ಶಿಗ್ಗಾಂವಿ: ನವರಾತ್ರಿಯ ಸಂದರ್ಭದಲ್ಲಿ ನಾಡಿನಾದ್ಯಂತ ದೇವತೆಗಳಿಗೆ ವಿಶೇಷ ಪೂಜೆ- ಪುನಸ್ಕಾರಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ತಾಲೂಕಿನ ನಾರಾಯಣಪುರ ಗ್ರಾಮದ ಉದ್ಭವಮೂರ್ತಿ ಶ್ರೀ ದ್ಯಾಮವ್ವ ದೇವಿಗೆ ವಿವಿಧ ರಾಜ್ಯ, ಜಿಲ್ಲೆಗಳ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ತಾಲೂಕಿನ ಬಂಕಾಪುರ, ಕೋಣಕೇರಿ ರಸ್ತೆಯ ಬಾಡ ಮತ್ತು ನಾರಾಯಣಪುರ ಗ್ರಾಮಗಳ ಮಧ್ಯ ಈ ದೇವಸ್ಥಾನವಿದ್ದು, ಸುಮಾರು 6 ಅಡಿ ಎತ್ತರ, 12 ಅಡಿ ಅಗಲ, 8 ಅಡಿ ದಪ್ಪದ ವಿಷಾಲ ಉದ್ಭವ ಬಂಡೆಯ ಪೂರ್ವ, ಪಶ್ಚಿಮ, ಉತ್ತರ ಭಾಗಗಳಲ್ಲಿ ದೇವಿಯ 10 ಮೂರ್ತಿಗಳು ಮೂಡಿಬಂದಿವೆ ಎಂದು ಹೇಳಲಾಗುತ್ತಿದೆ. ಇಲ್ಲಿಗೆ ಅಸಂಖ್ಯಾತ ಭಕ್ತರು ಆಗಮಿಸುತ್ತಿರುವುದು ವಿಶೇಷ.ಶ್ರಾವಣ ಮಾಸ ಮತ್ತು ದಸರಾ ಸಂದರ್ಭದಲ್ಲಿ ದೇವಿಗೆ ವಿಶೇಷ ಪೂಜೆಗಳು ನಡೆದರೆ, ಪ್ರತಿ ಹುಣ್ಣಿಮೆಗೆ ಪಲ್ಲಕ್ಕಿ ಉತ್ಸವ ಮಾಡಲಾಗುತ್ತಿದೆ. ಪ್ರತಿ ಶುಕ್ರವಾರ ಮತ್ತು ಮಂಗಳವಾರ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶ್ರೀಗಳು, ಸದಾಶಿವ ಪೇಟೆಯ ಶಿವದೇವ ಶರಣರು, ಹೋತನಹಳ್ಳಿಯ ಶ್ರೀಗಳು ಸೇರಿದಂತೆ ಅನೇಕ ಗಣ್ಯರು ಬಂದು ದೇವಿ ದರ್ಶನ ಪಡೆಯುತ್ತಿದ್ದಾರೆ.
ತಾಲೂಕಿನ ನಾರಾಯಣಪುರ, ಬಾಡ, ಸದಾಶಿವಪೇಟೆ, ಹಳೆಬಂಕಾಪುರ, ಮೂಕಬಸರಿಕಟ್ಟಿ, ಮುನವಳ್ಳಿ, ಬಂಕಾಪುರ ಸೇರಿದಂತೆ ಅನೇಕ ಗ್ರಾಮಗಳ ಭಕ್ತರು ಶೇಖಪ್ಪ ಹಲ್ಮನಿ ಅವರ ಹೊಲದಲ್ಲಿರುವ ಈ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಪಡಿಸುಲು ಸಹಕರಿಸುತ್ತಿದ್ದಾರೆ.ವರ್ಷದಿಂದ ವರ್ಷಕ್ಕೆ ದೇವಿಯ ಮೂರ್ತಿಗಳು ಬಂಡೆಗಲ್ಲಿನ ಮೇಲೆ ಸ್ಪಷ್ಟವಾಗಿ ಬೆಳೆಯುತ್ತಿದ್ದು, ಈ ವಿಶೇಷ ಉದ್ಭವಮೂರ್ತಿ ಶ್ರೀ ದ್ಯಾಮವ್ವ ದೇವಿಯಲ್ಲಿ ಭಕ್ತರು ಕಾಯಿ, ತೊಟ್ಟಿಲು ಕಟ್ಟುವ ಮೂಲಕ ಅನೇಕ ಹರಿಕೆಗಳನ್ನು ಕಟ್ಟಿಕೊಳ್ಳುತ್ತಾರೆ. ಇಷ್ಟಾರ್ಥಗಳು ನೆರವೇರಿದ ಮೇಲೆ ಬಂದು ತಾಯಿಗೆ ವಿಷೇಶ ಪೂಜೆ ಸಲ್ಲಿಸಿ ಕೃತಾರ್ತರಾಗುತ್ತಾರೆ ಎಂದು ಶ್ರೀದೇವಿ ಆರಾಧಕ ಶೇಖಪ್ಪ ಹುಲ್ಮನಿ ಹೇಳಿದರು.