ಹುಬ್ಬಳ್ಳಿ:
ಬಿಹಾರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ಜನಾಭಿಪ್ರಾಯ ಎನ್‌ಡಿಎ ಪರವಾಗಿದೆ ಎಂದರು.
ನಿತೀಶಕುಮಾರ ಪರವಾಗಿ ಭಿನ್ನಾಭಿಪ್ರಾಯ ಕುರಿತಂತೆ ಪ್ರತಿಕ್ರಿಯೆ ನೀಡಿ, ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಸರ್ವೇ ಸಾಮಾನ್ಯ, ಭಿನ್ನಾಭಿಪ್ರಾಯ ಇಲ್ಲದಿದ್ದರೆ ಅದು ಪ್ರಜಾಪ್ರಭುತ್ವವಲ್ಲ ಎಂದು ಹೇಳಿದರು.ಪ್ರಶಾಂತ ಕಿಶೋರ್ ಸ್ಪರ್ಧೆ ಕುರಿತು, ಇಷ್ಟು ದಿನ ಅವರು ಕಿಂಗ್ ಮೇಕರ್ ಆಗಿದ್ದರು, ಇದೀಗ ಕಿಂಗ್ ಆಗಲು ಹೊರಟಿದ್ದಾರೆ. ಇದೊಂದು ಹೊಸ ಪ್ರಯೋಗ, ಫಲಿತಾಂಶ ಬಂದ ಮೇಲೆ ಯಾರು ಕಿಂಗ್, ಯಾರು ಕಿಂಗ್ ಮೇಕರ್ ಎನ್ನುವುದು ತಿಳಿಯಲಿದೆ. ಒಟ್ಟಿನಲ್ಲಿ ಬಿಹಾರದ ಜನರು ಎನ್‌ಡಿಎ ಪರವಾಗಿ ಇದ್ದಾರೆ. ನಮ್ಮ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲಾಠಿ ನಿಷೇಧಿತ ಅಸ್ತ್ರವಲ್ಲ:ಆರ್‌ಎಸ್‌ಎಸ್ ಸ್ವಯಂ ಸೇವಕರು ಹಿಡಿದುಕೊಳ್ಳುವ ಲಾಠಿ ನಿಷೇಧಿತ ಅಸ್ತ್ರವಲ್ಲ. ಅದು ದೇಶ ಭಕ್ತರಿಗೆ ಆತ್ಮವಿಶ್ವಾಸ ಮೂಡಿಸುತ್ತದೆ. ಹೀಗಾಗಿ, ಆರ್‌ಎಸ್‌ಎಸ್‌ನವರು ಲಾಠಿ ಹಿಡಿದರೆ ತಪ್ಪೇನು ಎಂದು ಹರಿಪ್ರಸಾದ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸ್ವಯಂ ಸೇವಕರು ಲಾಠಿ ಹಿಡಿಯುವುದು ದೇಶದ್ರೋಹಿಗಳೊಂದಿಗೆ ಸಂಘರ್ಷಕ್ಕೆ ಮಾತ್ರ. ದನ ಕಾಯುವುದು ಭಾರತ ಸಂಸ್ಕೃತಿಯಲ್ಲಿ ಉತ್ತಮ ಕಾರ್ಯ. ಸ್ವತಃ ಶ್ರೀಕೃಷ್ಣನೇ ದನ ಕಾದಿದ್ದಾನೆ. ನಾನೂ ದನ ಕಾದೇ ಬಂದಿದ್ದೇನೆ. ಕಾಂಗ್ರೆಸ್ ನವರಿಗೆ ದನ ಕಾಯುವ ಶ್ರೇಷ್ಠತೆಯ ಬಗ್ಗೆ ಅರಿವಿಲ್ಲ, ಅವರಿಗೆ ಕೇವಲ ದೇಶ ಒಡೆಯುವುದು, ಹಣ ದೋಚುವುದು ಮಾತ್ರ ಗೊತ್ತು ಎಂದು ಕುಟುಕಿದರು.
ಸರ್ಕಾರಕ್ಕೆ ಗುತ್ತಿಗೆದಾರರು ಬೆದರಿಕೆ ಹಾಕುತ್ತಿದ್ದಾರೆ. ಶೇ.60 ಕಮಿಷನ್ ಆರೋಪ ಮಾಡುತ್ತಿದ್ದಾರೆ. ಪ್ರತಿಷ್ಠಿತ ಗೂಗಲ್ ಸಹ ರಾಜ್ಯದಿಂದ ವಿಶಾಖಪಟ್ಟಣಕ್ಕೆ ಹೋಗಿದೆ. ಇಂತಹ ಎಲ್ಲ ವಿಚಾರಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಆರ್‌ಎಸ್‌ಎಸ್ ಮುನ್ನಲೆಗೆ ತರುತ್ತಿದ್ದಾರೆ ಎಂದು ಕಿಡಿಕಾರಿದರು.