ಹೊಸಪೇಟೆ: ಮಳೆ ಕೊರತೆಯಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಮುಂಗಾರಿನಲ್ಲಿ ಸಾಕಷ್ಟು ಬೆಳೆ ಹಾನಿ ಆಗಿದೆ. ಕೃಷಿ ವಲಯ ಸದೃಢಗೊಳಿಸಲು ಕೃಷಿ ಇಲಾಖೆ ಅಧಿಕಾರಿಗಳು ಕ್ರಿಯಾಶೀಲತೆ ಮತ್ತು ಬದ್ಧತೆಯಿಂದ ಕಾರ್ಯ ಮಾಡುವ ಮೂಲಕ ಈ ವರ್ಷದ ಬರವು ರೈತರಿಗೆ ಮುಂದಿನ ವರ್ಷಗಳಿಗೆ ವರವಾಗುವಂತೆ ನೆಲ, ಜಲ ಮತ್ತು ಮಣ್ಣು ಸಂರಕ್ಷಣೆಗೆ ಮುಂಜಾಗ್ರತೆಯಾಗಿ ಅಗತ್ಯ ಕಾಮಗಾರಿ ಕೈಗೊಳ್ಳಬೇಕೆಂದು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಬರ ಹಿನ್ನೆಲೆ ರಾಜ್ಯದ ಬಹುತೇಕ ರೈತ ಕುಟುಂಬ, ಕೃಷಿಕೂಲಿ ಕಾರ್ಮಿಕರು ರಾಜ್ಯದ ಗ್ಯಾರಂಟಿ ಯೋಜನೆಗಳ ಮೇಲೆ ಅವಲಂಬನೆ ಆಗಿದ್ದಾರೆ. ಭವಿಷ್ಯತ್ತಿನಲ್ಲಿ ರೈತರಿಗೆ ಉಪಯುಕ್ತವಾಗುವ ಯೋಜನೆ ನಿಮ್ಮ ಅನುಭವದ ಆಧಾರದಲ್ಲಿ ರೂಪಿಸಿ. ವಿಬಿಜಿ ರಾಮ್ ಜಿ ಯೋಜನೆಗೆ ಆದ್ಯತೆ ನೀಡಿ ಮಣ್ಣು, ಜಲ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಮುಂದಿನ ವರ್ಷವೂ ಎಲ್ನಿನೋ ಪರಿಣಾಮದಿಂದ ಮಳೆ ಕೊರತೆ ಆಗುವ ಮಾಹಿತಿ ಇದೆ. ಕೃಷಿ ಇಲಾಖೆ ಅಧಿಕಾರಿ, ರೈತರಿಗೆ ಅಲ್ಪಾವಧಿ ಬೆಳೆ ಬೆಳೆಯುವಂತೆ ಪ್ರೋತ್ಸಾಹ ನೀಡಬೇಕು. ಬರ ಪರಿಸ್ಥಿತಿ ಸಮರ್ಪಕವಾಗಿ ನಿರ್ವಹಿಸಲು ರಾಜ್ಯದ ಕೃಷಿ ವಿಶ್ವವಿದ್ಯಾಲಯ, ಕೃಷಿ ಸಂಶೋಧನಾ ಕೇಂದ್ರ ಸಮರ್ಪಕವಾಗಿ ತೊಡಗಿಸಿಕೊಳ್ಳಬೇಕು. ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ, ಸಂಶೋಧಕರನ್ನು, ಅಧ್ಯಾಪಕರನ್ನು ರೈತರ ಜಮೀನುಗಳಿಗೆ ಕರೆ ತಂದು ರೈತರೊಂದಿಗೆ ಸಮನ್ವಯ ಸಾಧಿಸಲು ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಬೇಕೆಂದು ತಿಳಿಸಿದರು.ಕೃಷಿ ಇಲಾಖೆ ಅಧಿಕಾರಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು. ಸೋಮಾರಿಗಳಂತೆ ಕಚೇರಿಗೆ ಮಾತ್ರ ಸೀಮತವಾಗಬಾರದು. ರೈತರು, ಕೃಷಿ ಕೂಲಿಕಾರರು ಈ ವರ್ಷ ಸಂಕಷ್ಟದಲ್ಲಿದ್ದಾರೆ. ಅವರಿಗೆ ನೆರವಾಗಬೇಕು. ಅವರಿಗೆ ವರ್ಷ ಪೂರ್ತಿ ಕೆಲಸ ಸಿಗುವಂತೆ, ಅದು ಕೃಷಿ ಅಭಿವೃದ್ಧಿಗೆ ಸಹಾಯಕವಾಗುವಂತೆ ಮಾಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕೃಷಿ ಇಲಾಖೆಯ ನಿರ್ದೇಶಕ ಡಾ. ಜಿ.ಟಿ.ಪುತ್ರ ನೇಗಿಲಯೋಗಿ ಯೋಜನೆ ಮತ್ತು ಕೃಷಿ ಇಲಾಖೆ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಕುರಿತು ವಿಜಯನಗರ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡಿ.ಟಿ. ಮತ್ತು ಬಳ್ಳಾರಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ ಕೆ.ಎಂ ವಿವರಿಸಿದರು.
ಕೃಷಿ ಇಲಾಖೆಯಿಂದ ಬೆಳೆ ವಿಮೆ ಯೋಜನೆ ಕುರಿತು ಮತ್ತು ಬರ ನಿರ್ವಹಣಾ ಕ್ರಮಗಳ ಕುರಿತು ರೈತರಲ್ಲಿ ಅರಿವು ಮೂಡಿಸಲು ಮತ್ತು ವ್ಯಾಪಕ ಪ್ರಚಾರ ಕೈಗೊಳ್ಳಲು ರೂಪಿಸಿದ್ದ ಕರಪತ್ರ ಹಾಗೂ ಪೊಸ್ಟರ್ ಸಭೆಯಲ್ಲಿ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಹಾಗೂ ಕೃಷಿ ಇಲಾಖೆ ನಿರ್ದೇಶಕ ಡಾ. ಜಿ.ಟಿ. ಪುತ್ರ, ಸಿಇಓ ಗರಿಮಾ ಪನ್ವಾರ ಬಿಡುಗಡೆ ಮಾಡಿದರು.