ಕನ್ನಡಪ್ರಭ ವಾರ್ತೆ ಹೊನ್ನಾವರ
ಎಂಪಿಇ ಸೊಸೈಟಿಯ ಎಸ್‌ಡಿಎಂ ಪದವಿ ಕಾಲೇಜು ಕನ್ನಡ ಸಂಘ, ಐಕ್ಯೂಎಸಿ ಹಾಗೂ ಅಭಿನವ ಬೆಂಗಳೂರು, ವಿ.ಸೀ.ಸಂಪದ ಬೆಂಗಳೂರು ಇವರ ಜೊತೆಗೂಡಿ ಜೀವ ಕಾರುಣ್ಯ ಪರಂಪರೆ ಮತ್ತು ವಿ.ಸೀತಾರಾಮಯ್ಯ ಒಂದು ಪಟ್ಟಾಂಗ ಎಂಬ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಎಸ್.ಡಿ.ಎಂ.ಕಾಲೇಜಿನ ಆರ್.ಎಸ್. ಹೆಗಡೆ ಸಭಾಭವನದಲ್ಲಿ ಅ. ೯ ಮತ್ತು ೧೦ ರಂದು ನಡೆಯಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಡಿ.ಎಲ್. ಹೆಬ್ಬಾರ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡಿದ ಅವರು,
ಮೊದಲ ದಿನ ಚಿಂತಕ ಡಾ. ನರಹರಿ ಬಾಲಸುಬ್ರಹ್ಮಣ್ಯ ವಿ.ಸೀ ಅವರ ಗ್ರಂಥಾಲಯ ಅನಾವರಣ ಮತ್ತು ಕೃತಿ ಲೋಕಾರ್ಪಣೆ ನೆರವೇರಿಸುವರು. ಇದೇ ಕಾರ್ಯಕ್ರಮದಲ್ಲಿ ಎಂಪಿಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ, ಕಾಲೇಜಿನ ಪ್ರಾಚಾರ್ಯ ಡಾ. ಡಿ.ಎಲ್. ಹೆಬ್ಬಾರ್, ಡಾ. ನರಸಿಂಹ ಪಂಡಿತ್, ನಾಗರಾಜ್ ಹೆಗಡೆ ಅಪಗಾಲ, ನ.ರವಿಕುಮಾರ್, ಎಂ.ವಿ. ವೆಂಕಟೇಶ್ ಮೂರ್ತಿ ಭಾಗವಹಿಸಲಿದ್ದಾರೆ.ರಾಷ್ಟ್ರೀಯ ವಿಚಾರ ಸಂಕಿರಣದ ಎರಡನೇ ದಿನ ವಿವಿಧ ಸಾಹಿತಿಗಳಿಂದ ವಿ.ಸೀ ಅವರ ಬದುಕು ಬರಹ, ವ್ಯಕ್ತಿತ್ವ, ವಿ.ಸೀ ಕಂಡ ಸಮಾಜದ ಆಶಯ ಮೊದಲಾದ ವಿಷಯಗಳು ಮಂಡನೆ ಆಗಲಿದೆ.
ಎರಡನೇ ದಿನವೂ ಸಹ ನಾಡಿನ ಖ್ಯಾತ ಸಾಹಿತಿಗಳು, ಪತ್ರಕರ್ತರು ಭಾಗವಹಿಸಲಿದ್ದಾರೆ. ಬಳಿಕ ಗೋಪಾಲಕೃಷ್ಣ ಅಡಿಗ, ವಿ.ಸೀ ಅವರ ಕಾವ್ಯ ಗಾಯನ, ಮೊದಲಾದ ಕವಿಗಳ ಕಾವ್ಯ ಗಾಯನ ನಾಡಿನ ಖ್ಯಾತ ಸಂಗೀತ ಕಲಾವಿದರಿಂದ ಜರುಗಲಿದೆ. ಇದೇ ವೇಳೆ ನಾಗರಾಜ್ ಹೆಗಡೆ ಅಪಗಾಲ್ ಬರೆದ ಗತಿಚಿತ್ರ, ಡಾ. ಸುರೇಶ್ ತಾಂಡೇಲ್ ಬರೆದ ಹೊನ್ನಾವರ: ಒಂದು ಸ್ಥೂಲ ನೋಟ ಮತ್ತು ಈ ಸೆಮಿನಾರ್‌ನ ಮಂಡನೆಯಾದ ವಿಷಯಗಳನ್ನು ಪುಸ್ತಕ ರೂಪದಲ್ಲಿ ತೋರಿಸುವ ಜೀವ ಕಾರುಣ್ಯಪರಂಪರೆ ಮತ್ತು ವಿ.ಸೀ. ಈ ಮೂರು ಪುಸ್ತಕಗಳು ಬಿಡುಗಡೆಯಾಗಲಿದೆ.ಕಾರ್ಯಕ್ರಮದ ಒಟ್ಟು ರೂಪುರೇಷೆಗಳ ಬಗ್ಗೆ ಕನ್ನಡ ವಿಭಾಗದ ಮುಖ್ಯಸ್ಥ ನಾಗರಾಜ್ ಹೆಗಡೆ ಅಪಗಾಲ್ ಮಾಹಿತಿ ನೀಡಿದರು.
ಉಪಪ್ರಾಚಾರ್ಯ ಡಾ. ಜಿ.ಎನ್. ಭಟ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಎಂ.ಜಿ. ಹೆಗಡೆ, ಕನ್ನಡ ಉಪನ್ಯಾಸಕ ವಿದ್ಯಾಧರ ಕಡತೋಕ ಪತ್ರಿಕಾಗೋಷ್ಟಿಯಲ್ಲಿದ್ದರು. ಐಕ್ಯೂಎಸಿ ಕೋ-ಆರ್ಡಿನೇಟರ್ ಡಾ. ಸುರೇಶ್ ಎಸ್. ವಂದಿಸಿದರು. ಉಪನ್ಯಾಸಕ ಪ್ರಶಾಂತ್ ಹೆಗಡೆ ನಿರೂಪಿಸಿದರು.