ಕೆರೆಗಳ ಅಭಿವೃದ್ಧಿಗೆ ಅಗತ್ಯ ಕ್ರಮ

KannadaprabhaNewsNetwork | Published : Sep 19, 2024 1:50 AM

ಸಾರಾಂಶ

ಹಾರೋಹಳ್ಳಿ: ತಾಲೂಕು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಸಂಸದ ಡಾ.ಸಿ.ಎನ್.ಮಂಜುನಾಥ್ ವೀಕ್ಷಿಸಿದರು.

ಹಾರೋಹಳ್ಳಿ: ತಾಲೂಕು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಸಂಸದ ಡಾ.ಸಿ.ಎನ್.ಮಂಜುನಾಥ್ ವೀಕ್ಷಿಸಿದರು.

ಹಾರೋಹಳ್ಳಿ ದೊಡ್ಡ ಕೆರೆ, ಚುಳಕನ ಬೆಟ್ಟದ ಕೆರೆ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನುಷ್ಯನ ಮತ್ತು ಜೀವರಾಶಿ ಇರುವುದೇ ನೀರಿನಿಂದ. ಸಕಲ ಜೀವರಾಶಿಗಳಿಗೂ ನೀರು ತುಂಬಾ ಮುಖ್ಯ, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ದೇಶದಲ್ಲೇ ನೀರಿನ ಮತ್ತು ಅಂತರ್ಜಲದ ಬಗ್ಗೆ ಕ್ರಾಂತಿ ಆಗಬೇಕು. ಯಾವ ರೀತಿ ಕೆರೆಗಳ ನೀರನ್ನು ತುಂಬಿಸಬೇಕು. ಇದರಿಂದ ಅಂತರ್ಜಲ ಯಾವ ರೀತಿ ಅಭಿವೃದ್ಧಿಪಡಿಸಬೇಕು ಎಂದು ತಿಳಿಯಬೇಕಾಗಿದೆ ಎಂದರು.

ಮರಳವಾಡಿ ಮತ್ತು ಹಾರೋಹಳ್ಳಿಯಲ್ಲಿ ಮುಖ್ಯವಾಗಿ ಹಾರೋಹಳ್ಳಿ ದೊಡ್ಡಕೆರೆಯನ್ನು ಯಾವ ರೀತಿ ಅಭಿವೃದ್ಧಿ ಮಾಡಬೇಕು. ಅದಕ್ಕೆ ಬೇಕಾದ ಅನುದಾನವನ್ನು ಸಿಎಸ್‌ಆರ್ ಮತ್ತು ಸರ್ಕಾರದ ಮುಖಾಂತರ ಆರ್ಥಿಕ ಸಹಾಯ ಪಡೆಯಬೇಕಾಗಿದೆ ಎಂದು ಹೇಳಿದರು.

ಹಾರೋಹಳ್ಳಿ ದೊಡ್ಡಕೆರೆ ನಗರದ ಜೀವನಾಡಿಯಾಗಿದ್ದು, ಇದರಿಂದ ಸ್ಥಳೀಯ ಅಂತರ್ಜಲ ಅಭಿವೃದ್ಧಿಸುವ ಅವಕಾಶಗಳಿವೆ. ಈ ಹಿಂದೆ 14 ಕೋಟಿ ವೆಚ್ಚದಲ್ಲಿ ಕ್ರಿಯಾಯೋಜನೆಯಾಗಿದ್ದು ಅದನ್ನು ಯಾವ ರೀತಿ ಮುಂದೆ ತೆಗೆದುಕೊಂಡು ಹೋಗಬೇಕೆಂದು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಹಾರೋಹಳ್ಳಿ ಇಂಡಸ್ಟ್ರಿಯಲ್ ಲೇಔಟ್ ಅಸೋಸಿಯೇಷನ್ ಕೂಡ ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ಅಂತರ್ಜಲ ವೃದ್ಧಿಸಿದರೆ ಕುಡಿಯುವ ನೀರಿಗೆ ಸಮಸ್ಯೆ ಇರುವುದಿಲ್ಲ, ಹಾರೋಹಳ್ಳಿಯಲ್ಲಿ ಪಟ್ಟಣ ಪಂಚಾಯ್ತಿಯಲ್ಲಿರುವ 16 ಕೆರೆಗಳ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ ಬೇಕಾಗಿದೆ, ಅಭಿವೃದ್ಧಿ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಸಾಮಾನ್ಯರೊಂದಿಗೆ ಅನುಕೂಲವಾಗಲು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಶಿವಕುಮಾರ್, ಪಟ್ಟಣ ಪಂಚಾಯಿತಿ ಅಧಿಕಾರಿ ಶ್ವೇತಾಬಾಯಿ, ಮುಖಂಡರಾದ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಗೌತಮ್‌ಗೌಡ, ಬಿಜೆಪಿ ಚಂದ್ರು, ಮುರಳಿಧರ, ಪಿಚನಕೆರೆ ಜಗದೀಶ್, ಕೋಟೆ ರಾಜು, ಶೇಷಾದ್ರಿ ಇತರರು ಹಾಜರಿದ್ದರು.

18ಕೆಆರ್ ಎಂಎನ್ 7.ಜೆಪಿಜಿ

ಹಾರೋಹಳ್ಳಿ ತಾಲೂಕು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೆರೆಗಳನ್ನು ಸಂಸದ ಡಾ.ಸಿ.ಎನ್.ಮಂಜುನಾಥ್ ವೀಕ್ಷಿಸಿದರು.

Share this article