ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಭೂಸ್ವಾಧೀನಕ್ಕೆ ರೈತರ ವಿರೋಧವಿದೆ. ಇಲ್ಲಿ ಒಂದಿಂಚು ಭೂಮಿಯನ್ನು ಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ. ಭೂಸ್ವಾಧೀನದ ವಿಚಾರದಲ್ಲಿ ಜನಾಂದೋಲನ ರೂಪುಗೊಳ್ಳಬೇಕಾಗಿದೆ ಎಂದು ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ ಕರೆ ನೀಡಿದರು.
ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಸ್ವಾಧೀನ ವಿರೋಧಿಸಿ ಬೈರಮಂಗಲದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ರೈತರು ರಾಮನಗರದ ಎಪಿಎಂಸಿ ಯಾರ್ಡ್ ಬಳಿಯಿಂದ ಆರಂಭಿಸಿದ ಬೈಕ್ ರ‍್ಯಾಲಿ ಬೈರಮಂಗಲಕ್ಕೆ ತೆರಳಿತು. ಆನಂತರ ರೈತರು ಹೋರಾಟದಲ್ಲಿ ಪಾಲ್ಗೊಂಡ ಬಳಿಕ ಅವರು ಮಾತನಾಡಿದರು.ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ತಿಂಗಳಿಗೆ 6 ಲಕ್ಷ ಲೀಟರ್‌ಗೂ ಹೆಚ್ಚು ಹಾಲು ಉತ್ಪಾದನೆ ಯಾಗುತ್ತಿದೆ. ಎರಡೂವರೆ ಸಾವಿರ ಎಕರೆ ಭೂಮಿಯಲ್ಲಿ ರೇಷ್ಮೆ ಕೃಷಿ ನಡೆಯುತ್ತಿದೆ. 5 ಲಕ್ಷಕ್ಕೂ ಅಧಿಕ ಸಂಖ್ಯೆಯ ತೆಂಗಿನ ಮರಗಳಿವೆ. ಬಾಳೆ ಕೃಷಿ ಫಲವತ್ತಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳಗಳಿಗೆ ಸೂಕ್ತವಾಗಿರುವ ಇಂತಹ ಭೂಮಿಯನ್ನು ಕಬಳಿಸಲು ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಎಚ್ಚರಿಸಿದರು.
ಎಐ ತಂತ್ರಜ್ಞಾನ ಮತ್ತು ಅದನ್ನು ಅಭಿವೃದ್ದಿ ಪಡಿಸುವ ಸಂಸ್ಥೆಗಳು ಅಗತ್ಯವಿದೆ ನಿಜ. ಆದರೆ ಫಲವತ್ತಾದ ಭೂಮಿಯಲ್ಲೇ ಏಕೆ? ಗೋಮಾಳ ಸೇರಿದಂತೆ ಸರ್ಕಾರದ ಸುಪರ್ದಿನಲ್ಲಿರುವ ಭೂಮಿಯಲ್ಲಿ ಎಲ್ಲಾ ಮೂಲ ಸೌಕರ್ಯಗಳನ್ನು ಕೊಟ್ಟು ಈ ಯೋಜನೆ ಜಾರಿಗೊಳಿಸಲಿ. ಎಐ ಸಿಟಿ ನಿರ್ಮಾಣವಾದ ನಂತರ ಅಲ್ಲಿ ರಾಗಿ, ಬತ್ತ ಬೆಳೆಯಲು ಸಾಧ್ಯವೇ? ಹೈನುಗಾರಿಕೆ ಸಾಧ್ಯವೇ ಎಂದು ಪ್ರಶ್ನಿಸಿದರು.ರೈತರ ವಿರೋಧದ ನಡುವೆಯೂ ಭೂಸ್ವಾಧೀನಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ. ಬಹುಶಃ ಯೋಜನೆಯ ಮೂಲಕ 5 ಸಾವಿರ ಕೋಟಿ ಹಣ ಮಾಡಿ ತಮ್ಮ ಪಕ್ಷದ ಹೈಕಮಾಂಡ್‌ಗೆ ಕೊಡಲು ಯೋಜನೆಯ ಪರ ನಿಂತಿದ್ದಾರಾ ಎಂದು ಅನುಮಾನ ವ್ಯಕ್ತಪಡಿಸಿದರು.
ಎಐ ಸಿಟಿ ನಿರ್ಮಿಸುತ್ತೇವೆ ಅಂತ ಹೇಳುತ್ತಿರುವವರು ಬೈರಮಂಗಲ ಕೆರೆ ನೀರನ್ನು ಶುದ್ದೀಕರಿಸಿ ಹರಿಸಲಿ. ಬೈರಮಂಗಲ ಕೆರೆ ಕಾರಣ ಈ ಭಾಗದಲ್ಲಿ ರೋಗ-ರುಜಿನುಗಳು ಕಾಡುತ್ತಿವೆ. ಪರಿಸ್ಥಿತಿ ಹೀಗಿರುವಾಗ ಎಐ ಸಿಟಿಗೆ ಯಾವ ಸಂಸ್ಥೆಯವರು ಬರುತ್ತಾರೆ. ಸರ್ಕಾರ ಮೊದಲು ಬೈರಮಂಗಲ ಕೆರೆ ನೀರನ್ನು ಶುದ್ದೀಕರಿಸಲಿ, ಬೆಂಗಳೂರು ರಸ್ತೆಗಳ ಗುಂಡಿಗಳನ್ನು ಮುಚ್ಚಲಿ ನಂತರ ಇಂತಹ ಯೋಜನೆಗಳ ಬಗ್ಗೆ ಗಮನ ಹರಿಸಲಿ ಎಂದು ಸಲಹೆ ನೀಡಿದರು.ಜಿಬಿಎ ಎಐ ಸಿಟಿ ನಿರ್ಮಾಣಕ್ಕೆ ಭೂಸ್ವಾಧೀನ ತಡೆಯಲು ದೇವನಹಳ್ಳಿ ಮಾದರಿಯ ಹೋರಾಟದ ಅಗತ್ಯವಿದೆ. ದೇವನಹಳ್ಳಿಯಲ್ಲಿ ಸರ್ಕಾರ ವಿವಿಧ ಯೋಜನೆಗಳಿಗೆ ಭೂಸ್ವಾಧೀನಕ್ಕೆ ಮುಂದಾದಾಗ ಎಲ್ಲಾ ಸಂಘಟನೆಗಳು ಒಕ್ಕೊರಲಿನ ವಿರೋಧ ವ್ಯಕ್ತಪಡಿಸಿದಾಗ ಜನಾಂದೋಲನ ನಿರ್ಮಾಣವಾಯಿತು. ಎಐ ಸಿಟಿ ಭೂಸ್ವಾಧೀನ ವಿಚಾರದ ಹೋರಾಟ ಜನಾಂದೋಲ ಸ್ವರೂಪ ಪಡೆಯಬೇಕು ಆಗ ಮಾತ್ರ ಸರ್ಕಾರ ಹಿಂದೆ ಸರಿಯಬಹುದು. ಇಲ್ಲದಿದ್ದರೆ ಡಿ.ಕೆ.ಶಿವಕುಮಾರ್ ಅವರಂತಹ ಪ್ರಭಾವಿಗಳು ರೈತರನ್ನು ಹೆದರಿಸಿ, ಬೆದರಿಸಿ ರೈತರಿಂದ ಭೂಸ್ವಾಧೀನ ಮಾಡಿಕೊಳ್ಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು. ಎಐ ಸಿಟಿ ನಿರ್ಮಾಸಿ ಹಣ ಮಾಡುವವರಿಗೆ ದಂಧೆಯಾಗುವುದು ಬೇಡ ಎಂದು ಕುಮಾರಸ್ವಾಮಿ ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ, ಮುಖಂಡರಾದ ಚೀಲೂರು ಮುನಿರಾಜು, ತಿಮ್ಮೇಗೌಡ, ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಕೃಷ್ಣಯ್ಯ, ಜಿಲ್ಲಾ ಮಹಿಳಾ ರೈತ ಘಟಕದ ಅಧ್ಯಕ್ಷೆ ರತ್ನಮ್ಮ, ಮಾಗಡಿ ತಾಲೂಕು ಘಟಕದ ಅಧ್ಯಕ್ಷ ಲೋಕೇಶ್, ಚನ್ನಪಟ್ಟಣ ತಾಲೂಕು ಘಟಕದ ಅಧ್ಯಕ್ಷ ವಿಜಯ್ ಕುಮಾರ್, ಕಾರ್ಯದರ್ಶಿ ವೆಂಕಟೇಶ್, ಹಾರೋಹಳ್ಳಿ ತಾಲೂಕು ಘಟಕದ ಅಧ್ಯಕ್ಷ ಕುಮಾರ್, ದಲಿತ ಸೇನೆ ಜಿಲ್ಲಾಧ್ಯಕ್ಷ ಕಿರಣ್ ಮುಂತಾದವರು ರ‍್ಯಾಲಿಯಲ್ಲಿ ಭಾಗಿಯಾಗಿದ್ದರು.ನಗರದ ಎಪಿಎಂಸಿ ಯಾರ್ಡ್ ಬಳಿಯಿಂದ ಮಂಗಳವಾರ ಬೆಳಿಗ್ಗೆ ಸುಮಾರು 150ಕ್ಕೂ ಹೆಚ್ಚು ಮಂದಿ ರೈತರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬೈಕ್ ರ‍್ಯಾಲಿ ಆರಂಭಿಸಿದರು. ಬೈಕ್ ರ‍್ಯಾಲಿ ಬೈರಮಂಗಲದ ಬಳಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ತೆರಳಿತು. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಆ ಭಾಗದ ಗ್ರಾಮಸ್ಥರ ಬೆಂಬಲ ವ್ಯಕ್ತಪಡಿಸಿ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
4ಕೆಆರ್ ಎಂಎನ್ 4,5.ಜೆಪಿಜಿ4.ರೈತರು ಬೈಕ್ ರ್ಯಾಲಿಯಲ್ಲಿ ಬೈರಮಂಗಲಕ್ಕೆ ತೆರಳುತ್ತಿರುವುದು.
5.ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ರೈತರು ಪಾಲ್ಗೊಂಡಿರುವುದು.