ಭ್ರಷ್ಟಾಚಾರದಲ್ಲಿ ಮುಳುಗಿದ ರಾಷ್ಟ್ರೀಯ ಪಕ್ಷಗಳು: ಜಗದೀಶ್

KannadaprabhaNewsNetwork |  
Published : Sep 28, 2025, 02:00 AM IST
ಚಿತ್ರ 1 | Kannada Prabha

ಸಾರಾಂಶ

ಚಿತ್ರದುರ್ಗ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯದಲ್ಲಿನ ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಮತದಾರ ಬೇಸರಗೊಂಡಿದ್ದಾನೆ. ಎರಡು ಪಕ್ಷಗಳು ಭ್ರಷ್ಠಾಚಾರದಲ್ಲಿ ತೊಡಗಿದ್ದು ಇವನ್ನು ಹೊಡೆದೋಡಿಸಲು ಪರ್ಯಾಯ ಪಕ್ಷಕ್ಕಾಗಿ ಮತದಾರ ಹಂಬಲಿಸುತ್ತಿದ್ದಾನೆ. ಇದನ್ನು ನಮ್ಮ ಪಕ್ಷ ಮುಂದಿನ ದಿನಮಾನದಲ್ಲಿ ಲಾಭವಾಗಿಸಿಕೊಳ್ಳಲಿದೆ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಬಿ.ಜಗದೀಶ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಶೇ.40ರಷ್ಟು ಲಂಚಗುಳಿತನ ಇದೆ ಎಂದು ಮತದಾರರಿಗೆ ತಿಳಿಸುವುದರ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲೂ ಸಹ ಭ್ರಷ್ಠಾಚಾರ ಹೆಚ್ಚಾಗಿದೆ. ಯಾವ ಕಚೇರಿಯಲ್ಲಿ ಆದರೂ ಸಹ ಲಂಚ ಇಲ್ಲದೆ ಕೆಲಸವಾಗುವುದಿಲ್ಲ. ಭ್ರಷ್ಠಾಚಾರ ತಡೆಯುತ್ತೇವೆ ಎಂದು ಅಧಿಕಾರವನ್ನು ಹಿಡಿದ ಕಾಂಗ್ರೆಸ್ ಹಿಂದಿನ ಸರ್ಕಾರವನ್ನು ಮೀರಿ ಭ್ರಷ್ಠಾಚಾರ ನಡೆಸುತ್ತಿದೆ. ಇದರ ಬಗ್ಗೆ ಮತದಾರರಿಗೆ ತಿಳಿದಿದ್ದರು ಏನೂ ಮಾಡದ ಪರಿಸ್ಥಿತಿಯಲ್ಲಿ ಮತದಾರ ಇದ್ದಾನೆ. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ನಮ್ಮ ಪಾರ್ಟಿ ವತಿಯಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ದೆಯನ್ನು ಮಾಡಲಾಗುತ್ತಿದೆ. ನಾವು ಮತದಾರರಿಗೆ ಯಾವುದೇ ರೀತಿಯ ಆಸೆ, ಆಮಿಷವನ್ನು ಒಡ್ಡದೆ ಮತ ಯಾಚನೆಯನ್ನು ಮಾಡುತ್ತೇವೆ. ಅಲ್ಲದೆ ನಮ್ಮಲ್ಲಿ ಸ್ಪರ್ದೆ ಮಾಡುವವರೂ ಸಹ ಸ್ವಚ್ಛವಾದ ಚರಿತ್ರೆಯನ್ನು ಹೊಂದಿರುವವರು ಆಗಿರಬೇಕು. ಅಂತಹವರನ್ನು ಆಯ್ಕೆ ಮಾಡಿ ಚುನಾವಣೆಯಲ್ಲಿ ಸ್ಪರ್ದೆ ಮಾಡಿಸಲಾಗುವುದು ಎಂದರು.

ರಾಜ್ಯದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಕಾಂಗ್ರೆಸ್ ಮತದಾರರಿಗೆ ಮೋಸ ಮಾಡುತ್ತಿದೆ. ತಮಗೆ ಬೇಕಾದ ರೀತಿಯಲ್ಲಿ ಕಾನೂನುಗಳನ್ನು ರೂಪಿಸಿಕೊಂಡು ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಭ್ರಷ್ಠಾಚಾರವನ್ನು ತೆಗೆಯುತ್ತೇವೆ ಎಂದು ಹೇಳುವುದರ ಮೂಲಕ ಜನತೆಯನ್ನು ಭ್ರಷ್ಠಾಚಾರಕ್ಕೆ ತಳ್ಳುತ್ತಿದೆ. ರಾಜ್ಯದಲ್ಲಿನ ಎರಡು ಪಕ್ಷಗಳು ಮತದಾರರನ್ನು ಗುಲಾಮರ ರೀತಿಯಲ್ಲಿ ನೋಡುತ್ತಿವೆ. ಅವರನ್ನು ಮತ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಂಡು ಅವರಿಂದ ಮತವನ್ನು ಮಾತ್ರ ಪಡೆಯುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ಸೌಲಭ್ಯ ನೀಡುತ್ತಿಲ್ಲ ಎಂದು ಜಗದೀಶ್ ದೂರಿದರು.ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಒಂದು ತಿಂಗಳಿನಿಂದ ಶಾಸಕರಿಲ್ಲ. ಇಲ್ಲಿನ ಜನತೆ ತಮ್ಮ ಸಮಸ್ಯೆಯನ್ನು ಯಾರ ಹತ್ತಿರ ಹೇಳಿಕೊಳ್ಳಬೇಕು. ಅವರು ಮಾಡಿದ ತಪ್ಪಿನಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಮತದಾರರು ಶಿಕ್ಷೆಯನ್ನು ಅನುಭವಿಸಬೇಕಿದೆ. ಇದರ ಬಗ್ಗೆ ಸರ್ಕಾರವಾಗಲಿ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ತಲೆ ಕೆಡಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಆಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ನಮ್ಮ ಸಮಸ್ಯೆಯನ್ನು ಯಾರ ಹತ್ತಿರ ಹೇಳಿಕೊಳ್ಳಬೇಕೆಂದು ಮತದಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಮತವನ್ನು ಹಾಕುವ ಸಮಯದಲ್ಲಿ ಯೋಚನೆ ಮಾಡಿ ಮತದಾನ ಮಾಡಬೇಕಿದೆ. ಯೋಗ್ಯರನ್ನು ಆಯ್ಕೆ ಮಾಡಬೇಕಾಗಿರುವುದು ಮತದಾರರ ಕರ್ತವ್ಯವಾಗಿದೆ ಎಂದರು.

10 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಅಂದಿನ ಜಿಲ್ಲಾ ಸಚಿವ ಎಚ್.ಆಂಜನೇಯರವರು ಜಿಲ್ಲಾ ಆಡಳಿತದ ಅನುಕೂಲಕ್ಕಾಗಿ ನಗರದಿಂದ ಸುಮಾರು 3 ಕಿಮೀ ದೂರದ ಕುಂಚಿಗನಾಳ್‍ನಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಿದ್ದು ಇನ್ನೇನು ಸ್ವಲ್ಪ ದಿನಗಳಲ್ಲಿ ಜಿಲ್ಲಾಡಳಿತದ ಎಲ್ಲಾ ಕಡತಗಳನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಇಂದಿನ ಜಿಲ್ಲಾ ಸಚಿವರು, ಶಾಸಕರು ಸೇರಿ ಜಿಲ್ಲಾ ಕಚೇರಿ ಬದಲಾಗಿ ವೈದ್ಯಕೀಯ ಕಾಲೇಜಿಗೆ ಕಟ್ಟಡ ಹಸ್ತಾoತರಿಸುವ ಕೆಲಸ ನಡೆದಿದೆ. ಇನ್ನೊಮ್ಮೆ ಕೂಲಂಕುಷವಾಗಿ ಯೋಚಿಸಿ ಈ ಹಿಂದೆ ಯಾವುದಕ್ಕೊಸ್ಕರ ಅಂದಿನ ಸಚಿವರು ಮಂಜೂರು ಮಾಡಿದ್ದರೋ ಅದೇ ಉದ್ದೇಶಕ್ಕೆ ಕಟ್ಟಡ ಬಳಸಬೇಕು.

ಕುಂಚಿಗನಾಳ್‍ನಲ್ಲಿ ಜಿಲ್ಲಾಡಳಿತ ಕಚೇರಿ ಇರುವುದರಿಂದ ಚಿತ್ರದುರ್ಗ ನಗರದಲ್ಲಿ ಪುನಃ ರಸ್ತೆ ಅಗಲೀಕರಣ ಮಾಡುವ ಅವಶ್ಯಕತೆ ಇರುವುದಿಲ್ಲ. ನಗರದಲ್ಲಿ ವಾಹನಗಳು ಹೆಚ್ಚಾಗಿ ಇರುವುದರಿಂದ ವಾಹನ ಮಾಲಿನ್ಯ ಉಂಟಾಗುತ್ತಿದೆ. ಜಿಲ್ಲಾಡಳಿತ ಕಚೇರಿ ಬದಲಾಗುವುದರಿಂದ ಆರ್ಥಿಕವಾಗಿ ಹಿಂದುಳಿದ ಗ್ರಾಮಗಳು ಆರ್ಥಿಕವಾಗಿ ಸದೃಢವಾಗಿ ಉದ್ಯೋಗ ಸೃಷ್ಟಿಗೆ ಅನುಕೂಲವಾಗುತ್ತದೆ. ಕಚೇರಿ ಬದಲಾಗುವುದರಿಂದ ಜಿಲ್ಲೆಯ ಕೆಲವು ತಾಲೂಕುಗಳಾದ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು ಜನತೆಗೆ ಅನುಕೂಲ ವಾಗುತ್ತದೆ. ಜಿಲ್ಲಾಡಳಿತ ಕಚೇರಿ ದೂರ ಇದ್ದಷ್ಟು ಅನಾವ್ಯಶಕವಾಗಿ ಪ್ರತಿಭಟನೆಗಳಿಗೆ ಆಸ್ಪದ ಇರುವುದಿಲ್ಲ. ನಗರದಿಂದ ದೂರ ಇದ್ದರೆ ವ್ಯವಹಾರಕ್ಕೆ ಅನುಕೂಲ ಸಮಯಕ್ಕೆ ಸರಿಯಾಗಿ ಅಧಿಕಾರಿ ವರ್ಗದವರು ಹಾಜರಿರುತ್ತಾರೆ. ಇದನ್ನೆಲ್ಲಾ ಮನದಲ್ಲಿಟ್ಟುಕೊಂಡು ಈಗ ಮಂಜೂರಾಗಿರುವ ಕಟ್ಟಡದಲ್ಲಿ ಜಿಲ್ಲಾಡಳಿತ ಕಾರ್ಯ ನಿರ್ವಹಿಸುವುದು ಸೂಕ್ತವಾಗಿದ್ದು ಅಲ್ಲಿ ವೈದ್ಯಕೀಯ ಕಾಲೇಜು ಆಗುವುದರಿಂದ ವಿದ್ಯಾರ್ಥಿಗಳಿಗೆ ದೂರ ಇರುವುದರಿಂದ ವಿದ್ಯಾರ್ಥಿನಿಯರಿಗೆ ಭದ್ರತೆಗೆ ಹಾಗೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದರು.

ಈ ವೇಳೆ ಜಿಲ್ಲಾ ಕಾರ್ಯದರ್ಶಿ ರಾಮಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ತನ್ವೀರ್, ಸಂಘಟನಾ ಕಾರ್ಯದರ್ಶಿ ರವಿ, ಜಂಟಿ ಕಾರ್ಯದರ್ಶಿ ಗೋವಿಂದಪ್ಪ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಹಾಜರಿದ್ದರು.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ