ಮಡಿಕಟ್ಟೆ ನಿರ್ಮಾಣಕ್ಕೆ ಅಗತ್ಯ ಕ್ರಮ: ಅನಿತಾ ಪೂವಯ್ಯ

KannadaprabhaNewsNetwork |  
Published : Feb 26, 2024, 01:33 AM IST
ಚಿತ್ರ : 25ಎಂಡಿಕೆ1 : ನಗರಸಭೆ ಅಧ್ಯಕ್ಷರಾದ ನೆರವಂಡ ಅನಿತಾ ಪೂವಯ್ಯ  ಮಾತನಾಡಿದರು.  | Kannada Prabha

ಸಾರಾಂಶ

ವೀರಭದ್ರ ಮುನೇಶ್ವರ ದೇವಾಲಯ ಬಳಿ ‘ಮಡಿಕಟ್ಟೆ’ ನಿರ್ಮಿಸುವ ಸಂಬಂಧ ತೀರ್ಮಾನಿಸಲಾಗುವುದು

ಕನ್ನಡಪ್ರಭ ವಾರ್ತೆ ಮಡಿಕೇರಿನಗರದ ದಾಸವಾಳ ರಸ್ತೆಯ ವೀರಭದ್ರ ಮುನೇಶ್ವರ ದೇವಾಲಯ ಬಳಿ ‘ಮಡಿಕಟ್ಟೆ’ ನಿರ್ಮಿಸುವ ಸಂಬಂಧ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ತಿಳಿಸಿದ್ದಾರೆ.ನಗರದ ದಾಸವಾಳ ರಸ್ತೆಯ ವೀರಭದ್ರ ಮುನೇಶ್ವರ ದೇವಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಡಿವಾಳರ ಅಭಿವೃದ್ಧಿ ಸಂಘ ಸಹಕಾರದಲ್ಲಿ ಭಾನುವಾರ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಡಿವಾಳ ಸಮಾಜದವರು ಕಾಯಕವೇ ಕೈಲಾಸ ಎಂಬಂತೆ ಕಾಯಕ ವೃತ್ತಿ ಮೂಲಕ ಸಮಾಜದಲ್ಲಿ ತಮ್ಮದೇ ಆದ ಸ್ಥಾನ ಹೊಂದಿದ್ದಾರೆ. ಮಡಿವಾಳ ಸಮಾಜದವರು ಮಡಿವಾಳರ ಸಂದೇಶಗಳನ್ನು ತಿಳಿದುಕೊಂಡು, ಅವರ ಆದರ್ಶ, ತತ್ವಗಳನ್ನು ಅಳವಡಿಕೊಂಡು ಸಮಾಜದಲ್ಲಿ ಇತರರಂತೆ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು.ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು, ಬಡವರು ಮೇಲೆ ಬರಬೇಕು. ಎಲ್ಲರಿಗೂ ಸಮಬಾಳು-ಸಮಪಾಲು ಎಂಬ ಶರಣರ ಸಂದೇಶವನ್ನು ಸಮಾಜದಲ್ಲಿ ಹೇಳಿದವರಲ್ಲಿ ಮಡಿವಾಳ ಮಾಚಯ್ಯ ಅವರು ಒಬ್ಬರು ಎಂದರು.ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕೊಳಕನ್ನು ಹೋಗಲಾಡಿಸಿ ಸ್ವಚ್ಛತೆಯಿಂದ ತಾರತಮ್ಯ ಇಲ್ಲದ ಸಮಾಜ ನಿರ್ಮಾಣ ಮಾಡುವ ಗುರಿ ಶರಣ ಮಡಿವಾಳ ಮಾಚಿದೇವರ ಬದುಕಾಗಿತ್ತು. ೧೨ನೇ ಶತಮಾನದಲ್ಲಿ ಕ್ರಾಂತಿಕಾರಕ ಹೋರಾಟ ನಡೆಸಿ ಶರಣರ ವಚನಗಳನ್ನು ಜನರಲ್ಲಿ ಬಿತ್ತರಿಸಲು ಪ್ರಯತ್ನಿಸಿದರು ಎಂದರು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹಿಪ್ಪರಗಿಯ ಪರುತಯ್ಯ ಮತ್ತು ಸುಜ್ಞಾನವ್ವ ದಂಪತಿಯ ಪುತ್ರನಾಗಿ ರತ್ನ-ಶರಣ ಕಿರಣ ಮಡಿವಾಳ ಮಾಚಿದೇವರು ಜನಿಸಿದರು. ಅವರು ಹುಟ್ಟಿನಿಂದ ಮಡಿವಾಳನಾಗಿದ್ದರೂ ಅಚಲ ಕಾಯಕ ನಿಷ್ಠರಾಗಿದ್ದರು ಎಂದರು.

ಭಾರತದ ಇತಿಹಾಸದಲ್ಲಿ ಸಂಸತ್ ಭವನ ಮೊದಲು ಅಸ್ತಿತ್ವಕ್ಕೆ ಬಂದದ್ದು ಬಸವ ಕಲ್ಯಾಣದಲ್ಲಿ, ಆ ನಿಟ್ಟಿನಲ್ಲಿ ಅನುಭವ ಮಂಟಪ ಕಟ್ಟುವಲ್ಲಿ ಶರಣರೊಂದಿಗೆ ಮಡಿವಾಳ ಮಾಚಿದೇವರು ಶಕ್ತಿಮೀರಿ ದುಡಿದಿದ್ದಾರೆ ಎಂದು ವಿವರಿಸಿದರು.

ರಾಜ್ಯದಲ್ಲಿ ಮಡಿವಾಳ ಸಮಾಜವು ೮ ಲಕ್ಷ ಜನಸಂಖ್ಯೆ ಹೊಂದಿದ್ದು, ಹಿಂದುಳಿದ ವರ್ಗವಾಗಿದೆ. ಆ ದಿಸೆಯಲ್ಲಿ ಸರ್ಕಾರದ ಹಲವು ಸವಲತ್ತುಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದರು.

ಮಡಿವಾಳರ ಸಂಘ ಅಧ್ಯಕ್ಷ ಪಿ.ಜಿ.ಸುಕುಮಾರ್ ಮಾತನಾಡಿ, ವೀರಭದ್ರ ಮುನೇಶ್ವರ ದೇವಾಲಯ ಬಳಿ ಈ ಹಿಂದೆ ನಗರಸಭೆಯಿಂದ ಸೇತುವೆ ನಿರ್ಮಿಸಲಾಗಿದೆ. ಅದೇ ರೀತಿ ಈ ಬಾರಿ ಮಡಿಕಟ್ಟೆ ನಿರ್ಮಿಸಬೇಕು ಎಂದು ಮನವಿ ‌ಮಾಡಿದರು. ಮಡಿವಾಳ ಸಮಾಜದ ಹಿರಿಯ ಮುಖಂಡರಾದ ಸುಬ್ರಹ್ಮಣ್ಯ, ಮಂಜುನಾಥ್ ಇತರರು ಇದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು. ದೀಪಿಕಾ ಸಂದೀಪ್ ನಿರೂಪಿಸಿದರು. ಜ್ಯೋತಿ ಪ್ರಾರ್ಥಿಸಿದರು. ಕಾರ್ತಿಕ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?