- ನಿರ್ದಿಷ್ಟ ಪ್ರಕರಣಗಳಲ್ಲಿ ರಾಜಿ ಸಂಧಾನ । ಕಕ್ಷಿದಾರರಿಗೆ ಶೀಘ್ರ ನ್ಯಾಯದಾನ: ನ್ಯಾಯಾಧೀಶೆ ಡಿ.ಕೆ.ವೇಲಾ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಾರ್ವಜನಿಕರು ಕಾನೂನು ವ್ಯಾಜ್ಯಗಳನ್ನು ಸೌಹಾರ್ದ ಮತ್ತು ತ್ವರಿತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ಮಾರ್ಚ್ 14ರಂದು ಜಿಲ್ಲೆಯಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಕೆ. ವೇಲಾ ಹೇಳಿದರು.ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ರಾಷ್ಟ್ರೀಯ ಲೋಕ್ ಅದಾಲತ್‌ನ ವಿಶೇಷತೆ ಮತ್ತು ಸಿದ್ಧತೆಗಳ ಕುರಿತು ಮಾಹಿತಿ ಹಂಚಿಕೊಂಡರು.
ಚನ್ನಗಿರಿ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಮುಖ ಎಂ.ವಿ.ಸಿ ಪ್ರಕರಣವೊಂದನ್ನು ಇತ್ತೀಚೆಗೆ ಆನ್‌ಲೈನ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಮಾ ಕಂಪನಿ ಮತ್ತು ಅರ್ಜಿದಾರರ ನಡುವೆ ಸಂಧಾನ ವಕೀಲರು ಸಂಧಾನ ನಡೆಸಿ, ₹7.50 ಲಕ್ಷ ಪರಿಹಾರ ಮೊತ್ತದೊಂದಿಗೆ ಪ್ರಕರಣ ಇತ್ಯರ್ಥಪಡಿಸಲಾಗಿದೆ. ಇದು ಜಿಲ್ಲೆಯಲ್ಲಿ ತಂತ್ರಜ್ಞಾನ ಬಳಕೆ ಮೂಲಕ ನಡೆದ ಮೊದಲ ಯಶಸ್ವಿ ಸಂಧಾನ ಪ್ರಕರಣ ಎಂದರು.
ಪೊಲೀಸ್ ಇಲಾಖೆ ಸಹಕಾರ:
''''''''ಮಧ್ಯಸ್ಥಿಕೆ'''''''' ಉತ್ತಮ ಮಾರ್ಗ:
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಜಿಲ್ಲಾ ನ್ಯಾಯಾಧೀಶರ ಮಾರ್ಗದರ್ಶನದಂತೆ ಜಿಲ್ಲೆಯನ್ನು ‘ಮಾದರಿ ಜಿಲ್ಲೆ’ಯನ್ನಾಗಿ ಮಾಡಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಸುಮಾರು 4,000 ಪ್ರಕರಣಗಳನ್ನು 90 ದಿನಗಳ ಒಳಗೆ 1,000ಕ್ಕೆ ಇಳಿಸಲಾಗಿದೆ. ಜಿಲ್ಲಾಧಿಕಾರಿ ಕೋರ್ಟ್‌ನಲ್ಲಿದ್ದ 400ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈಗ ಕೇವಲ 36 ಪ್ರಕರಣಗಳು ಮಾತ್ರ ಬಾಕಿ ಇವೆ ಎಂದರು.
ಮೃತರ ಹೆಸರಿನಲ್ಲಿದ್ದ ಸುಮಾರು 36,000 ಪಹಣಿಗಳಲ್ಲಿ ಈಗಾಗಲೇ 23,000 ಪಹಣಿಗಳನ್ನು ವಾರಸುದಾರರ ಹೆಸರಿಗೆ ಪೌತಿ ಖಾತೆ ಮೂಲಕ ವರ್ಗಾಯಿಸಲಾಗಿದೆ. ಉಳಿದ 10,000 ಪಹಣಿಗಳನ್ನು ಶೀಘ್ರವೇ ಸರಿಪಡಿಸಲಾಗುವುದು. ಹಲವು ವರ್ಷಗಳಿಂದ ಬಾಕಿ ಇದ್ದ ಜಂಟಿ ಖಾತೆಗಳನ್ನು ವಿಂಗಡಿಸಿ, ಸುಮಾರು 4,500 ಜನರಿಗೆ ಪ್ರತ್ಯೇಕ ಪಹಣಿ ನೀಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಮನೆ ಕಟ್ಟಿಕೊಂಡಿದ್ದ 13,000 ಜನರಿಗೆ ಇ-ಖಾತೆ ಮತ್ತು ಹಕ್ಕುಪತ್ರಗಳನ್ನು ನೀಡುವ ಮೂಲಕ ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ ಎಂದರು.
- - -
(ಬಾಕ್ಸ್-1) * ರಾಜಿ ಸಂಧಾನ: 770ರಲ್ಲಿ ಈಗಾಗಲೇ 407 ಪ್ರಕರಣ ಇತ್ಯರ್ಥ- ಎಸ್‌ಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎಚ್.ಟಿ. ಶೇಖರ್ ಮಾತನಾಡಿ, ರಾಜಿಯಾಗಬಲ್ಲ 770 ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪೈಕಿ 407 ಪ್ರಕರಣಗಳು ಈಗಾಗಲೇ ಇತ್ಯರ್ಥಗೊಂಡಿವೆ. ಉಳಿದ 363 ಪ್ರಕರಣಗಳನ್ನು ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗಿದೆ. ದಂಡನೀಯ ಪ್ರಕರಣಗಳಾದ ಪಿಟ್ಟಿ ಕೇಸ್, ಐಎಂವಿ, ಕೋಟ್ಪಾ ಇತ್ಯಾದಿ ಸೇರಿ ಒಟ್ಟು 21,974 ಪ್ರಕರಣಗಳನ್ನು ಗುರುತಿಸಲಾಗಿದೆ. ಅದರಲ್ಲಿ 21,911 ಪ್ರಕರಣಗಳಲ್ಲಿ ಈಗಾಗಲೇ ದಂಡ ವಸೂಲಿ ಮಾಡಿ ಇತ್ಯರ್ಥಪಡಿಸಲಾಗಿದೆ. ಬಾಕಿ ಇರುವ 192 ಪ್ರಕರಣಗಳಿಗೆ ನೋಟಿಸ್ ನೀಡಿ ಮುಕ್ತಾಯಗೊಳಿಸುವ ಗುರಿ ಹೊಂದಲಾಗಿದೆ ಎಂದರು. ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ 485 ಪ್ರಕರಣಗಳಿಗೆ ನೋಟಿಸ್ ನೀಡಲಾಗಿದೆ. ಈ ಪೈಕಿ 360 ಪ್ರಕರಣಗಳನ್ನು ಈಗಾಗಲೇ ಕಾರ್ಯಗತ ಮಾಡಲಾಗಿದೆ. ಉಳಿದ 125 ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಲಾಗುವುದು ಎಂದರು.- - -
(ಬಾಕ್ಸ್-2) * ಜಿಲ್ಲೆಯಲ್ಲಿ ಪ್ರಸ್ತುತ 42,000 ಪ್ರಕರಣ ಇತ್ಯರ್ಥ ಬಾಕಿ: ನ್ಯಾ.ಮಹಾವೀರ್ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಮ. ಕರೆಣ್ಣವರ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 42,000 ಪ್ರಕರಣಗಳು ಬಾಕಿ ಇವೆ. ಇದರಲ್ಲಿ ರಾಜಿಯಾಗಬಲ್ಲ ಶೇಕಡಾ 50ಕ್ಕೂ ಹೆಚ್ಚು ಸುಮಾರು 21,000 ರಿಂದ 22,000 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುವ ಸಾಧ್ಯತೆಗಳಿವೆ. ನ್ಯಾಯಾಧೀಶರು ಈಗಾಗಲೇ 10,674 ಪ್ರಕರಣಗಳನ್ನು ರಾಜಿ ಆಗಬಹುದಾದ ಪ್ರಕರಣಗಳೆಂದು ಗುರುತಿಸಿದ್ದಾರೆ. ಈವರೆಗೆ ಸುಮಾರು 3,802 ಪ್ರಕರಣಗಳಲ್ಲಿ ಉಭಯ ಪಕ್ಷಕಾರರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜಿಯಾಗಲು ಒಪ್ಪಿಗೆ ಸೂಚಿಸಿದ್ದಾರೆ ಎಂದರು.
- - --11ಕೆಡಿವಿಜಿ33.ಜೆಪಿಜಿ:
ದಾವಣಗೆರೆಯಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜನೆ ಕುರಿತು ನ್ಯಾಯಾಧೀಶೆ ಡಿ.ಕೆ.ವೇಲಾ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಡಿಸಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್, ಎಸ್‌ಪಿ ಎಚ್.ಟಿ.ಶೇಖರ ಇತರರು ಇದ್ದರು.