ಮದ್ದೂರು ತಾಲೂಕಿನಲ್ಲಿ ಹಾದು ಹೋಗಿರುವ ಶಿಂಷಾ ನದಿ ಪಾತ್ರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕಾವೇರಿ ನೀರಾವರಿ ನಿಗಮದ ಅಡಿ ಅಗತ್ಯ ಕ್ರಮ ಮತ್ತು ಕಾಮಗಾರಿ ಕೈಗೊಳ್ಳುವ ಸಂಬಂಧ ಶಾಸಕ ಕೆ.ಎಂ.ಉದಯ್ ನೇತೃತ್ವದಲ್ಲಿ ಸಭೆ.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನಲ್ಲಿ ಹಾದು ಹೋಗಿರುವ ಶಿಂಷಾ ನದಿ ಪಾತ್ರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕಾವೇರಿ ನೀರಾವರಿ ನಿಗಮದ ಅಡಿ ಅಗತ್ಯ ಕ್ರಮ ಮತ್ತು ಕಾಮಗಾರಿ ಕೈಗೊಳ್ಳುವ ಸಂಬಂಧ ಶಾಸಕ ಕೆ.ಎಂ.ಉದಯ್ ನೇತೃತ್ವದಲ್ಲಿ ನೆರೆಯ ಕುಣಿಗಲ್ ಶಾಸಕ ಡಾ.ರಂಗನಾಥ್ ಸೇರಿದಂತೆ ಇಲಾಖಾ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿ ಚರ್ಚಿಸಲಾಯಿತು.
ತಾಲೂಕಿನ ಕದಲೂರು ಗ್ರಾಮದ ಶಾಸಕ ಕೆ.ಎಂ.ಉದಯ್ ನಿವಾಸದಲ್ಲಿ ಕುಣಿಗಲ್ ಕ್ಷೇತ್ರದ ಶಾಸಕ ರಂಗನಾಥ್ ಹಾಗೂ ಮಾಜಿ ಸಂಸದ, ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಸೇರಿದಂತೆ ನೀರಾವರಿ ಇಲಾಖೆ ಉನ್ನತ ಅಧಿಕಾರಿಗಳೊಟ್ಟಿಗೆ ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಿ ಅಗತ್ಯ ಮಾಹಿತಿ ಪಡೆದರು.
ತಾಲೂಕಿನ ಕಸಬಾ ಹೋಬಳಿಯ ಆರು ವಿವಿಧ ಏತ ನೀರಾವರಿಗಳು ಮತ್ತು ಇಗ್ಗಲೂರು ಬ್ಯಾರೇಜ್ ಹಿನ್ನೀರು ವ್ಯಾಪ್ತಿಯ 19 ಕೆರೆಗಳಿಗೆ ಬನ್ನಹಳ್ಳಿ ಏತನೀರಾವರಿ ಮೂಲಕ ನೀರು ತುಂಬಿಸುವ ಹೆಚ್ಚುವರಿ ಕಾಮಗಾರಿಗಳ ಕುರಿತಾಗಿ ಸಭೆ ವೇಳೆ ಹಾಜರಿದ್ದ ನೀರಾವರಿ ನಿಗಮದ ಅಧಿಕಾರಿಗಳು ವಿವರ ಮಂಡಿಸಿದರು.
ಕಸಬಾ ಹೋಬಳಿ ವ್ಯಾಪ್ತಿಯ ಶಿಂಷಾ ನದಿ ದಡದ ಎಡದಂಡ ವ್ಯಾಪ್ತಿಯ ವಿವಿಧ ಕೆರೆಗಳ ಪುನಶ್ಚೇತನ, ಶಿಂಷಾ ನದಿಯ ಜಲ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಹೆಚ್ಚುವರಿ ಯೋಜನೆ ಮತ್ತು ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಸಭೆ ವೇಳೆ ಚರ್ಚಿಸಲಾಯಿತು.
ಇಗ್ಗಲೂರು ಬ್ಯಾರೇಜ್‌ನಿಂದ ಬೆಂಗಳೂರು ದಕ್ಷಿಣ(ರಾಮನಗರ) ಜಿಲ್ಲೆಯ ಕಣ್ವ ಮತ್ತು ಗರಕಹಳ್ಳೀ ಏತ ನೀರಾವರಿ ಯೋಜನೆಗಳ ಕುರಿತಾಗಿ ಸಭೆ ವೇಳೆ ಹಾಜರಿದ್ದ ಅಧಿಕಾರಿಗಳು ಮಾಹಿತಿ ನೀಡಿದರು.
ಈ ವೇಳೆ ಶಾಸಕ ಕೆ.ಎಂ.ಉದಯ್ ಮಾತನಾಡಿ ಶಿಂಷಾ ನದಿ ಎಡ ಪಾರ್ಶ್ವದ ಆತಗೂರು, ಕಸಬಾ ಹೋಬಳಿ ವ್ಯಾಪ್ತಿಯ
ನೂರಾರು ಹಳ್ಳಿಗಳ ವ್ಯಾಪ್ತಿಯು ಮಳೆಯಾಶ್ರಿತ ಪ್ರದೇಶವಾಗಿವೆ. ಈ ಭಾಗದ ರೈತರ ಕೃಷಿ ಜಮೀನುಗಳಿಗೆ ನೀರೊದಗಿಸುವ ಕೊಳವೆ ಬಾವಿಗಳ ಹಿತದೃಷ್ಠಿಯಿಂದ ಅಂತರ್ಜಲ ವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವುದಾಗಿ ಹೇಳಿದರು.
ಕಣ್ವ ಏತ ನೀರಾವರಿ ಯೋಜನೆಯಡಿ ತಾಲೂಕಿನ ಗಡಿ ಭಾಗದ ಮಾದನಾಯಕನಹಳ್ಳಿ, ಅರೆತಿಪ್ಪೂರು, ಕೂಳಗೆರೆ ಸೇರಿದಂತೆ ಐದು ವಿವಿಧ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸುವ ಸಂಬಂಧ ಇಂದಿನ ಸಭೆ ವೇಳೆ ಚರ್ಚಿಸಿ ಬನ್ನಹಳ್ಳಿ ಏತ ನೀರಾವರಿ ಸಂಪರ್ಕದಲ್ಲಿ ಕೈಬಿಟ್ಟ ಕೆರೆಗಳಿಗೆ ಕಾರ್ಯಯೋಜನೆ ಸಿದ್ಧಪಡಿಸಿರುವುದಾಗಿ ತಿಳಿಸಿದರು.
ಸಿ.ಎ.ಕೆರೆ ವ್ಯಾಪ್ತಿಯ ಏತ ನೀರಾವರಿ ಕಾಮಗಾರಿಗಳ ಕುರಿತಾಗಿ ಇಂದಿನ ಸಭೆ ವೇಳೆ ಹಾಜರಿದ್ದ ಅಧಿಕಾರಿಗಳೊಟ್ಟಿಗೆ ಚರ್ಚಿಸಿ ರೂಪುರೇಷೆಗಳನ್ನು ಸಿದ್ಧಪಡಿಸಿ ನೀರಾವರಿ ಇಲಾಖೆ ಅಧಿಕಾರಿಗಳು ನಿಗಧಿತ ಅವಧಿಯೊಳಗೆ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಒತ್ತು ನೀಡುವಂತೆ ಮತ್ತು ಗುಣ ಮಟ್ಟದ ಕಾಮಗಾರಿಗಳಿಗೆ ಕಡ್ಡಾಯ ಆದ್ಯತೆ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ವೇಳೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ಅಭಿಯಂತರ ರಘುರಾಮನ್, ಮುಖ್ಯ ಅಭಿಯಂತರ ಮಹೇಶ್, ಎಇಇ ನಾಗರಾಜು ಸೇರಿದಂತೆ ಇತರರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.