ಶಿವಮೊಗ್ಗ: ಬಿಸಿಯೂಟ ನೌಕರರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ, ಜುಲೈ 9 ರಂದು ರಾಷ್ಟ್ರಾದ್ಯಂತ ಮುಷ್ಕರ ಹಮ್ಮಿಕೊಂಡಿದ್ದು, ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲೂ ಕೂಡ ಬಿಸಿಯೂಟ ಅಡುಗೆಯನ್ನು ಬಂದ್ ಮಾಡಿ, ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ರಾಜ್ಯ ಬಿಸಿಯೂಟ ನೌಕರರ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಸಿಯೂಟ ನೌಕರರು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಮತ್ತು ಅವರ ಕೆಲಸದ ಕಾರ್ಯಗಳು ಹೆಚ್ಚಿದೆ. ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲಿ ವೇತನವನ್ನು ಹೆಚ್ಚಿಸಿಲ್ಲ. ಬಿಸಿಯೂಟ ಯೋಜನೆ ಪ್ರಾರಂಭವಾಗಿ 24 ವರ್ಷಗಳಾದರೂ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಎಂದರು.
ಜುಲೈ 9 ರಂದು ಬಿಸಿಯೂಟ ನೌಕರರು ತಮ್ಮ ಕೆಲಸಗಳನ್ನು ಬಂದ್‌ಮಾಡಿ, ಮುಷ್ಕರದಲ್ಲಿ ಪಾಲ್ಗೊಳ್ಳುತ್ತಾರೆ. ಪ್ರಮುಖವಾಗಿ ಎಂಡಿಎಂ ಯೋಜನೆ ಅನುದಾನ ಹೆಚ್ಚಿಸಬೇಕು. 26 ಸಾವಿರ ಕನಿಷ್ಟ ವೇತನ ನೀಡಬೇಕು. ಮಾಸಿಕ ಪಿಂಚಣಿ 10 ಸಾವಿರ ನೀಡಬೇಕು. ಕನಿಷ್ಠ ಕೂಲಿ ಜಾರಿಯಾಗಬೇಕು. ಸಾದಿಲ್ವಾರು ಜಂಟಿಖಾತೆ ಜವಾಬ್ದಾರಿಯನ್ನು ಮೊದಲಿನಂತೆ ಇಡಬೇಕು. ಪ್ರಮುಖವಾಗಿ ನಿವೃತ್ತಿಯಾದರೆ ಇಡಿಗಂಟು ನೀಡಬೇಕು. ಮೊಟ್ಟೆ ಸುಲಿಯುವ ಹಣವನ್ನು ಹೆಚ್ಚಿಸಬೇಕು. ಅನುದಾನಿತ ಶಾಲೆಗಳು ಸೇರಿದಂತೆ ಎಲ್ಲಾ ಶಾಲೆಗಳಲ್ಲೂ ಮೊಟ್ಟೆ ಕೊಡಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಸಂಚಾಲಕ ನಾರಾಯಣ್ ಮಾತನಾಡಿ, ಬಿಸಿಯೂಟ ನೌಕರರ ಹೋರಾಟಗಳಿಗೆ ನಾವು ಬೆಂಬಲ ನೀಡುತ್ತೇವೆ. ಅಲ್ಲದೆ ಅದರ ಜೊತೆಗೆ ಕಾರ್ಮಿಕರ ದುಡಿಯುವ ಸಮಯವನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸುವುದು ಸರಿಯಲ್ಲ, ಕಾರ್ಮಿಕರ ಕಲ್ಯಾಣಕ್ಕಾಗಿ ಅವರ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಬೇಕು. ಹಳೆಯ ಪೆನ್‌ಷನ್ ಸ್ಕೀಂನ್ನು ಮರುಸ್ಥಾಪಿಸಬೇಕು. ಕನಿಷ್ಠಕೂಲಿ ಮಾಸಿಕ ೩೫ ಸಾವಿರ ರು. ನೀಡಬೇಕು ಎಂಬುದು ಸೇರಿದಂತೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜುಲೈ ೯ರಂದು ರಾಷ್ಟ್ರಾದ್ಯಂತ ಸಿಐಟಿಯುವತಿಯಿಂದ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದರು. ಗೋಷ್ಠಿಯಲ್ಲಿ ಹನುಮಮ್ಮ, ಸುನೀತಾ, ಡೈಸಿರಾಣಿ ಇದ್ದರು.