ಕನ್ನಡಪ್ರಭ ವಾರ್ತೆ ಮೈಸೂರು
ವಿದೇಶಿ ವಿಶ್ವವಿದ್ಯಾನಿಲಯಗಳು ಜ್ಞಾನದ ಕಣಜವಾಗಲು ಅಲ್ಲಿನ ಹಳೆಯ ವಿದ್ಯಾರ್ಥಿಗಳ ಸಂಘಗಳು ಕಾರಣವಾಗಿದೆ. ಹೀಗಾಗಿ, ದೇಶದ ವಿಶ್ವವಿದ್ಯಾನಿಲಯಗಳಿಗೆ ಹಳೆಯ ವಿದ್ಯಾರ್ಥಿಗಳೇ ಬಲ ನೀಡಬೇಕು ಎಂದು ರಾಷ್ಟ್ರೀಯ ಪೌಷ್ಟಿಕ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಸಿಕರನ್ ತಿಳಿಸಿದರು.ಮೈಸೂರು ವಿವಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಹಾರ ವಿಜ್ಞಾನ ಮತ್ತು ಪೋಷಣೆ ಅಧ್ಯಯನ ವಿಭಾಗವು ಮಂಗಳವಾರ ಆಯೋಜಿಸಿದ್ದ ಸುವರ್ಣ ಸಂಸ್ಥಾಪನಾ ದಿನಾಚರಣೆಯಲ್ಲಿ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿದ ಬಳಿ ಅವರ ವಿಶೇಷ ಉಪನ್ಯಾಸ ನೀಡಿದರು.
ಹಾರ್ವರ್ಡ್, ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಸ್ಟ್ಯಾನ್ಫೋರ್ಡ್ ವಿವಿಗಳು ಜ್ಞಾನಕ್ಕೆ ವಿಶ್ವದಲ್ಲೇ ಹೆಸರಾಗಿವೆ. ಅವು ಬಲಗೊಳ್ಳಲು ಅಲ್ಲಿನ ಹಳೆ ವಿದ್ಯಾರ್ಥಿಗಳು ನೆರವಾಗಿದ್ದಾರೆ. ಹಾರ್ವರ್ಡ್‌ವಿವಿಯಲ್ಲಿ ದೊಡ್ಡ ಗ್ರಂಥಾಲಯವನ್ನೇ ಕಟ್ಟಿಕೊಟ್ಟಿದ್ದಾರೆ. ಇಂತಹ ಕಾರ್ಯಗಳಿಗಳಿಗೆ ನಮ್ಮ ದೇಶದ ವಿವಿಗಳ ಹಳೆಯ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.ನಡೆದು ಬಂದ ಹಾದಿ, ಓದಿದ ಶಾಲಾ ಕಾಲೇಜುಗಳನ್ನು ಮರೆಯಬಾರದು. ಮರಳಿ ಅಲ್ಲಿನ ಸೇವಾ ಕಾರ್ಯದಲ್ಲಿ ಸಂಘಗಳ ಮೂಲಕ ತೊಡಗಿಸಿಕೊಳ್ಳಬೇಕು. ಬಡವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಓದಿನ ಸಾಮಗ್ರಿ ಹಾಗೂ ಮೂಲಸೌಲಭ್ಯ ಕೊಡಬೇಕು. ಬಡ ವಿದ್ಯಾರ್ಥಿಯ ಪ್ರವೇಶ ಶುಲ್ಕವನ್ನು ವಿದ್ಯಾರ್ಥಿ ಸಂಘಗಳು ಭರಿಸಬೇಕು ಎಂದು ಅವರು ಸಲಹೆ ನೀಡಿದರು.
ಪೊಟ್ಟಣದ ಆಹಾರ ಶ್ರೇಷ್ಠವಲ್ಲಮೈಸೂರು ವಿವಿ ಕುಲಸಚಿವೆ ವಿ.ಆರ್. ಶೈಲಜಾ ಮಾತನಾಡಿ, ಜಾಗತಿಕವಾಗಿ ಯೋಚಿಸಿ, ಸ್ಥಳೀಯ ಆಹಾರ ಪದ್ಧತಿಯನ್ನು ಕಡ್ಡಾಯವಾಗಿ ಅನುಸರಿಸಿ. ಆರೋಗ್ಯ ನಮ್ಮದಾಗುತ್ತದೆ. ಅಡುಗೆ ಮನೆ ಶಿಸ್ತಿನಿಂದ ಇದ್ದರೆ ಇಡೀ ಕುಟುಂಬ ಚೆನ್ನಾಗಿರುತ್ತದೆ. ಕುಟುಂಬದ ಆರೋಗ್ಯ ಹಾಗೂ ಸಂತೋಷವು ಅಡುಗೆಯಲ್ಲಿ ಇರುತ್ತದೆ. ಇಂದು ಕುರುಕಲು ತಿಂಡಿಗಳೇ ಅಡುಗೆ ಕೋಣೆಯನ್ನು ತುಂಬಿವೆ. ಪೊಟ್ಟಣದಲ್ಲಿನ ಆಹಾರವೇ ಶ್ರೇಷ್ಠವಾಗಿಬಿಟ್ಟಿದೆ ಎಂದು ಬೇಸರಿಸಿದರು.
ಶಾಲಾ ಕಾಲೇಜುಗಳಲ್ಲಿ ಆಹಾರ ಪ್ರಜ್ಞೆಯನ್ನು ಮೂಡಿಸಬೇಕಾದ ಕಾಲ ಬಂದಿದೆ. ಅಡುಗೆಯಲ್ಲಿ ರಾಸಾಯನಿಕ ವಸ್ತುಗಳ ಬಳಕೆ ಹೆಚ್ಚಿದೆ. ಅಡುಗೆ ಹೇಗೆ ಮಾಡಬೇಕೆಂದು ಕಲಿಯುತ್ತಿಲ್ಲ. ಎಷ್ಟು ವಿಟಮಿನ್ ಇದೆ. ಕ್ಯಾಲರಿ ಎಷ್ಟಿದೆಯೆಂದು ಅಳೆದು ತಿನ್ನುವಂತಾಗಿದೆ ಎಂದು ಅವರು ಹೇಳಿದರು.ವಿದೇಶದ ಪೊಟ್ಟಣದ ಆಹಾರ ಶ್ರೇಷ್ಠವಲ್ಲ. ರಾಗಿಮುದ್ದೆ, ನವಣೆ ಉಪ್ಪಿಟ್ಟು ತಿನ್ನುವವರು ಹಳ್ಳಿ ಗುಗ್ಗುಗಳೆಂದು ಅವಮಾನಿಸುವವರು ಜಂಕ್‌ಆಹಾರದ ದಾಸರಾಗಿದ್ದಾರೆ. ದೇಶವು ಮಧುಮೇಹದ ರಾಜಧಾನಿಯಾಗಿದೆ. ಅದಕ್ಕೆ ಆಧುನಿಕ ಆಹಾರ ಪದ್ಧತಿ ಕಾರಣ. ಸಿನಿಮಾ, ಕ್ರೀಡಾ ತಾರೆಯರು ಹೇಳಿದರೆಂದು ಜಂಕ್ ಫುಡ್‌ಮೊರೆ ಹೋಗದಿರಿ. ನಿಮ್ಮ ಮನೆಯ ಹಿರಿಯರಿಂದ ಬಂದ ಅಡುಗೆ ಊಟ ಮಾಡಿ ಎಂದು ಅವರು ಸಲಹೆ ನೀಡಿದರು.
ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತುಮಕ್ಕಳ ಅಭಿವೃದ್ಧಿ ಸಂಸ್ಥೆಯ ಮಾಜಿ ಪ್ರಾದೇಶಿಕ ನಿರ್ದೇಶಕಿ ಪ್ರೊ.ಎಂ.ಎಸ್. ತಾರಾ, ಹಳೆವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಪ್ರೊ. ಆಸ್ನಾ ಉರೂಜ್, ಜಂಟಿ ಕಾರ್ಯದರ್ಶಿ ಪ್ರೊ.ಎ. ವೀಣಾ ಮೊದಲಾದವರು ಇದ್ದರು.