ಇಂದು ಮುಕ್ಕ ಶ್ರೀನಿವಾಸ ವಿವಿಯಲ್ಲಿ ರಾಷ್ಟ್ರೀಯ ಸಂಸ್ಕೃತ ಸಮ್ಮೇಳನ

KannadaprabhaNewsNetwork | Published : May 11, 2024 12:02 AM

ಸಾರಾಂಶ

ದೇಶದ ವಿವಿಧ ಭಾಗಗಳಿಂದ ಸಂಸ್ಕೃತದಲ್ಲಿ ಸುಮಾರು ೫೦ ಸಂಶೋಧನಾ ಲೇಖನಗಳನ್ನು ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಶ್ರೀನಿವಾಸ ಯೋಗ-ಸಂಸ್ಕೃತ ಅಧ್ಯಯನಗಳು ಮತ್ತು ಶ್ರೀನಿವಾಸ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದ ವತಿಯಿಂದ ‘ಆಧುನಿಕ ಭಾರತದಲ್ಲಿ ಪ್ರಾಚೀನ ಸಂಸ್ಕೃತ ಸಾಹಿತ್ಯದ ಕೊಡುಗೆ ಮತ್ತು ಅನ್ವಯ’ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ಸಮ್ಮೇಳನ ಮೇ 11ರಂದು ನಡೆಯಲಿದೆ.

ಶ್ರೀನಿವಾಸ ವಿವಿ ಅಭಿವೃದ್ಧಿ ವಿಭಾಗದ ರಿಜಿಸ್ಟ್ರಾರ್‌ ಡಾ.ಅಜಯ್ ಕುಮಾರ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಮುಕ್ಕ ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಬೆಳಗ್ಗೆ ೧೦ ಗಂಟೆಗೆ ಉಡುಪಿ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀನಿವಾಸ ವಿವಿ ಕುಲಾಧಿಪತಿ ಡಾ.ಸಿ.ಎ.ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸುವರು. ಸಹ ಕುಲಾಧಿಪತಿ ಡಾ ಎ. ಶ್ರೀನಿವಾಸ ರಾವ್, ಟ್ರಸ್ಟಿಗಳಾದ ವಿಜಯಲಕ್ಷ್ಮಿ ಆರ್. ರಾವ್, ಮಿತ್ರ ಎಸ್. ರಾವ್ ಅತಿಥಿಗಳಾಗಿ ಭಾಗವಹಿಸುವರು. ಉಪ ಕುಲಾಧಿಪತಿ ಡಾ.ಕೆ.ಸತ್ಯನಾರಾಯಣ ರೆಡ್ಡಿ, ಕುಲಸಚಿವರಾದ ಡಾ.ಅನಿಲ್ ಕುಮಾರ್, ಡಾ.ಶ್ರೀನಿವಾಸ ಮಯ್ಯ ಡಿ. ಭಾಗವಹಿಸುವರು ಎಂದರು. ದೇಶದ ವಿವಿಧ ಭಾಗಗಳಿಂದ ಸಂಸ್ಕೃತದಲ್ಲಿ ಸುಮಾರು ೫೦ ಸಂಶೋಧನಾ ಲೇಖನಗಳನ್ನು ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಗುತ್ತದೆ.

ಆರೋಗ್ಯ ವಿಜ್ಞಾನಗಳ ಕುರಿತು ಸಂಸ್ಕೃತ, ವಾಸ್ತು ವಿನ್ಯಾಸ ಮತ್ತು ನಗರ ಯೋಜನೆ ಕುರಿತು ಸಂಸ್ಕೃತ, ಸಂಸ್ಕೃತ ಮತ್ತು ಖಗೋಳ ಶಾಸ್ತ್ರ, ಕೃಷಿ ಮತ್ತು ಪರಿಸರ ಸಂರಕ್ಷಣೆ ಕುರಿತು ಸಂಸ್ಕೃತ, ಸಂಸ್ಕೃತ ಮತ್ತು ಆಧುನಿಕ ತಾಂತ್ರಿಕ ವಿಜ್ಞಾನ, ಸಂಸ್ಕೃತ ಮತ್ತು ಭವಿಷ್ಯದ ಯೋಜನೆ, ಸಂಸ್ಕೃತ ಮತ್ತು ಮನೋ ವಿಜ್ಞಾನಗಳಲ್ಲಿ ಸಂಶೋಧನಾ ಪ್ರಬಂಧ ಮಂಡನೆಯಾಗಲಿದೆ. ವಿದ್ವಾಂಸರಿಂದ ವಿಚಾರ ಮಂಡನೆ ನಡೆಯಲಿದೆ ಎಂದರು. ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಫೆಬ್ರವರಿ ೨೦೨೩ ರಂದು ನಡೆದ ಮೊದಲ ವಿಶ್ವ ಸಂಸ್ಕೃತ ಸಮ್ಮೇಳನದ ಮುಂದುವರಿಕೆಯಾಗಿ ಈ ಸಮ್ಮೇಳನವನ್ನು ನಡೆಸಲಾಗುತ್ತದೆ. ಸಮ್ಮೇಳನದ ಮುಖ್ಯ ಉದ್ದೇಶ ಕುಲಾಧಿಪತಿ ಡಾ.ಸಿ.ಎ. ಎ ರಾಘವೇಂದ್ರರಾವ್ ಅವರ ದೃಷ್ಟಿಕೋನವಾಗಿದ್ದು, ಸಾಮಾನ್ಯ ಜನರಿಗೆ ಸಂಸ್ಕೃತವನ್ನು ತಲುಪಿಸುವುದಾಗಿದೆ. ಸಂಸ್ಕೃತ ಭಾಷೆ ಸಮಾಜದಿಂದ ದೂರವಾಗಬಾರದು, ಸಂಸ್ಕೃತ ಎಲ್ಲ ಭಾಷೆಗಳಿಗೂ ಮಾತೃಭಾಷೆ. ಇದು ನಮ್ಮ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಅಡಕವಾಗಿದೆ. ಈ ಸಮ್ಮೇಳನದಲ್ಲಿ ಎಲ್ಲ ವಿದ್ವಾಂಸರಿಂದ ನಾಲ್ಕು ಸಮಾನಾಂತರ ಅಧಿವೇಶನ ಏರ್ಪಡಲಿದೆ ಎಂದರು.

ಉಪ ಕುಲಪತಿ ಡಾ.ಕೆ.ಸತ್ಯನಾರಾಯಣ ರೆಡ್ಡಿ, ಕುಲಸಚಿವ ಡಾ.ಅನಿಲ್‌ ಕುಮಾರ್‌, ಕಾರ್ಯಕ್ರಮ ಸಂಚಾಲಕ ಡಾ.ಪ್ರವೀಣ್‌ ಇದ್ದರು.

Share this article