ವೈದ್ಯರು, ಶಿಕ್ಷಕರಿಂದ ನಾಡಿನ ಶ್ರೇಷ್ಠತೆ: ಸಭಾಪತಿ ಹೊರಟ್ಟಿ

KannadaprabhaNewsNetwork | Published : Dec 9, 2024 12:47 AM

ಸಾರಾಂಶ

ಹುಬ್ಬಳ್ಳಿಯಲ್ಲಿ ಭಾನುವಾರ ಹಿರೇಬಾಸೂರು ಗ್ರಾಮದ ಕೃಷಿಕ ದಿ. ಮೌನೇಶಪ್ಪ ಕತ್ತಿ ಹೆಸರಿನಲ್ಲಿ ಕೊಡ ಮಾಡುವ ವೈದ್ಯಶ್ರೀ -2024 ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಹುಬ್ಬಳ್ಳಿ: ವೈದ್ಯರು ಮತ್ತು ಶಿಕ್ಷಕರಿಂದ ಮಾತ್ರ ನಾಡು ಶ್ರೇಷ್ಠತೆ ಕಾಣುತ್ತದೆ. ಶಿಕ್ಷಕರು ಸಂಸ್ಕಾರ ಕಲಿಸುವುದರಿಂದ ಸಮಾಜ ಸುಧಾರಣೆಯತ್ತ ಸಾಗುತ್ತದೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ಹಾವೇರಿಯ ಕಲಾ ಸ್ಪಂದನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಸ್ವರ್ಣ ಪ್ಯಾರಾಡೈಸ್ ಹೋಟೆಲ್‌ನ ಮಂಥನ ಸಭಾ ಭವನದಲ್ಲಿ ಭಾನುವಾರ ಹಿರೇಬಾಸೂರು ಗ್ರಾಮದ ಕೃಷಿಕ ದಿ. ಮೌನೇಶಪ್ಪ ಕತ್ತಿ ಹೆಸರಿನಲ್ಲಿ ಕೊಡ ಮಾಡುವ ವೈದ್ಯಶ್ರೀ -2024 ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ಕ್ಷೇತ್ರದಲ್ಲೂ ಪ್ರಶಸ್ತಿಯನ್ನು ಕೊಡುತ್ತಿವೆ. ಇದರ ಹೊರತಾಗಿ ಖಾಸಗಿ ಸಂಸ್ಥೆಗಳು ಪ್ರಶಸ್ತಿ ಕೊಡುತ್ತವೆ. ಆ ಸಂಸ್ಥೆಗಳ ಹೆಸರು ಉಳಿಯಬೇಕಾದರೆ ಅರ್ಹರಿಗೆ ಪ್ರಶಸ್ತಿ ಕೊಡಬೇಕು. ಆದರೆ, ದಿ.ಮೌನೇಶಪ್ಪ ಕತ್ತಿ ಹೆಸರಿನಲ್ಲಿ ಕೊಡುವ ಪ್ರಶಸ್ತಿಯು ಬಹಳಷ್ಟು ಶ್ರೇಷ್ಠತೆ ಮತ್ತು ಅರ್ಹತೆಯನ್ನು ಹೊಂದಿದವರಿಗೆ ಕೊಡುತ್ತಿರುವುದು ಶ್ಲಾಘನೀಯ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ ಧರ್ಮ ಮತ್ತು ಶ್ರೇಷ್ಠತೆ ಹೆಚ್ಚಿದೆ. ಆಸ್ಪತ್ರೆಗಳಲ್ಲಿ ಕೆಟ್ಟ ಘಟನೆಗಳು ನಡೆದರೂ ಅದನ್ನು ಮರೆತು ವೈದ್ಯಕೀಯ ಸಿಬ್ಬಂದಿ ಮಾಡುವ ಸೇವೆ ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸ್ವರ್ಣ ಗ್ರೂಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ವೈದ್ಯರೇ ಪರಮಾತ್ಮನ ರೂಪ. ಅವರ ಸೇವೆ ಯಾವುದೇ ರೀತಿಯಿಂದ ಬಣ್ಣಿಸಿದರೂ ಸಾಲದು. ಯಾವುದೇ ವೈದ್ಯರ ಬಳಿ ಹೋದರೂ ವಿಶ್ವಾಸ ಇರಬೇಕು. ವಿಶ್ವಾಸ ಇಲ್ಲದಿದ್ದರೆ ಚಿಕಿತ್ಸೆ ಫಲಿಸುವುದಿಲ್ಲ. ಛಲ ಇದ್ದವರು ಮಾತ್ರ ವೈದ್ಯರಾಗಲು ಸಾಧ್ಯ ಎಂದರು.

ಪುತ್ತೂರಿನ ಶಸ್ತ್ರಚಿಕಿತ್ಸಕ ಡಾ. ರವಿಶಂಕರ ಪರ್ವಾಜೆ, ಕೆಎಂಸಿಆರ್‌ಐನ ಪ್ಯಾಥಾಲಜಿ ವಿಭಾಗದ ಸಹಪ್ರಾಧ್ಯಾಪಕಿ ಡಾ. ಕವಿತಾ ಏವೂರು ಅವರಿಗೆ ವೈದ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಏವೂರ ಮಾತನಾಡಿ, ನಾವು ಮಾಡಿದ ಅಲ್ಪ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿರುವುದರಿಂದ ಸಂತೋಷವಾಗಿದೆ. ನನಗೆ ನೀಡಿದ ನಗದು ಸಂಸ್ಥೆಗೆ ಮರುಪಾವತಿಸುತ್ತೇನೆ ಎಂದರು.

ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಮಕ್ಕಳ ತಜ್ಞ ಡಾ. ದೇವರಾಜ ರಾಯಚೂರು, ಡಾ. ಪ್ರಕಾಶ ಸಂಕನೂರ, ಕಸಾಪ ಧಾರವಾಡ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಮಹೇಶ ಹೊರಕೇರಿ ಮಾತನಾಡಿದರು.

ಪ್ರಶಸ್ತಿ ಸಂಸ್ಥಾಪಕ ಮಾರ್ತಾಂಡಪ್ಪ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. 20ಕ್ಕೂ ಹೆಚ್ಚು ಸಾಧಕ ಆದರ್ಶ ದಂಪತಿಗಳನ್ನು ಸನ್ಮಾನಿಸಲಾಯಿತು.

ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ. ಸತ್ಯನಾರಾಯಣ ಮಾಸ್ತಮ್ಮನವರ, ಡಾ.ಪಿ.ಎನ್. ಬಿರಾದಾರ, ಡಾ. ಕವನ್ ದೇಶಪಾಂಡೆ, ಡಾ. ಶ್ವೇತಾ ಸಂಕನೂರ ಇತರರು ಇದ್ದರು.

ಪ್ರೇಮಾನಂದ ಶಿಂಧೆ ಅವರ ತಂಡ ಸುಗಮ ಸಂಗೀತ ಹಾಗೂ ವಿವಿಧ ನೃತ್ಯ ಕಲಾ ತಂಡಗಳಿಂದ ನೃತ್ಯ ಸಂಭ್ರಮ ಜರುಗಿತು.

Share this article