ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ನಗರದ ಹೆಬ್ಬಾಳ್ ಹೊರ ವರ್ತುಲ ರಸ್ತೆಯಲ್ಲಿರುವ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಎಲೆಕ್ಟೋರಲ್ ಲಿಟ್ರೆಸಿ ಕ್ಲಬ್, ಎನ್.ಸಿ.ಸಿ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ ಸಹಯೋಗದಲ್ಲಿ ಗುರುವಾರ ರಾಷ್ಟ್ರೀಯ ಮತದಾರ ದಿನಲನ್ನು ಆಚರಿಸಲಾಯಿತು.ಇದೇ ವೇಳೆ ಮತದಾನದ ಪ್ರತಿಜ್ಞೆಯನ್ನು ಎನ್.ಸಿ.ಸಿ. ಕೆಡೆಟ್ ದೃಶ್ಯಾ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ.ಕೆ. ಸೌಮ್ಯ ಈರಪ್ಪ, ಎನ್.ಸಿ.ಸಿ. ಅಧಿಕಾರಿ ಆರ್. ಕುಮಾರ್‌ಮತ್ತು ಎನ್.ಸಿ.ಸಿ. ಕೆಡೆಟ್ ಗಳು ವಿಧಿಬದ್ಧವಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಕೆಡೆಟ್ ಸುಮೇಧಾ ಕಶ್ಯಪ್ ಮಾತನಾಡಿ, ಮತದಾನ ಪ್ರತಿ ಪ್ರಜೆಯ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ. ನಾವು ಎಂದಿಗೂ ಮತದಾನ ಮಾಡುವುದನ್ನು ತಪ್ಪಿಸಬಾರದು ಹಾಗೂ ಮತದಾನ ಮಾಡುವ ಸಂದರ್ಭದಲ್ಲಿ ಯಾವುದೇ ಹಣದ ಅಥವಾ ಇತರೆ ಆಮಿಷಗಳಿಗೆ ಒಳಗಾಗಿ ಕಾನೂನು ಬಾಹಿರವಾಗಿ ಮತದಾನ ಮಾಡಬಾರದು. ಇದು ಪ್ರಜಾಪ್ರಭುತ್ವ ತತ್ವಗಳಿಗೆ ವಿರುದ್ಧವಾದದ್ದು ಎಂದು ತಿಳಿಸಿದರು.ಮಹಾಜನ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ
ಮೈಸೂರು ನಗರದ ಜಯಲಕ್ಷ್ಮಿಪುರಂನಲ್ಲಿರುವ ಮಹಾಜನ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಗುರುವಾರ ಆಚರಿಸಲಾಯಿತು.ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಮಾತನಾಡಿ, ಸುಭದ್ರ, ಸುಭಿಕ್ಷವಾದ, ಆತ್ಮಗೌರವದ ದೇಶ ನಿರ್ಮಾಣದಲ್ಲಿ ಯುವ ಮತದಾರರ ಪಾತ್ರ ಬಹುಮುಖ್ಯ. ಮತದನಾನ ನಮ್ಮ ಹಕ್ಕು ಅದನ್ನು ಪಡೆಯಲು ಮತ್ತು ಆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಮತದಾರರಾಗಿ ನೋಂದಾಯಿಸಿಕೊಳ್ಳುವುದು ಪ್ರಪ್ರಥಮ ಕರ್ತವ್ಯವಾಗಿರುತ್ತದೆ ಎಂದು ತಿಳಿಸಿದರು.ಪ್ರಬುದ್ಧ ಪ್ರಾಮಾಣಿಕ ನಾಯಕರನ್ನು ಆಯ್ಕೆ ಮಾಡಲು ಮತದಾನದ ಮೂಲಕ ಸಾಧ್ಯ. ಪ್ರಜ್ಞಾವಂತ ಯುವ ಮತದಾರರು ದೇಶದ ಸಮಗ್ರ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಭ್ರಷ್ಟಾಚಾರ ಮುಕ್ತ ದೇಶ ಮತ್ತು ಸರ್ವಸಮಾನ ಅವಕಾಶಗಳೆಡೆಗೆ ನಮ್ಮನ್ನು ತೆಗೆದುಕೊಂಡು ಉತ್ತಮ ಆಡಳಿತ ವ್ಯವಸ್ಥೆಯನ್ನು ನಿರ್ಮಾಣ ಮಾಡುವಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ದೇಶಕ್ಕೆ ದ್ರೋಹ ಬಗೆಯದಂತೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು ಎಂದು ಅವರು ಕರೆ ನೀಡಿದರು.
ಕಾಲೇಜಿನ ಡೀನ್ ಡಾ.ಎಚ್. ಶ್ರೀಧರ, ಕಾನೂನು ಸಂವಿಧಾನ ವಿಭಾಗದ ಮುಖ್ಯಸ್ಥೆ ಮಂಜುಳಾ ಮೊದಲಾದವರು ಇದ್ದರು.