ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚಿಸಲು ಅಗತ್ಯ ಕ್ರಮ: ಪಿ.ಎಂ.ನರೇಂದ್ರಸ್ವಾಮಿ

KannadaprabhaNewsNetwork |  
Published : Jul 20, 2025, 01:15 AM IST
19ಕೆಎಂಎನ್ ಡಿ14 | Kannada Prabha

ಸಾರಾಂಶ

ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೊಟಿ ಕೊಡುವಂತಹ ಜವಾಬ್ದಾರಿ ತೆಗೆದುಕೊಂಡು ಈಗಾಗಲೇ ತಾಲೂಕಿನಲ್ಲಿ 182 ಶಾಲೆಗಳಿಗೆ ಟ್ಯಾಬ್ ನೀಡಲಾಗಿದೆ. ಉಳಿಕೆ 78 ಶಾಲೆಗಳಿಗೆ ತಕ್ಷಣದಲ್ಲಿಯೇ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಜೊತೆಗೆ ಗುಣಮಟ್ಟದ ಶಿಕ್ಷಣ ಹಾಗೂ ಮೂಲ ಸೌಲಭ್ಯ ಕಲ್ಪಿಸುವ ಮೂಲಕ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರೊಂದಿಗೆ ಶಾಲಾ ಮೂಲ ಸೌಲಭ್ಯಗಳು ಮತ್ತು ಶೈಕ್ಷಣಿಕ ಪ್ರಗತಿ ಕುರಿತು ಸಮಾಲೋಚನೆ, ಗುರು ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೊಟಿ ಕೊಡುವಂತಹ ಜವಾಬ್ದಾರಿ ತೆಗೆದುಕೊಂಡು ಈಗಾಗಲೇ ತಾಲೂಕಿನಲ್ಲಿ 182 ಶಾಲೆಗಳಿಗೆ ಟ್ಯಾಬ್ ನೀಡಲಾಗಿದೆ. ಉಳಿಕೆ 78 ಶಾಲೆಗಳಿಗೆ ತಕ್ಷಣದಲ್ಲಿಯೇ ನೀಡಲಾಗುವುದು ಎಂದರು.

ಆರು ತಿಂಗಳೊಳಗೆ ಕ್ಲಸ್ಟರ್ ಮಟ್ಟದಲ್ಲಿ 25 ಮಲ್ಪಿ ಮಿಡಿಯಾ ಸೆಂಟರ್ ಸ್ಥಾಪಿಸಿ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಇಸ್ರೋ ಕಂಪನಿ ಮೂಲಕ ಉಪಗ್ರಹ ಆಧಾರಿತವಾಗಿ ನೇರ ಶಿಕ್ಷಣ ಪಡೆಯುವ ವ್ಯವಸ್ಥೆ ಮಾಡಲಾಗುವುದು ಎಂದರು.

ಸರ್ಕಾರಿ ಶಾಲೆಗಳಲ್ಲಿ ಮಲ್ಟಿ ಮೀಡಿಯಾವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಕೊಠಡಿಗಳು, ಶೌಚಾಲಯ ಸಮಸ್ಯೆ ನಿವಾರಿಸಲಾಗುವುದು. ಸರ್ಕಾರಿ ಶಾಲೆಗಳು ಎಂದರೇ ಮೂಗು ಮೂರಿಯುತ್ತಿರುವ ಈ ಸಂದರ್ಭದಲ್ಲಿ ಆಧುನಿಕ ಶಿಕ್ಷಣದ ವ್ಯವಸ್ಥೆಗೆ ಸಜ್ಜುಗೊಳಿಸಿದ್ದೇವೆ. ಈ ಸಂದೇಶ ತಲುಪಿದಾಗ ಪೋಷಕರೇ ಮಕ್ಕಳನ್ನು ಸರ್ಕಾರಿ ಶಾಲೆ ಸೌಲಭ್ಯಗಳನ್ನು ಕಂಡು ಸೇರಿಸುವ ವಾತಾವರಣ ಸೃಷ್ಟಿಯಾಗಲಿದೆ ಎಂದು ಭವಿಷ್ಯ ನುಡಿದರು.

ಸರ್ಕಾರಿ ಶಾಲೆಗಳಲ್ಲಿ ಗುಣ ಮಟ್ಟದ ಶಿಕ್ಷಣ ನೀಡುತ್ತೇವೆಂದು ಭಾಷಣ ಮೂಲಕ ಹೇಳುವುದಲ್ಲ. ಜವಾಬ್ದಾರಿ ಮತ್ತು ಬದ್ಧತೆಯೊಂದಿಗೆ ಸಮಸ್ಯೆ ನಿವಾರಿಸಿ ಇನ್ನೆರಡು ವರ್ಷದಲ್ಲಿ ಸರ್ಕಾರಿ ಶಾಲೆಗೆ ಸೌಲಭ್ಯಗಳನ್ನು ಕೊಟ್ಟು ಮಾದರಿ ಶಾಲೆಗಳನ್ನಾಗಿ ಮಾಡಲಾಗುವುದು ಎಂದರು.

ತಾಲೂಕಿನ 6 ಶಾಲೆಗಳು ಮುಚ್ಚಿದೆ. ಸರ್ಕಾರಿ ಶಾಲೆಗಳು ಕ್ಷೀಣಿಸುತ್ತಿರುವುದು ಹಾಗೂ ಮಕ್ಕಳ ಕೊರತೆ ವಿಚಾರವಾಗಿ ಮಾಹಿತಿ ಪಡೆಯುವ ಉದ್ದೇಶದಿಂದ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದರು.

ಎಲ್ಲಾ ಶಾಲೆಗಳಿಗೆ ವಿವಿಧ ಸಂಘ ಸಂಸ್ಥೆ ಹಾಗೂ ಸಿ.ಆರ್‌ಎಸ್ ನಿಧಿಯಿಂದ ಹೊಸ ಕಾಯಕಾಲ್ಪ ಮಾಡಲಾಗುವುದು. ಶಿಕ್ಷಕರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ತನ್ನ ಜೊತೆಗೆ ಕೈ ಜೋಡಿಸಬೇಕು. ಜೊತೆಗೆ ತಾಲೂಕಿನಲ್ಲಿ ಫಲಿತಾಂಶ ಸುಧಾರಿಸುವಂತೆ ಮಾಡಲು ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಶಿಕ್ಷಕರು ತಾಲೂಕಿನ ಸರ್ಕಾರಿ ಶಾಲೆಗಳಲ್ಲಿರುವ ಸಮಸ್ಯೆಗಳ ಬೇಡಿಕೆ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಬೇಕು. ಅರ್ಧಕ್ಕೆ ನಿಂತಿರುವ ಕಾಮಗಾರಿಗಳ ಬಗ್ಗೆ ತಾಪಂ ಇಒ ಪರಿಶೀಲನೆ ನಡೆಸಿ ಶೌಚಾಲಯ ಹಾಗೂ ಬಿಸಿಯೂಟ ಕೊಠಡಿ ನಿರ್ಮಾಣ ಕಾಮಗಾರಿಗಳನ್ನು ಅಂತಿಮಗೊಳಿಸಬೇಕು ಎಂದು ಸೂಚನೆ ನೀಡಿದರು.

ಸರ್ಕಾರಿ ಆಸ್ತಿ ಉಳಿಸುವ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರು ಬಿಇಒ ಮೂಲಕ ತಹಸೀಲ್ದಾರ್ ಅವರಿಗೆ ಖಾತೆಗಾಗಿ ಅರ್ಜಿ ಸಲ್ಲಿಸಬೇಕು. ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ನೀಡುತ್ತಿರುವುದರಿಂದ ಬಿಲ್ ಪಾವತಿಗೆ ಸೆಸ್ಕಾಂ ಒತ್ತಾಯಿಸಬಾರದೆಂದು ಸಲಹೆ ನೀಡಿದರು.

ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಶಾಲೆಗಳ ಸಮಸ್ಯೆಗಳ ಬಗ್ಗೆ ಸಂವಾದದಲ್ಲಿ ಶಾಸಕರ ಗಮನಕ್ಕೆ ತಂದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ ಉಮಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ರಾಜಮೂರ್ತಿ, ತಹಸೀಲ್ದಾರ್ ಎಸ್.ವಿ.ಲೋಕೇಶ್, ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಸದಸ್ಯ ನೂರುಲ್ಲಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ, ತಾಲೂಕು ಅಧ್ಯಕ್ಷ ಪಿ.ಮಾದೇಶ್, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಮಾಜಿ ಅಧ್ಯಕ್ಷ ಕೆ.ಜೆ.ದೇವರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ನಾಗೇಶ್ ಪಾಲ್ಗೊಂಡಿದ್ದರು.

PREV

Latest Stories

ಸಂಕಷ್ಟಗಳಿವೆ ಆದರೆ ಸೇವಾ ಸಂತೃಪ್ತಿ ನಮಗಿದೆ: ದಶರಥ ಸಾವೂರ
ರೈತರನ್ನು ಸ್ಮರಿಸುವ, ನೋವಿಗೆ ಸ್ಪಂದಿಸುವ ಕಾರ್ಯವಾಗಲಿ
ಮಳೆಯ ರಭಸಕ್ಕೆ ಮನೆಗಳಿಗೆ ನುಗ್ಗಿದ ನೀರು: ಪರಿಶೀಲನೆ