ಪ್ರಕೃತಿ ಚಿಕಿತ್ಸೆಯೇ ಆರೋಗ್ಯಕರ ಬದುಕಿನ ದಾರಿ: ಡಾ. ನೀಲಗಿರಿ ಎಂ. ತಳವಾರ

KannadaprabhaNewsNetwork |  
Published : Nov 30, 2026, 02:15 AM IST
 | Kannada Prabha

ಸಾರಾಂಶ

ಕಾರ್ಯಕ್ರಮದಲ್ಲಿ ಗಾಂಧಿ ಸ್ವಯಂ ಸ್ವಾಸ್ಥ್ಯ ಪುರಸ್ಕಾರ-2026ಕ್ಕೆ ಭಾಜನರಾದ ಪಿ.ಸಿ. ತಮ್ಮಯ್ಯ ಅವರ ಸಮಾಜಮುಖಿ ಸೇವೆಯನ್ನು ಸ್ಮರಿಸಲಾಯಿತು. ಹುಣಸೂರು ತಾಲೂಕಿನ ಚೌಡಿಕಟ್ಟೆಯಲ್ಲಿ ಶಿವಯೋಗ ದೇಸಿ ಗೋಶಾಲಾ ಟ್ರಸ್ಟ್ ಸ್ಥಾಪಿಸಿ ಪರಿಸರ ಹಾಗೂ ಸಮುದಾಯದ ಹಿತದೃಷ್ಟಿಯಿಂದ ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರ

ಆಧುನಿಕ ಜೀವನಶೈಲಿ, ಬದಲಾದ ಆಹಾರ ಪದ್ಧತಿ ಹಾಗೂ ಹೆಚ್ಚುತ್ತಿರುವ ಒತ್ತಡದಿಂದಾಗಿ ಜನರು ವಿವಿಧ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ನೈಸರ್ಗಿಕ ಜೀವನಶೈಲಿ ಅಳವಡಿಸಿಕೊಂಡು ಸಹಜವಾಗಿ ಬದುಕಿದಾಗ ಮಾತ್ರ ಆರೋಗ್ಯ ಮತ್ತು ಸಂತೋಷ ಹೊಂದಲು ಸಾಧ್ಯ ಎಂದು ನಿವೃತ್ತ ಕುಲಸಚಿವರಾದ ಡಾ. ನೀಲಗಿರಿ ಎಂ. ತಳವಾರ ಅಭಿಪ್ರಾಯಪಟ್ಟರು.

ನಗರದ ಜಾನಪದ ಲೋಕದಲ್ಲಿ ಸ್ವಯಂ ಸ್ವಾಸ್ಥ್ಯ ನೇಚರ್ ಕ್ಯೂರ್ ಫೌಂಡೇಶನ್ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ, ಗಾಂಧಿ ಸ್ವಯಂ ಸ್ವಾಸ್ಥ್ಯ ಪುರಸ್ಕಾರ-2026 ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದು ಮುಖ್ಯವಲ್ಲ, ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಎಷ್ಟು ಪ್ರಾಮಾಣಿಕತೆ, ಪರಿಶ್ರಮ ಮತ್ತು ಬದ್ಧತೆಯಿಂದ ಸಾಧನೆ ಮಾಡುತ್ತೇವೆ ಎಂಬುದೇ ಮುಖ್ಯ ಎಂದರು.

ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ನಿಸ್ವಾರ್ಥ ಮನೋಭಾವದಿಂದ ಸಮಾಜಕ್ಕೆ ಕೊಡುಗೆ ನೀಡಬೇಕು. ವಾಣಿಜ್ಯೀಕರಣ ಹೆಚ್ಚುತ್ತಿರುವ ಇಂದಿನ ಕಾಲಘಟ್ಟದಲ್ಲಿಯೂ ಪಿ.ಪಿ. ತಮ್ಮಯ್ಯ ಅವರ ಸಮಾಜಮುಖಿ ಸೇವೆ ಶ್ಲಾಘನೀಯ ಎಂದರು.

ಈ ಹಿಂದೆ ಜೀವನದಲ್ಲಿ ಸಹಜತೆ ಇತ್ತು. ಆದರೆ ಇಂದು ಆಹಾರ, ನೀರು ಸೇರಿದಂತೆ ಯಾವುದರಲ್ಲಿಯೂ ನೈಸರ್ಗಿಕತೆ ಉಳಿದಿಲ್ಲ. ಯಾವ ವಿಚಾರಕ್ಕೆ ಆದ್ಯತೆ ನೀಡಬೇಕು ಎಂಬ ವಿವೇಚನೆ ಬೆಳೆಸಿಕೊಳ್ಳಬೇಕು. ನೈಸರ್ಗಿಕ ಜೀವನಶೈಲಿಯನ್ನು ಅಳವಡಿಸಿಕೊಂಡಾಗ ಆರೋಗ್ಯಕರ ಮತ್ತು ಸಂತೋಷದ ಬದುಕು ಸಾಧ್ಯವಾಗುತ್ತದೆ ಎಂದು ನೀಲಗಿರಿ ಎಂ. ತಳವಾರ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಿ.ಪಿ ತಮ್ಮಯ್ಯ ಅವರು, ನಗುವವನು ಬಡವನಲ್ಲ, ನಗದವನೇ ಬಡವ. ಸಾವಿಗೆ ಅಂಜಬಾರದು. ಧೈರ್ಯದಿಂದ, ಖುಷಿಯಾಗಿ ಇರಬೇಕು. ಆರೋಗ್ಯದ ವಿಚಾರದಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕು. ಪ್ರಕೃತಿ ಚಿಕಿತ್ಸೆಯ ಮಹತ್ವವನ್ನು ಜನರಿಗೆ ತಲುಪಿಸಲು ಎಲ್ಲರೂ ಸೈನಿಕರಂತೆ ನಿಲ್ಲಬೇಕು ಎಂದು ಕರೆ ನೀಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಅಲೋಪತಿ ಚಿಕಿತ್ಸೆಯ ಪ್ರಯೋಗಗಳಿಗೆ ಖರ್ಚು ಮಾಡುವ ಹಣದಲ್ಲಿ ಶೇ.5ರಷ್ಟನ್ನು ಆರೋಗ್ಯ ಜಾಗೃತಿ ಮತ್ತು ತಡೆಗಟ್ಟುವ ಕ್ರಮಗಳಿಗೆ ಮೀಸಲಿಟ್ಟರೂ ಜಗತ್ತಿನ ಜನರ ಆರೋಗ್ಯ ಸುಧಾರಣೆಗೆ ನೆರವಾಗಬಹುದು. ಆಹಾರ ಉತ್ಪಾದನೆ ಮತ್ತು ಸಂರಕ್ಷಣೆಯಲ್ಲಿ ವಿಷಕಾರಿ ಪದಾರ್ಥಗಳ ಬಳಕೆ, ಕಲಬೆರಕೆ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಆರೋಗ್ಯದ ವಿಚಾರದಲ್ಲಿ ಸರ್ಕಾರ ಮತ್ತು ಅಧಿಕಾರಿಗಳನ್ನು ಮಾತ್ರ ನಂಬದೆ ಸ್ವತಃ ಜಾಗೃತರಾಗಬೇಕು. ಔಷಧ ಕಲಬೆರಕೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ಆಹಾರ ಉತ್ಪಾದನೆ, ಸಂರಕ್ಷಣೆಯಲ್ಲಿ ವಿಷ ಹಾಕುತ್ತಿದ್ದಾರೆ. ಎಚ್ಚರಿಕೆ ವಹಿಸಬೇಕು.

ಸರ್ಕಾರವೇ ಜನರನ್ನು ರೋಗಿಷ್ಟರನ್ನಾಗಿ ಮಾಡುತ್ತಿದೆ. ಏಕೆಂದರೆ ಸರ್ಕಾರಕ್ಕೆ ಅದೇ ದೊಡ್ಡ ಬ್ಯುಸಿನೆಸ್ ಆಗಿದೆ. ಹಾಗಾಗಿ ಪ್ರಕೃತಿ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪ್ರಕೃತಿ ಚಿಕಿತ್ಸೆಯ ಮಹತ್ವ, ಆರೋಗ್ಯಕರ ಆಹಾರ ಪದ್ಧತಿ ಹಾಗೂ ನೈಸರ್ಗಿಕ ಜೀವನಶೈಲಿಯ ಕುರಿತು ಅನುಭವದ ಸಂವಾದ ನಡೆಯಿತು.

ಸ್ವಯಂ ಸ್ವಾಸ್ಥ್ಯ ಸಂಸ್ಥೆಯ ಮುಖ್ಯಸ್ಥರಾದ ಕೆ.ಎಸ್.ಗಿರಿರಾಜ್, ಪ್ರಕೃತಿ ಚಿಕಿತ್ಸೆ ಪ್ರಚಾಕರಾದ ಡಾ. ನೀ. ಗೂ ರಮೇಶ್, ಡಾ.ಬಿ.ಸಿ.ದೊಡ್ಡೇಗೌಡ, ಜ್ಯೋತಿ ಮೇರಿ, ಡಿ.ಎಂ.ಚಂದ್ರು, ನಟರಾಜ್, ಜಗದಾಂಬ, ಗಿರಿಧರ್, ರಾಮ್‌ಗೋಪಾಲ್, ದ.ಕೋ ಹಳ್ಳಿ ಚಂದ್ರಶೇಖರ್ ಉಪಸ್ಥಿತರಿದ್ದರು.

--------

ಪ್ರಶಸ್ತಿ ಪುರಸ್ಕೃತ ಪಿ.ಪಿ ತಮ್ಮಯ್ಯ ಅವರಿಗೆ ಗೌರವ

ಕಾರ್ಯಕ್ರಮದಲ್ಲಿ ಗಾಂಧಿ ಸ್ವಯಂ ಸ್ವಾಸ್ಥ್ಯ ಪುರಸ್ಕಾರ-2026ಕ್ಕೆ ಭಾಜನರಾದ ಪಿ.ಸಿ. ತಮ್ಮಯ್ಯ ಅವರ ಸಮಾಜಮುಖಿ ಸೇವೆಯನ್ನು ಸ್ಮರಿಸಲಾಯಿತು. ಹುಣಸೂರು ತಾಲೂಕಿನ ಚೌಡಿಕಟ್ಟೆಯಲ್ಲಿ ಶಿವಯೋಗ ದೇಸಿ ಗೋಶಾಲಾ ಟ್ರಸ್ಟ್ ಸ್ಥಾಪಿಸಿ ಪರಿಸರ ಹಾಗೂ ಸಮುದಾಯದ ಹಿತದೃಷ್ಟಿಯಿಂದ ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ತಮ್ಮ 75 ವರ್ಷಗಳ ಜೀವನ ಪಯಣದಲ್ಲಿ ಯೋಗ ವಿದ್ಯೆಯಲ್ಲಿ ಸಾಧನೆ ಮಾಡಿರುವ ಅವರು, ಗುರುಗಳಾಗಿ ಸಾವಿರಾರು ಜನರಿಗೆ ಉತ್ತಮ ಆರೋಗ್ಯ ಮತ್ತು ಸ್ವಾಸ್ಥ್ಯ ಬದುಕಿನ ಮಾರ್ಗದರ್ಶನ ನೀಡಿದ್ದಾರೆ. ಪ್ರಕೃತಿ ಚಿಕಿತ್ಸೆಯನ್ನು ಸ್ವತಃ ಅನುಸರಿಸುವುದರೊಂದಿಗೆ ಅದರ ಪ್ರಚಾರಕ್ಕೂ ಶ್ರಮಿಸುತ್ತಿದ್ದಾರೆ. ನಾಡಿನ ಆಸಕ್ತ ರೈತರಿಗೆ ಜಲಸಾಕ್ಷರತೆ ಹಾಗೂ ಸಹಜ ಕೃಷಿ ತರಬೇತಿಯಂತಹ ಕಾರ್ಯಗಳಲ್ಲಿಯೂ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಾಮಸ್ತಕಾಭಿಷೇಕಕ್ಕೆ ಸಂಘಟಿತ ಸಿದ್ಧತೆ ಅಗತ್ಯ: ಡಾ. ಹೆಗ್ಗಡೆ
ಸಿ ಆ್ಯಂಡ್ ಡಿ , ಸೆಕ್ಷನ್-೪ ಸಮಸ್ಯೆ ಪರಿಹಾರ ಅಗತ್ಯ: ಮಂತರ್‌