ಹರಪನಹಳ್ಳಿ: ತಾಲೂಕಿನ ಅರಸೀಕೆರೆಯಲ್ಲಿ ದಸರಾ ಹಬ್ಬದಂದು ಮಹಾನವಮಿ ಬಂಡಿ ಮೆರವಣಿಗೆ ವೈಭವದಿಂದ ಜರುಗಿತು. ದಸರಾ ಹಬ್ಬದಂದು ಬಾರಿಕರ ಮನೆಯಿಂದ ಎರಡು ಜೋಡೆತ್ತುಗಳು ಈ ಮೆರವಣಿಗೆಯಲ್ಲಿ ಪ್ರತಿ ವರ್ಷದಂತೆ ಪಾಲ್ಗೊಂಡವು. ಮಹಾನವಮಿ ಬಂಡಿಯು ಅರಸೀಕೆರೆಯ ಪ್ರಮುಖ ಬೀದಿಗಳಲ್ಲಿ ಅತೀ ವೇಗದಿಂದ ಸಾಗಿ ಅರಸೀಕೆರೆ ಸಮೀಪವಿರುವ ಅಡವಿ ಮಲ್ಲಾಪುರ ಗ್ರಾಮದ ಮೈಲಾರ ಲಿಂಗೇಶ್ವರ ದೇವಸ್ಥಾನದವರೆಗೂ ಸಾಗಿತು. ಇದಕ್ಕೂ ಮೊದಲು ಮೈಲಾರ ಲಿಂಗೇಶ್ವರ ಮೂರ್ತಿಯನ್ನು ಅರಸೀಕೆರೆ ದೇವಸ್ಥಾನದಿಂದ ಅಡವಿ ಮಲ್ಲಾಪುರದ ದೇವಸ್ಥಾನದವರೆಗೂ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಸುಮಾರು 3 ಕಿಮೀ ದೂರದ ವರೆಗೂ ಕಾಲ್ನಡಿಗೆಯಲ್ಲಿಯೇ ಸಾಗಿ ಅಲ್ಲಿ ದೇವಸ್ಥಾನದಲ್ಲಿ ಪೂಜೆ ಮಾಡಲಾಯಿತು. ನಂತರ ಈ ಜೋಡೆತ್ತುಗಳ ಮಹಾನವಮಿ ಬಂಡಿಯು ಸಾಗಿತು.
ಈ ಸಂದರ್ಭದಲ್ಲಿ ಮಾಜಿ ಸಂಸದ ವೈ. ದೇವೇಂದ್ರಪ್ಪ, ಮುಖಂಡರಾದ ವೈ.ಡಿ. ಅಣ್ಣಪ್ಪ, ಪ್ರಶಾಂತ್ ಪಾಟೀಲ್, ಎ.ಹೆಚ್. ಪಂಪಣ್ಣ, ಪರಶುರಾಮ್, ಆನಂದಪ್ಪ, ವೈ. ರಂಗನಾಥ್, ಕೆ. ಅಂಜಿನಪ್ಪ, ವೆಂಕಟೇಶ್ ಶೆಟ್ರು, ಕೆ.ಬಸವರಾಜ್, ಹೆಚ್. ನಾಗರಾಜಪ್ಪ, ಡಾ. ಎಂ. ಸುರೇಶ್, ವೈ. ಕೊಟ್ರೇಶ್, ಭಕ್ತಾಧಿಗಳು ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.ಅಂಬುಛೇದನ ಮೂಲಕ ದಸರಾ ಉತ್ಸವಕ್ಕೆ ತೆರೆ
ಹರಪನಹಳ್ಳಿ: ಅಂಬು ಛೇಧನ ವಿಶೇಷ ಕಾರ್ಯಕ್ರಮ ಮೂಲಕ ತಾಲೂಕಿನ ಉಚ್ಚಂಗಿದುರ್ಗದ ಐತಿಹಾಸಿಕ ಉಚ್ಚೆಂಗೆಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿಯ ಒಂಬತ್ತು ದಿನಗಳ ದಸರಾ ಉತ್ಸವಕ್ಕೆ ಶನಿವಾರ ಸಂಜೆ ತೆರೆ ಬಿದ್ದಿತು.ಹಿಂದೆ ಶುಂಭ, ನಿಶುಂಭ, ಮಹಿಷಾಸುರ ಎಂಬ ರಾಕ್ಷಸರ ಕಿರುಕುಳ ಜಾಸ್ತಿಯಾದಾಗ ದೇವತೆಗಳೆಲ್ಲ ಆಗಮಿಸಿ ಉಚ್ಚೆಂಗೆಮ್ಮ ದೇವಿಯ ಬಳಿ ಈ ರಾಕ್ಷಕರ ಕಿರುಕುಳದ ಬಗ್ಗೆ ಹೇಳಿದಾಗ ದೇವಿ ಆ ರಾಕ್ಷಸರನ್ನು ಸಂಹಾರ ಮಾಡಿದ ವಿಜಯ ದಶಮಿ ದಿನದಂದು ಅಂಬು ಛೇಧನ (ಬಿಲ್ಲಿನಿಂದ ಬನ್ನಿ ಮರಕ್ಕೆ ಬಾಣವನ್ನು ಹೊಡೆಯುವುದು) ಎಂಬ ಕಾರ್ಯಕ್ರಮ ಅನಾದಿ ಕಾಲದಿಂದಲೂ ನಡೆಸುತ್ತ ಬರಲಾಗಿದೆ ಎಂದು ಹಿರಿಯ ಭಕ್ತರು ತಿಳಿಸುತ್ತಾರೆ.
ನವರಾತ್ರಿ 9 ದಿನಗಳ ಕಾಲ ದೇವಿಗೆ ಪ್ರತಿದಿನ ಒಂದೊಂದು ರೀತಿ ವಿಶೇಷ ಪೂಜೆ ಸಲ್ಲಿಸಿ ಅಂತಿಮ ದಿನವಾದ ಶನಿವಾರ ದೇವಸ್ಥಾನದಿಂದ ರಾಜಬೀದಿಯಲ್ಲಿ ಉಚ್ಚೆಂಗೆಮ್ಮ ದೇವಿಯನ್ನು ಮೆರವಣಿಗೆ ಮೂಲಕ ಕೋಟೆಯಲ್ಲಿರುವ ಬನ್ನಿ ಮಂಟಪಕ್ಕೆ ಕರೆ ತರುತ್ತಾರೆ.ದೇವಿ ಪಟವನ್ನು ₹3 ಲಕ್ಷಕ್ಕೆ ಬಂಡಿ ಮ್ಯಾಗಳ ಕೆಂಚಪ್ಪ ಹರಾಜಿನಲ್ಲಿ ಪಡೆದರು. ಬನ್ನಿ ಮಂಟಪದ ಬಳಿ ಉಚ್ಚಂಗಿದುರ್ಗ, ಯು.ಕ ಲ್ಲಹಳ್ಳಿ, ಚಟ್ನಿಹಳ್ಳಿ, ಯು. ಬೇವಿನಹಳ್ಳಿ, ಹಿರೇಮೇಗಳಗೇರಿ ಸೇರಿದಂತೆ ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಜಮಾಯಿಸಿರುತ್ತಾರೆ. ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಹುಚ್ಚಪ್ಪ ಅವರು ಬಿಲ್ಲಿನಿಂದ ಬಾಣವನ್ನು ಬನ್ನಿ ಮರಕ್ಕೆ ಬಿಡುತ್ತಾರೆ.
ಆಗ ಭಕ್ತರು ಬನ್ನಿ ಗಿಡದಿಂದ ಬನ್ನಿ ಕಿತ್ತು ದೇವರಿಗೆ ಹಾಕಿ ಬೇಡಿಕೊಳ್ಳುತ್ತಾರೆ. ನಂತರ ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುತ್ತಾರೆ. ಅರಸಿಕೇರಿ ಪಿಎಸ್‌ಐ ರಂಗಯ್ಯ ಬಂದೋಬಸ್ತ್ ಏರ್ಪಡಿಸಿದ್ದರು.ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖಂಡರು, ಧಾರ್ಮಿಕ ದತ್ತಿ ಇಲಾಖೆ ಸಿಬ್ಬಂದಿ, ಅರ್ಚಕರು ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.