ಬಿಹಾರದಲ್ಲಿ ಎನ್‌ಡಿಎ ಜಯಭೇರಿ: ಜಿಲ್ಲಾದ್ಯಂತ ಬಿಜೆಪಿ ವಿಜಯೋತ್ಸವ

KannadaprabhaNewsNetwork |  
Published : Nov 15, 2025, 01:15 AM IST
14ಕೆಡಿವಿಜಿ4-ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಬಿಜೆಪಿಯಿಂದ ವಿಜಯೋತ್ಸವ ಆಚರಿಸಲಾಯಿತು. | Kannada Prabha

ಸಾರಾಂಶ

ದೇಶದ ಕುತೂಹಲ ಕೆರಳಿಸಿದ್ದ ಬಿಹಾರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭೂತಪೂರ್ವ ಜಯ ದಾಖಲಿಸಿದ ಹಿನ್ನೆಲೆ ಶುಕ್ರವಾರ ನಗರ ಸೇರಿದಂತೆ ಜಿಲ್ಲಾದ್ಯಂತ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಭರ್ಜರಿ ವಿಜಯೋತ್ಸವ ಆಚರಿಸಿದ್ದಾರೆ.

- ಕಾಂಗ್ರೆಸ್‌-ಆರ್‌ಜೆಡಿಗೆ ಬಿಹಾರಿಗಳ ಬಿಹಾರ ಫಲಿತಾಂಶ ಪಾಠ: ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದ ಕುತೂಹಲ ಕೆರಳಿಸಿದ್ದ ಬಿಹಾರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭೂತಪೂರ್ವ ಜಯ ದಾಖಲಿಸಿದ ಹಿನ್ನೆಲೆ ಶುಕ್ರವಾರ ನಗರ ಸೇರಿದಂತೆ ಜಿಲ್ಲಾದ್ಯಂತ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಭರ್ಜರಿ ವಿಜಯೋತ್ಸವ ಆಚರಿಸಿದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಿಂದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಇತರರ ನೇತೃತ್ವದಲ್ಲಿ ಅಶೋಕ ರಸ್ತೆ ಮಾರ್ಗವಾಗಿ ಶ್ರೀ ಜಯದೇವ ವೃತ್ತದವರೆಗೂ ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ ಪರ ಜಯಘೋಷ ಮೊಳಗಿಸುತ್ತಾ, ಭರ್ಜರಿ ಹೆಜ್ಜೆ ಹಾಕುತ್ತಾ ಕಾರ್ಯಕರ್ತರು ಸಂಭ್ರಮಿಸಿದರು.

ರಾಜಶೇಖರ ನಾಗಪ್ಪ ಮಾತನಾಡಿ, ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಗೆಲ್ಲುವ ಮೂಲಕ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳಿಗೆ ತಕ್ಕ ಪಾಠ ಕಲಿಸಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ಜೊತೆಗೆ ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತಿಶ್‌ ಕುಮಾರ ನಾಯಕತ್ವವನ್ನು ಒಪ್ಪಿ ಅಲ್ಲಿನ ಮತದಾರರು ಎನ್‌ಡಿಎ ಮೈತ್ರಿಕೂಟಕ್ಕೆ ಶಕ್ತಿ ತುಂಬಿದ್ದಾರೆ. ಈ ಫಲಿತಾಂಶ ಇತರೆ ರಾಜ್ಯಗಳ ವಿಧಾನಸಭೆ ಚುನಾವಣೆಗಳಿಗೂ ದಿಕ್ಸೂಚಿಯಾಗಿದೆ ಎಂದರು.

ಬಿಹಾರ ಚುನಾವಣೆಯು ಕಾಂಗ್ರೆಸ್ ಪಕ್ಷಕ್ಕೆ, ಆರ್‌ಜೆಡಿ ಸೇರಿದಂತೆ ಮಹಾ ಘಟಬಂಧನ್ ಪಕ್ಷಗಳ ಮೈತ್ರಿಕೂಟಕ್ಕೂ ಎಚ್ಚರಿಕೆಯ ಗಂಟೆಯಾಗಿದೆ. ದೇಶದ ಚುನಾವಣಾ ವ್ಯವಸ್ಥೆಯ ಬಗ್ಗೆ ಅಪಪ್ರಚಾರ ಮಾಡಿದ್ದ ಕಾಂಗ್ರೆಸ್‌ನ ರಾಹುಲ್ ಗಾಂಧಿ, ಆರ್‌ಜೆಡಿಯ ತೇಜಸ್ವಿ ಯಾದವ್‌ ಸೇರಿದಂತೆ ವಿಪಕ್ಷದವರಿಗೆ ಮಗ್ಗಲು ಬದಲಿಸುವುದಕ್ಕೂ ಅವಕಾಶ ನೀಡದಂತೆ ಬಿಹಾರದ ಸಮಸ್ತ ಮತದಾರರು ಸೂಕ್ತ ಎಚ್ಚರಿಕೆಯನ್ನೇ ನೀಡಿದ್ದಾರೆ ಎಂದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೆಬಾಳು, ಅನಿಲಕುಮಾರ ನಾಯ್ಕ, ವಕ್ತಾರ ಬಿ.ಎಂ. ಸತೀಶ ಕೊಳೇನಹಳ್ಳಿ, ಹಿರಿಯ ಮುಖಂಡರಾದ ಆವರಗೊಳ್ಳ ಬಿ.ಎಂ. ಷಣ್ಮುಖಯ್ಯ ಪಾಲಿಕೆ ಮಾಜಿ ಸದಸ್ಯರಾದ ಎಂ.ಪಿ. ಕೃಷ್ಣಮೂರ್ತಿ ಪವಾರ್, ಆರ್.ಶಿವಾನಂದ, ಕೆ.ಪ್ರಸನ್ನಕುಮಾರ, ಸುರೇಶ ಗಂಡುಗಾಳೆ, ಎಚ್.ಎನ್. ಶಿವಕುಮಾರ, ಶಿವರಾಜ ಪಾಟೀಲ, ಕೆ.ಜಿ.ಕಲ್ಲಪ್ಪ, ಲಿಂಗರಾಜ, ಎಚ್.ಪಿ.ವಿಶ್ವಾಸ, ಪಿ.ಕೊಟ್ರೇಶಗೌಡ, ಕೆಟಿಜೆ ನಗರ ಆನಂದ, ಕೆಟಿಜೆ ನಗರ ಲೋಕೇಶ, ಪಿ.ಎನ್.ಜಗದೀಶ ಕುಮಾರ ಪಿಸೆ, ಉಮೇಶ ಪಾಟೀಲ, ಮಂಜು ಪೈಲ್ವಾನ್, ಸಂತೋಷ ಪೈಲ್ವಾನ್ ಇತರರು ಪಾಲ್ಗೊಂಡಿದ್ದರು. ಗ್ರಾಮೀಣ ಪ್ರದೇಶ, ಹಳ್ಳಿಗಳು, ಹರಿಹರ, ಜಗಳೂರು, ಚನ್ನಗಿರಿ, ಹೊನ್ನಾಳಿ, ನ್ಯಾಮತಿ ಭಾಗದಲ್ಲೂ ವಿಜಯೋತ್ಸವ ನಡೆಯಿತು.

- - -

-14ಕೆಡಿವಿಜಿ4: ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಜಯ ಸಾಧಿಸಿದ ಹಿನ್ನೆಲೆ ದಾವಣಗೆರೆಯಲ್ಲಿ ಬಿಜೆಪಿಯಿಂದ ವಿಜಯೋತ್ಸವ ಆಚರಿಸಲಾಯಿತು.

PREV

Recommended Stories

ದೇಶದ ಭವಿಷ್ಯಕ್ಕಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ
ತಿಮ್ಮಕ್ಕನಿಗೆ ಮಕ್ಕಳ ಕೊರಗು ನೀಗಿಸಿದ ಸಾಲು ಮರಗಳು