2028ಕ್ಕೆ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಆಡಳಿತ: ಎಚ್.ಡಿ.ಕುಮಾರಸ್ವಾಮಿ

KannadaprabhaNewsNetwork |  
Published : Nov 23, 2026, 01:45 AM IST
22ಕೆಎಂಎನ್ ಡಿ20,21 | Kannada Prabha

ಸಾರಾಂಶ

ರಾಜ್ಯದಲ್ಲಿ ಬರಗಾಲದಿಂದ 62 ಸಾವಿರ ಕೋಟಿಯಷ್ಟು ರೈತ ಬೆಳೆ ನಷ್ಟವಾಗಿದೆ. ಆದರೆ, ಬರ ಪರಿಹಾರವಾಗಿ ಎಕರೆಗೆ 5 ಸಾವಿರ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿದೆ. ಆದರೆ, ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಮಾಡುತ್ತಿದೆ. ರೈತರ ಬಗ್ಗೆ ಸ್ವಲ್ಪವೂ ಕಾಳಜಿ ಸರ್ಕಾರಕ್ಕಿಲ್ಲ.

ಕನ್ನಡಪ್ರಭ ವಾರ್ತೆ ಪಾಂಡವಪುರ

ರೈತಪರ ಯೋಜನೆಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿವೆ. 2028ಕ್ಕೆ ಎನ್‌ಡಿಎ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ನಡೆದ ಕಾವೇರಿ ಪೂಜೆ, ದುದ್ದ ಏತನೀರಾವರಿ ಯೋಜನೆಗೆ ಬಾಗಿನ ಅರ್ಪಣೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ರಾಜ್ಯದ ಯಾವುದೇ ಮೂಲೆಗೆ ಹೋದರೂ ಸಹ ಜನರೇ ರಾಜ್ಯದಲ್ಲಿ ಮುಂದೆ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ಮಾತುಗಳನ್ನಾಡುತ್ತಿದ್ದಾರೆ ಎಂದರು.

ಬರಗಾಲದ ಸನ್ನಿವೇಶ ಎದುರಾಗಿದ್ದು ಅದನ್ನು ಸಮರ್ಥವಾಗಿ ನಿಭಾಯಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದ ರೈತರಿಗೆ ಅನುಕೂಲವಾಗುವ ಯಾವುದೇ ಜನಪರವಾದ ಯೋಜನೆ, ಕಾರ್ಯಕ್ರಮ ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಬರಗಾಲದಿಂದ 62 ಸಾವಿರ ಕೋಟಿಯಷ್ಟು ರೈತ ಬೆಳೆ ನಷ್ಟವಾಗಿದೆ. ಆದರೆ, ಬರ ಪರಿಹಾರವಾಗಿ ಎಕರೆಗೆ 5 ಸಾವಿರ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿದೆ. ಆದರೆ, ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಮಾಡುತ್ತಿದೆ. ರೈತರ ಬಗ್ಗೆ ಸ್ವಲ್ಪವೂ ಕಾಳಜಿ ಸರ್ಕಾರಕ್ಕಿಲ್ಲ ಎಂದು ದೂರಿದರು.

ರೈತರ ಬೆಳೆದ ಕಬ್ಬಿಗೆ ಸೂಕ್ತ ಬೆಲೆ ಕೊಡಿಸಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿಗಳು ಮಧ್ಯರಾತ್ರಿವರೆಗೂ ಮೀಟಿಂಗ್ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಲಾಭವಿಲ್ಲದೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಎರಡು ಮೂರು ಕಾರ್ಖಾನೆಗಳನ್ನು ತೆರೆಯುವುದಿಲ್ಲ. ನನ್ನ ಅಧಿಕಾರದ ಅವಧಿಯಲ್ಲಿ ಮಂಡ್ಯ ಮೈಷುಗರ್ ಕಾರ್ಖಾನೆಗೂ 400 ಕೋಟಿ ಬಜೆಟ್ ನಲ್ಲಿ ಘೋಷಣೆ ಮಾಡಿ 100 ಕೋಟಿ ರು. ಬಿಡುಗಡೆ ಮಾಡಿ ಅಭಿವೃದ್ಧಿಗೆ ಸಹಕಾರ ನೀಡಿದ್ದೆ ಎಂದರು.

ಮೇಲುಕೋಟೆ ಕ್ಷೇತ್ರದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ರೀತಿ ಕೆಲಸ ಮಾಡುವ ಮತ್ತೊಬ್ಬ ಶಾಸಕನಾಗಲಿ, ಜನನಾಯಕ ದೊರೆಯುವುದಿಲ್ಲ. ಇವರು ಸಚಿವರಾಗಿ ಕೆಲಸ ಮಾಡುವಾಗ ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ಶ್ಲಾಘಿಸಿದರು.

6 ಏತನೀರಾವರಿ ಯೋಜನೆ ತಂದು ಬರ ಪ್ರದೇಶಕ್ಕೂ ಕಾವೇರಿ ನೀರು ಕೊಡುವ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಕೆಲಸದ ಜೊತಗೆ ಕ್ಷೇತ್ರದಲ್ಲಿ ಯಾವುದೇ ಕುಟುಂಬದಲ್ಲಿ ಸಮಸ್ಯೆ, ಕಷ್ಟ-ಕಾರ್ಪಣ್ಯಗಳು ಎದುರಾದರೆ ಕ್ಷಣ ಕುಟುಂಬದ ಬೆಂಬಲಕ್ಕೆ ನಿಂತು ಸಹಕಾರ ನೀಡುತ್ತಾರೆ. ಕ್ಷೇತ್ರದ ಜನತೆ ಇಂತಹ ನಾಯಕನನ್ನು ಕಳೆದುಕೊಳ್ಳಬೇಡಿ. ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವ ಇಂತಹ ಜನನಾಯಕಬೇಕೋ ಅಥವಾ ಪ್ಲೇಯಿಂಗ್ ವಿಸಿಟರ್ ತರ ಬಂದು ಹೋಗು ಶಾಸಕಬೇಕೋ ಕ್ಷೇತ್ರದ ಜನರೆ ತೀರ್ಮಾಣ ಮಾಡಬೇಕು ಎಂದರು.

ಎಚ್ಡಿಕೆ ಸಿಎಂ ಆಗಿ ಕೆಲಸ- ಶ್ರೀಕೃಷ್ಣದೇವರಾಯ ಆಡಳಿತ ನೆನಪು:

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಆಡಳಿತ ಅವಧಿ ಶ್ರೀಕೃಷ್ಣದೇವರಾಯ ಆಡಳಿತವನ್ನು ನೆನೆಪಿಸುವಂತಿತ್ತು. ಬಡವರು, ರೈತಪರ ಆಡಳಿತವನ್ನು ನೀಡಿದ್ದರು. 2500 ಕೋಟಿ ರೈತರ ಸಾಲಮನ್ನಾ ಮಾಡಿದರು. ಸಿಕ್ಕ ಕಡಿಮೆ ಅವಕಾಶದಲ್ಲಿ ಜನರು ಮೆಚ್ಚುವ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.

2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರದಲ್ಲಿ ಇದ್ದಾಗ ನನ್ನ ಕ್ಷೇತ್ರಕ್ಕೆ 6 ಏತನೀರಾವರಿ ಯೋಜನೆ ಮಂಜೂರು ಮಾಡಿಕೊಟ್ಟರು. ಸುಂಕಾತೊಣ್ಣೂರು ಏತನೀರಾವರಿ ಯೋಜನೆಯನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುವ ಕೊನೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಮಾಡಿಕೊಟ್ಟರು. ದುದ್ದ, ಬಳಘಟ್ಟ ಏತನೀರಾವರಿ ಯೋಜನೆಯಿಂದ 1442 ಕ್ಯುಸೆಕ್ ನಷ್ಟು ನೀರನ್ನು ಬಳಕೆ ಮಾಡಿಕೊಳ್ಳಲು ಅವಕಾಶಮಾಡಿಕೊಟ್ಟಿದ್ದಾರೆ ಎಂದರು.

ನಮಗೆ ಸಿಕ್ಕಂತಹ ಅವಕಾಶದಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ರಾಜ್ಯ ಸರ್ಕಾರದ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮತ್ತೊಮ್ಮೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿ ಕೆಲಸ ಮಾಡಲಿದ್ದಾರೆ ಎಂದರು.

ಸುಂಕಾತೊಣ್ಣೂರು ಏತನೀರಾವರಿ ಯೋಜನೆಯಿಂದ ನೀರು ತುಂಬಿಸಲು ಸಾಧ್ಯವಾಗಿರಲಿಲ್ಲ. ನಾನು ಆ ಭಾಗದ ಮುಖಂಡರ ಜತೆಗೆ ತೆರಳಿ ಮೋಟಾರ್ ರೆಡಿ ಮಾಡಿಸಿ ನೀರು ತುಂಬಿಸುವ ಕೆಲಸ ಮಾಡಿದ್ದೇನೆ. ರೈತಸಂಘದ ಜಿಲ್ಲಾಧ್ಯಕ್ಷರು ಟೀಕೆ ಮಾಡಿದ್ದಾರೆ. ಆ ಟೀಕೆಗೆ ಅವರ ಗ್ರಾಮದಲ್ಲಿಯೇ ಉತ್ತರ ಕೊಡುತ್ತೇನೆ. ನಮಗೆ ಗೊತ್ತಿರುವುದು ಅಭಿವೃದ್ಧಿ ಕೆಲಸ ಮಾಡೋದಷ್ಟೆ. ಇವರ ರೀತಿ ಭಜನೆ ಮಾಡಬೇಕಾದರೆ ನಾವು ಬೇಕಾದಷ್ಟು ಮಾಡುತ್ತೇವೆ ಎಂದು ತಿರುಗೇಟು ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಹೆಗ್ಗಡಹಳ್ಳಿಯಲ್ಲಿ ಸಿ.ಎಸ್.ಪುಟ್ಟರಾಜು ಅಭಿಮಾನಿ ಬಳಗದ ನಾಮಫಲಕ ಉದ್ಘಾಟಿಸಿದರು. ಬಳಿಕ ಸುಂಕಾತೊಣ್ಣೂರು ಗ್ರಾಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಭವ್ಯ ಸ್ವಾಗತಕೋರಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ವೇದಿಕೆ ಕರೆತಂದರು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಬಳಿಕ ಗ್ರಾಮದ ರಾಕ್ಷಮ ದೇವಸ್ಥಾನದ ಮುಂಭಾಗ ಕೆರೆಗೆ ಪೂಜೆ ಸಲ್ಲಿಸಿದರು.

ಸಮಾರಂಭದಲ್ಲಿ ಜೆಡಿಎಸ್ ಅಧ್ಯಕ್ಷ ಮಲ್ಲೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಆದರ್ಶ, ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಯುವ ಮುಖಂಡ ಸಿ.ಪಿ.ಶಿವರಾಜು, ಉದ್ಯಮಿ, ಜೆಡಿಎಸ್ ಮುಖಂಡ ಎಸ್.ಡಿ.ಶಿವಕುಮಾರ್, ಲಯನ್ ದೇವೇಗೌಡ, ಹೆಗ್ಗಡಹಳ್ಳಿ ರಾಮಕೃಷ್ಣ, ಸ್ವಾಮೀಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ದೇವೇಗೌಡ, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ಜೆ.ದೇವೇಗೌಡ, ಹೇಮಂತ್ ಕುಮಾರ್, ಪಾರ್ಥ ಸಾರಥಿ, ಮಮತತಿಮ್ಮೇಗೌಡ, ನಂದೀಶ್, ರಾಜ್ ಕುಮಾರ್, ರಾಕ್ಷಮ್ಮ ದೇವಸ್ಥಾನದ ಟ್ರಸ್ಟ್ ನಿರ್ದೇಶಕರು, ಗ್ರಾಮದ ಯಜಮಾನರು, ಮುಖಂಡರು, ಯುವಕರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ವಿ
ಸರ್ಕಾರದ ಅನುದಾನದ ಜೊತೆಗೆ ದಾನಿಗಳ ನೆರವು ಪಡೆಯಿರಿ: ವಿಜಯ ಮಾನೆ