸೇರಿಸಿ ಕೋಕೇರೇಕಾ ಸ್ನಾನದ ಸಾಬೂನು ಉತ್ಪಾದನೆ ಮಾಡಿದ್ದೇವೆ. ನಾವು ಸಣ್ಣವರಿದ್ದಾಗ ಬಿಳಿ ಮಚ್ಚೆಗೆ (ಸಿಬ್ಬ) ಹಣ್ಣಾದ ಅಡಕೆಯ ಸಿಪ್ಪೆ ಉಜ್ಜುತ್ತಿದ್ದರು. ಇದು ಸಾಬೂನು ತಯಾರಿಸಲು ನಮಗೆ ಉತ್ತೇಜನ ನೀಡಿದೆ

- ಮುರಳೀಧರ ಕೆ., ಹಾರ್ದಿಕ್‌ ಹರ್ಬಲ್ಸ್‌ ಮುಖ್ಯಸ್ಥರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ