ಮಹನೀಯರು ಸತ್ತ ನಂತರವೂ ಜೀವಂತರಾಗಿರುತ್ತಾರೆ ಎಂಬುದಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜೀವಂತ ಉದಾಹರಣೆಯಾಗಿದ್ದಾರೆ. ಕಿತ್ತೂರು ರಾಣಿಚೆನ್ನಮ್ಮನವರ ಆಸ್ಥಾನದಲ್ಲಿದ್ದು ನಮ್ಮ ನಾಡಿಗಾಗಿ ತನ್ನ ಜೀವವನ್ನು ಅರ್ಪಣೆ ಮಾಡಿದ ಮಹಾನ್ ತ್ಯಾಗಿ. ಅವರ ಶೌರ್ಯ, ಸಾಹಸ ಪ್ರೇರಣದಾಯಕವಾಗಿದೆ. ಹಾಗಾಗಿ ಆಗಸ್ಟ್ 15 ರಂದು ಅವರ ಜನ್ಮದಿನವನ್ನು, ಜನವರಿ 26ರಂದು ಪುಣ್ಯಸ್ಮರಣೆಯನ್ನು ಆಚರಿಸುತ್ತೇವೆ.
ಕನ್ನಡಪ್ರಭ ವಾರ್ತೆ ರಾಮನಗರ
ಪ್ರತಿಭೆ ಯಾರಪ್ಪನ ಮನೆ ಸ್ವತ್ತಲ್ಲ. ಆದರೆ, ಪ್ರಸ್ತುತ ಪ್ರತಿಭೆಯನ್ನು ಜಾತಿಯಿಂದ ಅಳೆಯಲಾಗುತ್ತಿದೆ.
ಪ್ರತಿಭೆಗೆ ಜಾತಿ ಮಾನದಂಡವಾಗಬಾರದು. ಜಾತಿ ವ್ಯವಸ್ಥೆಯ ಸಂಕೋಲೆಗಳಿಂದ ಹೊರಬಂದು ಅಹಿಂದ ವರ್ಗಗಳು ಸಂಘಟಿತರಾಗಿ ಒಗ್ಗೂಡಿ ಮಾನವ ಸಮಾಜ ನಿರ್ಮಾಣ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಬಿಡದಿ ಪಟ್ಟಣದಲ್ಲಿ 25 ಅಡಿ ಎತ್ತರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿ ಉದ್ಯಾನವನ ಮತ್ತು ಫುಡ್ಕೋರ್ಟ್ ನಿರ್ಮಾಣ ಕಾಮಗಾರಿ ಶಂಕುಸ್ಥಾಪನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಲಿತರು, ಕುರುಬರು ಸೇರಿದಂತೆ ಹಿಂದುಳಿದ ವರ್ಗದ ಮಕ್ಕಳು ಇಂದು ಶೇ.90ರಷ್ಟು ಅಂಕಗಳನ್ನು ಪಡೆಯುತ್ತಿದ್ದಾರೆ. ಆದರೂ ಪ್ರತಿಭಾವಂತರನ್ನು ಜಾತಿಯಿಂದ ಗುರುತಿಸಲಾಗುತ್ತಿದೆ. ನಮ್ಮನ್ನು ನೋಡುವ ದೃಷ್ಟಿ ಬದಲಾಗಬೇಕು. ಯುವಕರು, ಓದಿಲ್ಲದವರು ಇದರ ಬಗ್ಗೆ ತಿಳಿದುಕೊಳ್ಳಬೇಕು. ಇತಿಹಾಸ ತಿಳಿಯದವರು ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
12 ಶತಮಾನದಲ್ಲಿ ಅಂದರೆ 900 ವರ್ಷಗಳ ಹಿಂದೆಯೇ ಬಸವಣ್ಣ, ಕನಕದಾಸರ ಆದಿಯಾಗಿ ಅನೇಕ ಸಾಧುಸಂತರು ಸಮಾಜ ಸುಧಾರಕರು ಮೇಲು-ಕೀಳು, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರು. ಅಂಬೇಡ್ಕರ್ ಅವರು ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶ ದೊರಕಿಸುವ ಸಲುವಾಗಿ 1950 ರ ಜನವರಿ 26 ರಂದು ಸಂವಿಧಾನ ಮಂಡನೆಯಾಗಿದೆ. ಎರಡೂವರೆ ವರ್ಷದ ಕಾಲ ಚರ್ಚೆಯಾಗಿ ಅದನ್ನು ಅನುಷ್ಠಾನಕ್ಕೆ ತರಲಾಯಿತು. ಆದರೂ ದೇಶದಲ್ಲಿ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶೂದ್ರ ವರ್ಗಕ್ಕೆ ಸೇರಿದವರೇ ಮಹಾಭಾರತ, ರಾಮಾಯಣವನ್ನು ರಚನೆ ಮಾಡಿದರು. ಇದು ಶೂದ್ರರಿಗೂ ಶಕ್ತಿ ಇತ್ತು ಎಂಬುದನ್ನು ತೋರಿಸುತ್ತದೆ. ಆದರೆ, ಚತುರ್ವರ್ಣ ವ್ಯವಸ್ಥೆಯಲ್ಲಿ ಶೂದ್ರರನ್ನು ಅಕ್ಷರ ಸಂಸ್ಕೃತಿಯಿಂದ ವಂಚಿತರನ್ನಾಗಿ ಮಾಡಲಾಯಿತು. ಎಲ್ಲರೂ ಮನುಸ್ಮೃತಿ ಅಲಿಖಿತ ಸಂವಿಧಾನವನ್ನು ನಂಬಿಕೊಂಡಿದ್ದರು. ಈ ಕಾರಣದಿಂದಾಗಿಯೇ ಶತಮಾನಗಳಿಂದ ನಾವು ಬಡವರಾಗಿ ಉಳಿಯಬೇಕಾಯಿತು. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಸಮಾನತೆಯನ್ನು ಬೆಂಬಲಿಸಿದರು. ಕೆಳವರ್ಗದವರು ಇಂತಹ ಕೆಲಸವನ್ನೇ ಮಾಡಬೇಕೆಂದು ನಿಯೋಜಿಸಿದ್ದರು. ಹಾಗಾಗಿ ಮೇಲ್ಜಾತಿಯವರು ದಲಿತರಿಗೆ ಅಕ್ಷರ ಕಲಿಯಲು ಅವಕಾಶ ಕೊಡಲಿಲ್ಲ. ಶೂದ್ರರಿಗೂ ಎಲ್ಲಾ ರೀತಿಯ ಶಕ್ತಿಯಿದ್ದರೂ ಸಹ ಉದ್ದೇಶಪೂರ್ವಕವಾಗಿ ಬಲತ್ಕಾರವಾಗಿ ಅವಕಾಶ ವಂಚಿತರಾಗುವಂತೆ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಮಹನೀಯರು ಸತ್ತ ನಂತರವೂ ಜೀವಂತರಾಗಿರುತ್ತಾರೆ ಎಂಬುದಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜೀವಂತ ಉದಾಹರಣೆಯಾಗಿದ್ದಾರೆ. ಕಿತ್ತೂರು ರಾಣಿಚೆನ್ನಮ್ಮನವರ ಆಸ್ಥಾನದಲ್ಲಿದ್ದು ನಮ್ಮ ನಾಡಿಗಾಗಿ ತನ್ನ ಜೀವವನ್ನು ಅರ್ಪಣೆ ಮಾಡಿದ ಮಹಾನ್ ತ್ಯಾಗಿ. ಅವರ ಶೌರ್ಯ, ಸಾಹಸ ಪ್ರೇರಣದಾಯಕವಾಗಿದೆ. ಹಾಗಾಗಿ ಆಗಸ್ಟ್ 15 ರಂದು ಅವರ ಜನ್ಮದಿನವನ್ನು, ಜನವರಿ 26ರಂದು ಪುಣ್ಯಸ್ಮರಣೆಯನ್ನು ಆಚರಿಸುತ್ತೇವೆ. ಇವರ ಸಾಹಸ, ಪ್ರಾಮಾಣಿಕಸೇವೆ ಹಾಗೂ ಬದ್ಧತೆ ಮುಂದಿನ ಪೀಳಿಗೆಗೂ ತಿಳಿಸುವ ನಿಟ್ಟಿನಲ್ಲಿ ಎಲ್ಲೆಡೆ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
ಕುಲಕಲುವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ? ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ? ಎಂದು ಕನಕದಾಸರು ಅಂದೆ ಪ್ರಶ್ನಿಸಿದ್ದರು. ತಮ್ಮ ಕೀರ್ತನೆಗಳ ಮುಖೇನ ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದಿದರು. ಇಂದು ಅನ್ನರಾಮಯ್ಯ ಎಂದು ಕರೆಯಿಸಿಕೊಳ್ಳುವ ಸಿದ್ಧರಾಮಯ್ಯನವರು ದೇವರಾಜ ಅರಸುರವರ ನಂತರ ರಾಜ್ಯದಲ್ಲಿ ಬಡವರ ಪರ ಧ್ವನಿ ಎತ್ತಿದ ಧೀಮಂತ ನಾಯಕ ಎಂದರು.
ಸಿದ್ದರಾಮಯ್ಯರವರ ನಾಯಕತ್ವದಲ್ಲಿ ಕಾಂಗ್ರೆಸ್ಪಕ್ಷ ಬಲಿಷ್ಠವಾಗಿ ಬೇರೂರಿದೆ. ಸಿಎಂ ಡಿ.ಕೆ.ಶಿವಕುಮಾರ್ರವರ ಜತೆಗೂಡಿ ರಾಜ್ಯದಲ್ಲಿ ಬದಲಾವಣೆಗೆ ನಾಂದಿ ಹಾಡಿದರು. ಸಿದ್ಧರಾಮಯ್ಯನವರ ಸಹಕಾರದಿಂದ ತಾವು ಸಚಿವರಾಗಲು ಸಾಧ್ಯವಾಗಿದೆ ಎಂದು ಬಾಲಕೃಷ್ಣ ತಿಳಿಸಿದರು.
ಗ್ಯಾರಂಟಿ ಯೋಜನೆ ಪ್ರಾಧಿಕಾರದ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಕುರುಬ ಸಮಾಜದ ಶ್ರೀಗಳಾದ ಶಿವಪುತ್ರ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ ಹಾಗೂ ಇನ್ಸೈಟ್ ಐಎಎಸ್ ಅಕಾಡೆಮಿ ಸಂಸ್ಥಾಪಕ ವಿನಯ್ಕುಮಾರ್ ಮಾತನಾಡಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಶಿಲ್ಪಿ ವಿಜಯ್ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಜಿಬಿಡಿಎ ಅಧ್ಯಕ್ಷ ಎಲ್.ಚಂದ್ರಶೇಖರ್, ಬಮೂಲ್ ನಿರ್ದೇಶಕ ಪಿ.ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಬಿಡದಿ ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್, ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಮಧುಕುಮಾರ್, ಮಹಿಳಾ ಮುಖಂಡೆ ದೀಪಮುನಿರಾಜು ಮತ್ತಿತ್ತರರು ಉಪಸ್ಥಿತರಿದ್ದರು.
--
ಬಡವರ ಆರ್ಥಿಕ ಬೆಳವಣಿಗೆಗೆ ಒತ್ತುನೀಡುವ ನಿಟ್ಟಿನಲ್ಲಿ ಸಿಎಂ ಆಗಿ ಮೊದಲ ಅವಧಿಯಲ್ಲಿ ಅನೇಕ ಭಾಗ್ಯಗಳನ್ನು ಅನುಷ್ಠಾನಕ್ಕೆ ತಂದೆ. ಎರಡನೇ ಅವಧಿಯಲ್ಲಿ ಅಸಮಾನತೆ ದೂರಮಾಡಲು ಬಡತನದ ಅಂತರ ಕಡಿಮೆ ಮಾಡಲು ಗ್ಯಾರಂಟಿ ಯೋಜನೆ ಜಾರಿಗೆ ತರಲಾಯಿತು. ಇದು ಜಾತ್ಯತೀತವಾಗಿ ಎಲ್ಲಾ ವರ್ಗದ ಬಡವರಿಗೆ ಅನುಕೂಲವಾಗುತ್ತಿದೆ. ಈ ಹಿಂದೆ ಆರ್ಥಿಕ ಸ್ಥಿತಿವಂತರಿಗಷ್ಟೇ ಅನ್ನ ಸೀಮಿತವಾಗಿತ್ತು. ಎಲ್ಲರ ಮನೆಯಲ್ಲೂ ಅನ್ನ ಇರಬೇಕೆನ್ನುವ ಕಾರಣದಿಂದ ಅನ್ನಭಾಗ್ಯ ಕಾರ್ಯಕ್ರಮ ಜಾರಿಗೆ ತಂದಿದ್ದೇನೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.