ಕನ್ನಡಪ್ರಭ ವಾರ್ತೆ ತುಮಕೂರು
ಪ್ರತಿನಿತ್ಯ ಸಾರಿಗೆ ವಾಹನಗಳಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚುತ್ತಿದ್ದು ಅಗತ್ಯಕ್ಕೆ ಬೇಕಾಗಿರುವ ಸಿಬ್ಬಂದಿ, ವಾಹನಗಳು ಇಲ್ಲದೆ ಒತ್ತಡದಲ್ಲಿ ಸಾರಿಗೆ ನೌಕರರು ದುಡಿಯುತ್ತಿದ್ದು ಸಾರಿಗೆ ಇಲಾಖೆಯಲ್ಲಿ ಕಾರ್ಮಿಕ ಸ್ನೇಹಿಯಾದ ಭಾಂಧವ್ಯ ಅಗತ್ಯವಾಗಿದೆ ಎಂದು ಸಿಐಟಿಯುನ ಜಿಲ್ಲಾಧ್ಯಕ್ಷ ಸೈಯದ್‌ಮುಜೀಬ್ ಅಭಿಪ್ರಾಯಪಟ್ಟರು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವೇತನ ಬಾಕಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ತುಮಕೂರು ಸಾರಿಗೆ ನಿಗಮದ ಎದುರು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರಕ್ಕೆ ಶಕ್ತಿ ಯೋಜನೆಯಿಂದ ಉತ್ತಮ ಹೆಸರು ಬಂದಿದೆ. ಶಕ್ತಿ ಯೋಜನೆಯನ್ನು ಜಾರಿಗೆ ತಂದ ಸರ್ಕಾರದ ಗ್ಯಾರಂಟಿ ಯೋಜನೆಯ ಬಾಗವಾಗಿದ್ದು ಇದನ್ನು ಸಿಐಟಿಯು ಸ್ವಾಗತಿಸುತ್ತದೆ ಆದರೆ ಈ ಯೋಜನೆಯಡಿಯಲ್ಲಿ ಪ್ರತಿ ನಿತ್ಯ ದುಡಿಯುತ್ತಿರುವ ಸಾರಿಗೆ ನೌಕರರ ಬೇಡಿಕೆಗಳನ್ನು ಸಹ ಇಲಾಖೆ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದರು.ಪ್ರತಿ ನಿತ್ಯ ಸಾರಿಗೆ ಒತ್ತಡಗಳಿಂದ ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ ಕಾರ್ಮಿಕ ಇಲಾಖೆಯಲ್ಲಿ ಪ್ರತಿ ನಿತ್ಯ 100 ಅರ್ಜಿಗಳಲ್ಲಿ ಅರ್ಧದಷ್ಟು ಅರ್ಜಿಗಳು ಸಾರಿಗೆ ಇಲಾಖೆಯದ್ದು ಇರುತ್ತದೆ. ಇದು ಸಾರಿಗೆ ಇಲಾಖೆ ಮತ್ತು ಸಾರಿಗೆ ನೌಕರರ ಬಾಂಧವ್ಯವನ್ನು ಸೂಚಿಸುತ್ತದೆ ಇದು ಒಳ್ಳೆಯ ಬೆಳವಳಿಗೆಯಲ್ಲ ಎಂದರು.
ಸಾರಿಗೆ ಸಂಸ್ಥೆಯ ಮೂಲ ಉದ್ದೇಶವನ್ನು ಮರೆತು ಖಾಸಗೀಯವರಿಗೆ ನೀಡುವುದು ಸಾರಿಗೆ ಸಂಸ್ಥೆಯ ಕೆಲಸವಲ್ಲ, ಗುತ್ತಿಗೆ ಹೊರಗುತ್ತಿಗೆಯಲ್ಲಿ ದುಡಿಸಿಕೊಳ್ಳುವುದನ್ನು ಕೈಬಿಡಬೇಕು, ಸುಮಾರು 38 ತಿಂಗಳುಗಳಿಂದ ಬಾಕಿ ಇರುವ ವೇತನವನ್ನು ಕೂಡಲೇ ಪಾವತಿಸಬೇಕು, ಸಾರಿಗೆ ನೌಕರರಿಗೆ ಹೊಸ ವೇತನ ಒಪ್ಪಂದವನ್ನು ಜಾರಿಮಾಡಬೇಕು ಎಂದು ಆಗ್ರಹಿಸಿದರು.ಕೆಎಸ್‌ಆರ್‌ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಎಐಟಿಯುಸಿಯ ಗೌರವಾಧ್ಯಕ್ಷ ಗಿರೀಶ್ ಮಾತನಾಡಿ, ಕೇಂದ್ರ ಸರ್ಕಾರದ ಖಾಸಗೀಕರಣದ ನೀತಿಗಳಿಂದಾಗಿ ಇಂದು ಕೆಎಸ್‌ಆರ್‌ಟಿಸಿ ಸಾರಿಗೆ ನಿಗಮವು ಸಹ ಹೊರತಾಗಿಲ್ಲ ನೌಕರರು ತಮ್ಮ ವೇತನ ಹೆಚ್ಚಳ, ಪ್ರಮೋಷನ್‌ಗೆ ಮಾತ್ರ ಸೀಮಿತವಾಗದೆ ಅನ್ಯಾಯವನ್ನು ಪ್ರಶ್ನಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಇಂದು ಕೈಗಾರಿಕಾ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಯಗಳು ಸಾರಿಗೆ ನೌಕರರಿಗೆ ಬರುವ ದಿನಗಳು ದೂರವಿಲ್ಲ. ಹಾಗಾಗಿ ಸಾರಿಗೆ ನೌಕರರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು ಸಾರಿಗೆ ಇಲಾಖೆ ಸಾರಿಗೆ ನೌಕರರಿಗೆ ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು, ಶಕ್ತಿ ಯೋಜನೆಯ ಅನುದಾನವನ್ನು ಕೂಡಲೇ ಸಾರಿಗೆ ಇಲಾಖೆಗೆ ಪಾವತಿಸಬೇಕು ಎಂದು ಆಗ್ರಹಿಸಿದರು.
ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಕಾರ್ಮಿಕರ ಬೇಡಿಕೆಗಳಾದ 38 ತಿಂಗಳ ವೇತನ ಬಿಡುಗಡೆ, ಹೊಸ ವೇತನ ಒಪ್ಪಂದ ಜಾರಿ, ನಿವೃತ್ತಿ ಹೊಂದಿದ ಮತ್ತು ಹೊರಗೆ ಹೋಗಿರುವ ನೌಕರರಿಗೆ ಹೊಸ ವೇತನ ಶ್ರೇಣಿ ಜಾರಿ ಹಾಗೂ ಶಕ್ತಿ ಯೋಜನೆಯ ಸಂಪುರ್ಣ ಅನುದಾನವನ್ನು ಸರ್ಕಾರ ಕೂಡಲೇ ಸಾರಿಗೆ ನಿಗಮಕ್ಕೆ ಪಾವತಿಸಲು ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಧರಣಿ ಸತ್ಯಗ್ರಹದಲ್ಲಿ, ಕೆಎಸ್‌ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಷನ್ ಎಐಟಿಯುಸಿ ಅಧ್ಯಕ್ಷ ಹತ್ರಶ್‌ಪಾಷ, ಚಂದ್ರೇಗೌಡ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್‌ನ ಸಿಐಟಿಯುನ ದೇವರಾಜು, ಶಮೀಉಲ್ಲಾ. ರಾಜಣ್ಣ, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿಯ ಬಸವರಾಜು ರಾಜ್ಯ ಮುಖಂಡ ಮಂಜುನಾಥ್ ಕೆ.ಎಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.