ಲಿಂಗಾಯತ ಒಳಪಂಗಡಗಳ ಸಂಘಟನೆ ಅಗತ್ಯ: ಜಗದೀಶ ಶೆಟ್ಟರ್‌

KannadaprabhaNewsNetwork |  
Published : Aug 22, 2024, 12:50 AM IST
ಬಣಜಿಗ ಸಮಾಜದ ಪ್ರತಿಭಾ ಪುರಸ್ಕಾರ ಮತ್ತು ಸಂಸದರ ಸನ್ಮಾನ ಸಮಾರಂಭವನ್ನು ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಮದುರ್ಗ ಪಟ್ಟಣದಲ್ಲಿ ಕರ್ನಾಟಕ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಆಯೋಜಿಸಿದ್ದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ ಮತ್ತು ನೂತನ ಸಂಸದರಿಗೆ ಸನ್ಮಾನ ಸಮಾರಂಭವನ್ನು ಸಂಸದ ಜಗದೀಶ ಶೆಟ್ಟರ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ವೀರಶೈವ ಲಿಂಗಾಯತ ಒಳಪಂಗಡಗಳು ಆಯಾ ಸಮಾಜದ ಪ್ರತಿಭಾವಂತರಿಗೆ, ಸಾಧಕರಿಗೆ ಪ್ರೋತ್ಸಾಹಿಸಲು ಹಾಗೂ ಸರ್ಕಾರಿ ಸೌಲಭ್ಯ ಪಡೆಯಲು ಲಿಂಗಾಯತ ಸಮಾಜವನ್ನು ಸಂಘಟನೆ ಮಾಡಲಾಗುತ್ತಿದೆಯೇ ಹೊರತು ಬೇರೆ ಸಮಾಜದವರೊಂದಿಗೆ ಸಂಘರ್ಷಕ್ಕಾಗಿ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಮಂಗಳವಾರ ಪಟ್ಟಣದ ಬಸವ ಗಾರ್ಡನ್‌ನಲ್ಲಿ ಕರ್ನಾಟಕ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಆಯೋಜಿಸಿದ್ದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ ಮತ್ತು ನೂತನ ಸಂಸದರಿಗೆ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮಾಜದಲ್ಲಿ ಸಾಕಷ್ಟು ಒಳಪಂಗಡಗಳಿದ್ದು, ಎಲ್ಲ ಪಂಗಡಗಳಿಗೆ ಒಂದೇ ವೇದಿಕೆಯಲ್ಲಿ ಪ್ರೋತ್ಸಾಹ ನೀಡಲು ಸಾಧ್ಯವಾಗದ್ದರಿಂದ ಎಲ್ಲ ಒಳಪಂಗಡಗಳು ಸಂಘಟಿತರಾಗುತ್ತಿವೆ. ಯಾವುದೇ ಒಂದು ಸಮಾಜದ ಬೆಂಬಲದಿಂದ ಯಾವದೇ ವ್ಯಕ್ತಿ ಜನನಾಯಕರಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಉದ್ಘಾಟಿಸಿದ ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಮಾತನಾಡಿ, ಲಿಂಗಾಯತ ಒಳ ಪಂಗಡಗಳು ಕೇವಲ ಸಮಾವೇಶ, ಸಭೆ ಸಮಾರಂಭ ಮಾಡದೇ ಸಮಾಜದಲ್ಲಿ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನರನ್ನು ಗುರ್ತಿಸಿ ಮುಖ್ಯವಾಹಿನಿಗೆ ತರಲು ಶ್ರಮಿಸಿದರೆ ಮಾತ್ರ ಬಸವಣ್ಣನವರ ಸಮ ಸಮಾಜ ನಿರ್ಮಾಣ ಸಾಧ್ಯವೆಂದು ಹೇಳಿದರು.

ತಾಳಿಕೋಟಿಯ ಪ್ರೌಢಶಾಲಾ ಶಿಕ್ಷಕ ಅಶೋಕ ಹಂಚಳಿ ಉಪನ್ಯಾಸ ನೀಡಿದರು. ತಾಲೂಕು ಘಟಕದ ಅಧ್ಯಕ್ಷ ಗುರುಸಿದ್ದಪ್ಪ ಮುತ್ತೂರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವರಿ ಪುಠಾಣಿ, ಯುವ ಘಟಕದ ಅಧ್ಯಕ್ಷ ರಾಜು ಬೆಂಬಳಗಿ, ಗೋಕಾಕದ ಹರ್ಷಿತಾ ಸವಣೂರ ಇದ್ದರು.

ಮಹೇಶ ದೇಶನೂರ, ಶೇಖರಪ್ಪ ಯಾದವಾಡ, ಬಸವಣ್ಣೆಪ್ಪ ಹುದ್ದಾರ, ಶಶಿಧರ ಮಾಳವಾಡ ಇವರಿಗೆ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಈರಣ್ಣ ಬುಡ್ಡಾಗೋಳ ಸ್ವಾಗತಿಸಿದರು. ಪ್ರೊ.ಎಸ್. ಎಂ. ಸಕ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿವ್ಯಾ ಬಟಕುರ್ಕಿ ನಿರೂಪಿಸಿದರು. ಸಿದ್ದು ಹದ್ಲಿ ವಂದಿಸಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ