ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ತಾಲೂಕಿನ ತುಂಬಲ ಗ್ರಾಮದಲ್ಲಿರುವ ನ್ಯಾಚುರಲ್ ಎಸೆನ್ಸಿಯಲ್ ಆಯಿಲ್ ಎಂಬ ಖಾಸಗಿ ಕಂಪನಿ ತಾಲೂಕಿನ ರೈತರಿಂದ ಸುಗಂಧರಾಜ ಹೂವು ಖರೀದಸದೇ ಅನವಶ್ಯಕವಾದ ಷರತ್ತುಗಳನ್ನು ವಿಧಿಸುವ ಮೂಲಕ ಬೆಳೆಗಾರರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಬೆಳೆಗಾರರು ಸುಗಂಧರಾಜ ಹೂವನ್ನು ರಸ್ತೆಯಲ್ಲಿ ಸುರಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ತಿರುಮಕೂಡಲಿನ ಪಿಟೀಲು ಚೌಡಯ್ಯ ವೃತ್ತದಲ್ಲಿ ಜಮಾವಣೆಗೊಂಡ ಸುಗಂಧರಾಜ ಹೂ ಬೆಳೆಗಾರರು ತಾಲೂಕಿನರೈತರಿಂದ ಹೂವು ಖರೀದಿ ಮಾಡದೇ ತಮಿಳುನಾಡಿನಿಂದ ಹೂವನ್ನು ತರಿಸಿ, ತಾಲೂಕಿನ ರೈತರಿಗೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ ಎಂದು ಆರೋಪಿಸಿ, ಮೂಟೆಗಟ್ಟಲೆ ಹೂವನ್ನು ರಸ್ತೆಗೆ ಸುರಿದು ನೆಸ್ಸೋ ಕಂಪನಿಯ ನಡೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದರು.
ರೈತ ಮುಖಂಡ ಶಿವಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲೇ ನೆಸ್ಸೋ ಕಂಪನಿಮಾಲೀಕರು ತಾಲೂಕಿನ ರೈತರಿಗೆ ದ್ರೋಹ ಮಾಡಿ ಹೊರ ರಾಜ್ಯದಿಂದ ಹೂವನ್ನು ಖರೀದಿ ಮಾಡುವ ಮೂಲಕ ತಾಲೂಕು ಮತ್ತು ಜಿಲ್ಲೆಯ ಹೂ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ಕಂಪನಿಯ ಅವೈಜ್ಞಾನಿಕ ನಡೆಯಿಂದ ರೈತ ತೀವ್ರ ನಷ್ಟ ಅನುಭವಿಸುವಂತಾಗಿದೆ ಎಂದರು.ಸುಗಂಧರಾಜ ಹೂ ಬೆಳೆಗಾರ ಶಿವರಾಮು ಮಾತನಾಡಿ, ತಾಲೂಕಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಾ.ಎಚ್.ಸಿ. ಮಹದೇವಪ್ಪ ರಂತಹ ನಾಯಕರು ಇದ್ದರೂ ರೈತರ ಕಷ್ಟ ಬಗೆಹರಿಸಲಾಗಿಲ್ಲ. ಫ್ಯಾಕ್ಟರಿಯವರು ರೈತರಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಾ ಬಂದಿದ್ದು, ಕೂಡಲೇ ಹಾಕಿರುವ ಷರತ್ತನ್ನು ಹಿಂಪಡೆದು ಸ್ಥಳೀಯ ಬೆಳೆಗಾರರಿಂದ ಹೂ ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.
ಸುಗಂಧರಾಜ ಹೂವು ಬೆಳೆಗಾರರ ಸಂಘದ ಅಧ್ಯಕ್ಷ ಬಸಪ್ಪ, ರೇವಣ್ಣ, ಮುರುಡೇಶ್, ಈಶಣ್ಣ, ಲಿಂಗರಾಜು, ಕುಮಾರ್, ಸಿದ್ದಣ್ಣ, ಪುಟ್ಟಸ್ವಾಮಿ, ಮಹದೇವಸ್ವಾಮಿ, ಮಹದೇವಣ್ಣ, ಚಿಕ್ಕನಂಜಣ್ಣ ಭಾಗವಹಿಸಿದ್ದರು.