ಎನ್‌ಡಿಎ ಅಭ್ಯರ್ಥಿ ನಿಖಿಲ್ ನಾಮಪತ್ರ ಸಲ್ಲಿಕೆ

KannadaprabhaNewsNetwork | Published : Oct 26, 2024 1:03 AM

ಸಾರಾಂಶ

ಚನ್ನಪಟ್ಟಣ: ಹೈವೊಲ್ಟೇಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಚನ್ನಪಟ್ಟಣ: ಹೈವೊಲ್ಟೇಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ನಗರದ ತಾಲೂಕು ಕಚೇರಿಗೆ ಅಪಾರ ಬೆಂಬಲಿಗರೊಂದಿಗೆ ಶುಕ್ರವಾರ ಮಧ್ಯಾಹ್ನ ೧.೩೦ಕ್ಕೆ ಆಗಮಿಸಿದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಮೂರು ಪ್ರತ್ಯೇಕ ಪ್ರತಿಗಳೊಂದಿಗೆ ಉಮೇದುವಾರಿಕೆ ಸಲ್ಲಿಸಿದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಸದಾನಂದಗೌಡ, ಸಂಸದ ಬಿ.ವೈ. ರಾಘವೇಂದ್ರ, ಪತ್ನಿ ರೇವತಿ ಅವರೊಂದಿಗೆ ಒಂದು ಪ್ರತಿ ನಾಮಪತ್ರ, ಸಂಸದ ಡಾ.ಮಂಜುನಾಥ್, ರಾಜ್ಯಸಭೆ ಸದಸ್ಯ ಲೆಹರ್‌ಸಿಂಗ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಅಜಯ್, ಮುಖಂಡ ಪ್ರಸನ್ನ ಪಿ.ಗೌಡ, ಅವರೊಂದಿಗೆ ಎರಡನೇ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಹಾಪ್‌ಕಾಮ್ಸ್ ದೇವರಾಜು ಅವರೊಂದಿಗೆ ಮೂರನೇ ಪ್ರತಿ ನಾಮಪತ್ರ ಸಲ್ಲಿಸಿದರು.

ಟೆಂಪಲ್ ರನ್: ನಾಮಪತ್ರ ಸಲ್ಲಿಕೆಗೆ ಚನ್ನಪಟ್ಟಣಕ್ಕೆ ಆಗಮಿಸುವ ಮುನ್ನ ಬೆಂಗಳೂರಿನ ಜೆ.ಪಿ. ನಗರದ ಶ್ರೀ ತಿರುಮಲಗಿರಿ ವೆಂಕಟರಮಣ ದೇವಸ್ಥಾನದಲ್ಲಿ ಪತ್ನಿಯೊಂದಿಗೆ ಪೂಜೆ ಸಲ್ಲಿಸಿದ ನಿಖಿಲ್, ತಾತಾ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಶೀರ್ವಾದ ಪಡೆದುಕೊಂಡರು. ನಂತರ ಚನ್ನಪಟ್ಟಣಕ್ಕೆ ಆಗಮಿಸಿದ ಅವರು, ತಂದೆ ಎಚ್.ಡಿ. ಕುಮಾರಸ್ವಾಮಿ ಹಾಗೂ ಪತ್ನಿಯೊಂದಿಗೆ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಅದ್ಧೂರಿ ಶಕ್ತಿ ಪ್ರದರ್ಶನ:

ನಿಖಿಲ್ ನಾಮಪತ್ರ ಸಲ್ಲಿಕೆಗೆ ಮುನ್ನ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶಿಸಿದರು. ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ನಗರದ ಶೇರ್ವಾ ಹೋಟೆಲ್ ಬಳಿಯಿಂದ ಅದ್ಧೂರಿ ಮೆರವಣಿಗೆ ನಡೆಸುವ ಮೂಲಕ ಎನ್‌ಡಿಎ ಶಕ್ತಿ ಪ್ರದರ್ಶನ ನಡೆಸಿತು.

ತೆರೆದ ವಾಹನದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಶೇರ್ವಾ ಹೋಟೆಲ್ ಬಳಿಯಿಂದ ತಾಲೂಕು ಕಚೇರಿವರೆಗೆ ಕರೆತರಲಾಯಿತು. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ಪರ ಜಯಘೋಷ ಮೊಳಗಿಸಿದರು.

ಇನ್ನು ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್-ಬಿಜೆಪಿ ಒಕ್ಕಲಿಗ ಹಾಲಿ ಮಾಜಿ ಶಾಸಕರ ದಂಡೇ ಆಗಮಿಸಿದ್ದರು. ಮೆರವಣಿಗೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಸದಾನಂದಗೌಡ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಂಸದರಾದ ಡಾ.ಮಂಜುನಾಥ್, ಬಿ.ವೈ. ರಾಘವೇಂದ್ರ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಡಾ.ಸುಧಾಕರ್, ಶಾಸಕ ಅಶ್ವತ್ಥನಾರಾಯಣ್, ವಿಧಾನಪರಿಷತ್ ಸದಸ್ಯ ವಿಶ್ವನಾಥ್, ಮಾಜಿ ಶಾಸಕ ಎಂ.ಮಂಜು ಸೇರಿದಂತೆ ಬಿಜೆಪಿ-ಜೆಡಿಎಸ್ ನಾಯಕರ ದಂಡೇ ನೆರೆದಿತ್ತು.

ಪೊಟೋ೨೫ಸಿಪಿಟಿ೧:

ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದರು.

ಪೊಟೋ೨೫ಸಿಪಿಟಿ೨:

ಚನ್ನಪಟ್ಟಣದಲ್ಲಿ ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ಎನ್‌ಡಿಎ ಶಕ್ತಿಪ್ರದರ್ಶನ ನಡೆಸಿತು.

Share this article