- ಕರ್ನಾಟಕದಲ್ಲಿ ಬಿಜೆಪಿ ಸೋಲಿಸಲು ಮನೆ-ಮನೆಗೆ ಕರಪತ್ರ ಹಂಚಿ ಮನವರಿಕೆ
ಕಳೆದ ವರ್ಷಗಳಿಂದ ರೈತರಿಗೆ ಸುಳ್ಳು ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಲು ದೇಶಾದ್ಯಂತ ಆಂದೋಲನ ನಡೆಸುತ್ತಿರುವಂತೆ ಕರ್ನಾಟಕದಲ್ಲಿ ಬಿಜೆಪಿ ಸೋಲಿಸಲು ಮನೆ-ಮನೆಗೆ ಕರಪತ್ರ ಹಂಚಿ ಮನವರಿಕೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ನಾಯಕರು ತಿಳಿಸಿದ್ದಾರೆ.
ಈ ಸಂಬಂಧ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಇವರನ್ನೊಳಗೊಂಡ ತಂಡ ಶನಿವಾರ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ತಮ್ಮ ಆಂದೋಲನದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ 10 ವರ್ಷಗಳಲ್ಲಿ ರೈತರಿಗೆ ಸುಳ್ಳು ಹೇಳುತ್ತಾ ಬಂದಿದ್ದು ಕರ್ನಾಟಕ ರಾಜ್ಯ ರೈತ ಸಂಘ, ಸರ್ವೋದಯ ಕರ್ನಾಟಕ ಪಕ್ಷ ಸೇರಿದಂತೆ 540 ರೈತ ಪರ ಸಂಘಟನೆಗಳು ಸೇರಿ ರಚಿಸಿಕೊಂಡಿರುವ ಸಂಯುಕ್ತ ಕಿಸಾನ್ ವತಿಯಿಂದ ದೇಶದಾದ್ಯಂತ ಎನ್‌ಡಿಎ ಮಿತ್ರ ಪಕ್ಷ ಸೋಲಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ರೈತರ ಸಾಲ ಮನ್ನಾ ಮಾಡದ ಮೋದಿ ಅವರು ಕಾರ್ಪೊರೇಟ್ ಕಂಪನಿಗಳ 14 ಲಕ್ಷ ಕೋಟಿ ಸಾಲಮನ್ನಾ ಮಾಡುವ ಮೂಲಕ ರೈತರಿಗೆ ಮಾಡಿದ ಮೊದಲ ಮೋಸ ಎಂದ ಅವರು, ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿ ಬೆಲೆ ಏರಿಕೆ ಮೂಲಕ ಕೃಷಿ ವೆಚ್ಚ ದ್ವಿಗುಣವಾಗುವಂತೆ ಮಾಡಿದರು ಎಂದು ಹೇಳಿದರು.
ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಈ ಚುನಾವಣೆಗೆ ಸಂಬಂಧಿಸಿದಂತೆ ರೈತ ಸಂಘ ಅತ್ಯಂತ ಜವಾಬ್ದಾರಿಯಿಂದ ತೀರ್ಮಾನ ಕೈಗೊಂಡು ಕಳೆದ 17ರಿಂದ ಅಭಿಯಾನ ಕೈಗೊಂಡಿದೆ. ಕಳೆದ 10 ವರ್ಷಗಳ ಅವಧಿಯ ನರೇಂದ್ರ ಮೋದಿ ಆಡಳಿತ ಅತ್ಯಂತ ಕೆಟ್ಟದಾಗಿ ನಡೆಯುತ್ತಿದ್ದು, ಕೃಷಿ ಕ್ಷೇತ್ರ ಕಾರ್ಪೊರೇಟ್ ಕಂಪನಿಗಳಿಗೆ ಹೋಗದಂತೆ ತಡೆದು ಸರಿದಾರಿಗೆ ತರುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದರು.
20 ಕೆಸಿಕೆಎಂ 4