ಧಾರವಾಡ:
ಡಿ. 13ರಂದು ಜಿಲ್ಲೆಯಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಲಾತ್ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಹೇಳಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಈ ಅದಾಲತ್‍ದಲ್ಲಿ ಭಾಗವಹಿಸುವುದರಿಂದ ಕಕ್ಷಿದಾರರಿಗೆ ಮತ್ತು ನ್ಯಾಯವಾದಿಗಳಿಗೆ, ನ್ಯಾಯಾಲಯಕ್ಕೆ ಅನುಕೂಲ. ಕಾರ್ಯದ ಒತ್ತಡ ಕಡಿಮೆಯಾಗಿ, ಸಮಯ ಮತ್ತು ಆರ್ಥಿಕ ಉಳಿತಾಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಹಳೆಯ ಪ್ರಕರಣಗಳು ರಾಜಿ ಸಂಧಾನದ ಮೂಲಕ ರಾಷ್ಟ್ರೀಯ ಲೋಕ ಅದಾಲತ್‍ದಲ್ಲಿ ಪರಿಹಾರವಾಗುತ್ತಿರುವುದು ಅದಲಾತ್ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚಿಸುತ್ತಿದೆ ಎಂದರು.
ಅದಾಲತ್‍ದಲ್ಲಿ ನ್ಯಾಯವಾದಿಗಳು ಸಕ್ರಿಯವಾಗಿ ಭಾಗವಹಿಸುತ್ತಿರುವುದರಿಂದ ಸಾವಿರಾರು ಪ್ರಕರಣಗಳು ಸುಖಾಂತ್ಯವಾಗುತ್ತಿವೆ. ಇದು ಸಹಜ ನ್ಯಾಯ ಮತ್ತು ಸುಲಭ ನ್ಯಾಯದ ಆಶಯ ಈಡೇರಿಸುತ್ತಿದೆ. ಇದು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಜನರಲ್ಲಿ ವಿಶ್ವಾಸ ಮತ್ತು ಗೌರವ ಹೆಚ್ಚಿಸಿದೆ. ಇಂತಹ ಉತ್ತಮ ಬೆಳವಣಿಗೆಗಳು ನ್ಯಾಯಾಂಗದ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿವೆ ಎಂದು ಹೇಳಿದರು.ಡಿ. 13ರಂದು ಆಯೋಜಿಸಿರುವ ಅದಾಲತ್‍ನಲ್ಲಿ ರಾಜಿ ಸಂಧಾನಕ್ಕಾಗಿ ಲಘು ವ್ಯಾಜ್ಯ ಪ್ರಕರಣ ಸೇರಿದಂತೆ ಅರ್ಹ ಒಟ್ಟು 10,746 ಪ್ರಕರಣ ಈ ವರೆಗೆ ಗುರುತಿಸಿದ್ದು, ರಾಜೀ ಸಂಧಾನಕ್ಕಾಗಿ ಅರ್ಹ ಪ್ರಕರಣ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಒಟ್ಟಾರೆ ವಿವಿಧ ರೀತಿಯ 54,739 ಪ್ರಕರಣ ವಿಚಾರಣೆಗೆ ನ್ಯಾಯಾಲಯಗಳ ಮುಂದೆ ಬಾಕಿ ಇವೆ ಎಂದರು.
ಶೇ. 50ರಷ್ಟು ದಂಡ ರಿಯಾಯಿತಿ:ರಾಜ್ಯ ಸರ್ಕಾರವು ವಿವಿಧ ರೀತಿಯ ಸಂಚಾರ ವಾಹನಗಳ ನಿಯಮ ಉಲ್ಲಂಘನೆ ಕುರಿತ ಪ್ರಕರಣಗಳಲ್ಲಿ ವಿಧಿಸಿದ ದಂಡದ ಮೊತ್ತದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಿ, ಅಧಿಸೂಚನೆ ಹೊರಡಿಸಿದೆ. ಇಂತಹ ಪ್ರಕರಣಗಳನ್ನು ಇತ್ಯರ್ಥಕ್ಕೆ ಅದಾಲತ್‍ನಲ್ಲಿ ವಿಶೇಷವಾಗಿ ಪರಿಗಣಿಸಿ, ಪರಿಹರಿಸಲಾಗುತ್ತದೆ. ಪೊಲೀಸ್ ಇಲಾಖೆಯ ಸಂಚಾರಿ ಇ ಚಲನಗಳಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದ್ದು ಸದಾವಕಾಶ ಸದುಪಯೋಗಪಡಿಸಿಕೊಳ್ಳುವಂತೆ ನ್ಯಾಯಾಧೀಶರು ಮನವಿ ಮಾಡಿದರು.
ಧಾರವಾಡ ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ ಮಾತನಾಡಿದರು. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ಪರಶುರಾಮ ಎಫ್. ದೊಡಮನಿ ಇದ್ದರು.