ಚಳ್ಳಕರೆ ನಗರದಲ್ಲಿ ನವರಾತ್ರಿ ಉತ್ಸವ ಸಂಪನ್ನ

KannadaprabhaNewsNetwork | Published : Oct 13, 2024 1:09 AM

ಸಾರಾಂಶ

ಈ ಬಾರಿ ತಾಲೂಕಿನೆಲ್ಲೆಡೆ ಉತ್ತಮ ಮಳೆಯಾಗಿ ಹಸಿರಿನ ವಾತಾವರ ನಿರ್ಮಾಣವಾಗಿದ್ದು, ಚಳ್ಳಕರೆ ನಗರದಲ್ಲಿ ನವರಾತ್ರಿ ಉತ್ಸವಕ್ಕೆ ವಿಶೇಷ ಕಳೆಬಂದಿದೆ. ಭಕ್ತರು ಬನ್ನಿಮಂಟಪಕ್ಕೆ ಆಗಮಿಸಿ ಗ್ರಾಮ ದೇವರ ಸಮಾಗಮದಲ್ಲಿ ನಡೆದ ಬನ್ನಿ ಉತ್ಸವಕ್ಕೆ ಸಾಕ್ಷಿಯಾದರು. ಬನ್ನಿಮಂಟಪಕ್ಕೆ ಗ್ರಾಮ ದೇವ ಶ್ರೀ ವೀರಭದ್ರಸ್ವಾಮಿ, ಶ್ರೀ ಚಳ್ಳಕೆರೆಯಮ್ಮ, ಶ್ರೀ ಉಡಸಲಮ್ಮ ಆಗಮಿಸಿದ ಕೆಲವೇ ನಿಮಿಷಗಳಲ್ಲಿ ಮಳೆ ಆರಂಭವಾದರೂ ಕದಲದ ಜನ ದೇವರುಗಳಿಗೆ ಜೈಕಾರ ಹಾಕುತ್ತಲೇ ಮಳೆಯಲ್ಲೇ ಬನ್ನಿ ಮುಡಿಯುವ ಕ್ಷಣಕ್ಕಾಗಿ ಕಾತುರದಿಂದ ಕಾದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕಳೆದ ಒಂಭತ್ತು ದಿನಗಳಿಂದ ನವರಾತ್ರಿ ಉತ್ಸವ ಹಿನ್ನೆಲೆ ನಗರದ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಪುನಸ್ಕಾರಗಳು ಯಶಸ್ವಿಯಾಗಿ ನಡೆದಿವೆ. ಶನಿವಾರ ಸಂಜೆ ಸುಮಾರು 5.40ರ ಸಮಯದಲ್ಲಿ ಬಳ್ಳಾರಿ ರಸ್ತೆಯ ಬನ್ನಿಮಂಟಪದ ಮೈದಾನದಲ್ಲಿ ಗ್ರಾಮ ದೇವ ಶ್ರೀ ವೀರಭದ್ರಸ್ವಾಮಿ, ಶ್ರೀ ಚಳ್ಳಕೆರೆಯಮ್ಮ, ಶ್ರೀ ಉಡಸಲಮ್ಮ ದೇವರುಗಳ ಸಮ್ಮುಖದಲ್ಲಿ ಪುರಂತಪ್ಪನ ವೀರನಾಟ್ಯದೊಂದಿಗೆ ಅಂಬು ಕಡಿಯುವ ಮೂಲಕ ವೈಭವದ ದಸರಾಕ್ಕೆ ತೆರೆ ಎಳೆಯಲಾಯಿತು.

ಬನ್ನಿಮಂಟಪದ ಸುತ್ತ ನಗರದ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ನವರಾತ್ರಿ ಉತ್ಸವಕ್ಕೆ ಉತ್ಸಾಹ ತುಂಬಿದರು. ಮೂರು ಗ್ರಾಮ ದೇವರುಗಳನ್ನು ಮಂಗಳವಾದ್ಯಗಳೊಂದಿಗೆ ಚಳ್ಳಕೆರೆಯಮ್ಮ ದೇವಸ್ಥಾನದ ಸನ್ನಿಧಿಯ ಮೂಲಕ ಮೆರವಣಿಗೆ ಆರಂಭಿಸಿ ಬನ್ನಿಮಂಟಪಕ್ಕೆ ಕರೆತರಲಾಯಿತು.

ನಂತರ ಬಸವಣ್ಣ, ಪುರಂತಪ್ಪ, ಚಳ್ಳಕೆರೆಯಮ್ಮ, ಉಡಸಲಮ್ಮ, ವೀರಭದ್ರಸ್ವಾಮಿ ದೇವರ ಭಾವಚಿತ್ರದ ಭವ್ಯವಾದ ಮೆರವಣಿಗೆ ಉದ್ದಕ್ಕೂ ಭಕ್ತರು ಜೈಯಕಾರ ಹಾಕಿದರು. ಇದೇ ಸಂದರ್ಭದಲ್ಲಿ ಪೊಲೀಸರು ದಸರಾ ಹಬ್ಬದ ಹಿನ್ನೆಲೆ ದೇವರಗಳ ಮೆರವಣಿಗೆಗೆ ತೊಂದರೆಯಾಗದಂತೆ ಸಂಚಾರ ನಿಯಂತ್ರಿಸಿ ಭಕ್ತರಿಗೆ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

ಶಾಸಕ ಟಿ. ರಘುಮೂರ್ತಿ, ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತಪಾಲಯ್ಯ, ಸದಸ್ಯ ಬಿ.ಟಿ. ರಮೇಶ್‌ಗೌಡ, ಎಂ.ಜೆ. ರಾಘವೇಂದ್ರ, ಸುಮಭರಮಣ್ಣ, ಶಿವಕುಮಾರ್, ಎಸ್. ಜಯಣ್ಣ, ನಾಮಿನಿ ಸದಸ್ಯ ವೀರಭದ್ರಪ್ಪ, ಕಾಂಗ್ರೆಸ್ ಮುಖಂಡ ಟಿ. ರವಿಕುಮಾರ್, ಪ್ರಭುದೇವ್, ಶಶಿಧರ, ಎಚ್.ವಿ. ಪ್ರಸನ್ನಕುಮಾರ್, ಡಾ. ಎಸ್.ಡಿ. ಲೋಕೇಶ್, ಪಿ. ತಿಪ್ಪೇಸ್ವಾಮಿ, ಕೆ.ಎಂ. ಕೋಟ್ರೇಶ್, ಶಿವಕುಮಾರ್, ಕೆ.ಎಂ. ಅರವಿಂದ್, ತರಕಾರಿ ಮಂಜಣ್ಣ, ಡಿ.ಎಂ. ತಿಪ್ಪೇಸ್ವಾಮಿ, ಶಿವಕುಮಾರಸ್ವಾಮಿ, ವೀರೇಶ್ ಮುಂತಾದವರು ಭಾಗವಹಿಸಿದ್ದರು.

Share this article