-79ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಜಂಟಿ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು 1946ರ ಏಪ್ರಿಲ್ 20ರಂದು ಬ್ಯಾಂಕ್ ಉದ್ಯೋಗಿಗಳ ಪ್ರಪ್ರಥಮ ಸಂಘಟನೆಯಾಗಿ ಸ್ಥಾಪನೆಗೊಂಡಿತು. ಸ್ಥಾಪನೆಯಾದ ದಿನದಿಂದಲೂ ಬ್ಯಾಂಕ್ ಉದ್ಯೋಗಿಗಳ ಪರವಾಗಿ ಹೋರಾಟ ಮಾಡಿ ಬ್ಯಾಂಕ್ ನೌಕರರಿಗೆ ಅನೇಕ ಸೌಲಭ್ಯಗಳನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್‌ನ ಜಂಟಿ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಹೇಳಿದರು.
ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘ ವತಿಯಿಂದ ಸಂಘದ ಕಚೇರಿಯಲ್ಲಿ ಬ್ಯಾಂಕ್ ರಾಷ್ಟ್ರೀಕರಣದ ರೂವಾರಿಯಾದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ 79ನೇ ಸ್ಥಾಪನಾ ದಿನ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಬ್ಯಾಂಕ್ ರಾಷ್ಟ್ರೀಕರಣದ ಮೂಲಕ ಲಕ್ಷಾಂತರ ನಿರುದ್ಯೋಗಿಗಳಿಗೆ ಬ್ಯಾಂಕುಗಳಲ್ಲಿ ಉದ್ಯೋಗ ಹಾಗೂ ಕೋಟ್ಯಂತರ ನಿರುದ್ಯೋಗಿಗಳಿಗೆ ಬ್ಯಾಂಕ್ ಸಾಲ ನೀಡುವ ಮೂಲಕ ಸ್ವಉದ್ಯೋಗ ಮಾಡಲು ಅವಕಾಶ ಕಲ್ಪಿಸಲಾಯಿತು. ಬ್ಯಾಂಕ್‌ನಲ್ಲಿ ಖಾಲಿಯಿರುವ ಅನೇಕ ಕಾಯಂ ಹುದ್ದೆಗಳಿಗೆ ನೇಮಕಾತಿ ಮಾಡಲು ಕೂಡ ಸಂಘದ ವತಿಯಿಂದ ಹೋರಾಟ ಮಾಡಲಾಯಿತು. ಬ್ಯಾಂಕ್ ಉದ್ಯೋಗಿಗಳ ಉದ್ಯೋಗ ಭದ್ರತೆಗೆ ಹೋರಾಡಿ, ಜಯ ಗಳಿಸಿದ ಪರಿಣಾಮ ಇಂದಿಗೂ ಅಸಂಖ್ಯಾತ ಯುವಕರು ತಾವು ಎಂಜಿನಿಯರಿಂಗ್, ಎಂ.ಬಿ.ಎ., ಎಂ.ಸಿ.ಎ., ಮೊದಲಾದ ಉನ್ನತ ಶಿಕ್ಷಣ ಪದವಿ ಹೊಂದಿದ್ದರೂ ಬ್ಯಾಂಕ್ ಉದ್ಯೋಗಕ್ಕೆ ಭದ್ರತೆ ಇರುವ ಕಾರಣಕ್ಕಾಗಿ ಬ್ಯಾಂಕ್ ನೌಕರಿಯನ್ನೇ ಅರಸಿಕೊಂಡು ಬರುತ್ತಿದ್ದಾರೆ ಎಂದರು.
ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಕಾರ್ಯದರ್ಶಿ ಎಚ್.ಎಸ್. ತಿಪ್ಪೇಸ್ವಾಮಿ ಮಾತನಾಡಿ, ಬ್ಯಾಂಕಿಂಗ್ ಸೌಲಭ್ಯವು ಪ್ರತಿಯೊಬ್ಬ ಭಾರತೀಯನ ಮೂಲಭೂತ ಹಕ್ಕಾಗಬೇಕು ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಗಳಿಸುವ ಲಾಭವು ದೇಶದ ಜನರ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕೇ ವಿನಃ ಖಾಸಗಿ ಬಂಡವಾಳಷಾಹಿಗಳ ಲೂಟಿಗಾಗಿ ಅಲ್ಲ ಎನ್ನುವುದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಸ್ಪಷ್ಟವಾದ ನಿಲುವಾಗಿದೆ ಎಂದು ತಿಳಿಸಿದರು.ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ವಿಶೇಷ ಆಹ್ವಾನಿತ ಎಚ್.ಸೂಗುರಪ್ಪ, ಪದಾಧಿಕಾರಿಗಳಾದ ಎಂ.ಎಂ. ಸಿದ್ದಲಿಂಗಯ್ಯ, ಸಿ.ಪರಶುರಾಮ, ಅಣ್ಣಪ್ಪ ನಂದಾ, ಡಿ.ಎ.ಸಾಕಮ್ಮ, ಶ್ರೀನಿವಾಸ ಆರ್. ನಾಡಿಗ್, ಸುಮಂತ್ ಎಸ್. ಭಟ್, ಕೇಂದ್ರ ಸಮಿತಿ ಸದಸ್ಯರಾದ ಎಂ.ರಮೇಶ್, ಜ್ಞಾನೇಶ್ವರ ಮಾಳವಾಡೆ, ಪ್ರಶಾಂತ್ ಎಸ್, ಡಿ.ಹರ್ಷದ್, ಎಂ.ಎಂ.ಸಿದ್ದವೀರಯ್ಯ, ಬಿ.ಸತೀಶ್, ಕೆ.ಎಂ.ಆಂಜನೇಯಪ್ಪ, ಯಲ್ಲಪ್ಪ ಮುಂತಾದವರು ಉಪಸ್ಥಿತರಿದ್ದರು.
- - - -20ಕೆಡಿವಿಜಿ36ಃ:ದಾವಣಗೆರೆಯಲ್ಲಿ ಶನಿವಾರ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ 79ನೇ ಸ್ಥಾಪನಾ ದಿನ ಆಚರಿಸಲಾಯಿತು.