ಸುರೇಶ ಯಳಕಪ್ಪನವರ

ಹಂಪಿ: ಹಂಪಿಯ ಐತಿಹಾಸಿಕ ಘಟನೆಗಳನ್ನು ಮೆಲುಕು ಹಾಕುವ ನಿಟ್ಟಿನಲ್ಲಿ ಸುವರ್ಣಯುಗದ ವಜ್ರ, ವೈಢೂರ್ಯ, ಸ್ವರ್ಣ, ಮುತ್ತುಗಳ ಮಾರಾಟದ ರಾಜಬೀದಿ ನಾಡಿನ ಗತವೈಭವ ಸಾರುವಂತೆ ಅಲಂಕರಿಸಲಾಗಿದೆ. ಕೃಷ್ಣದೇವರಾಯರ ಪ್ರತಿಮೆ ಗಾಂಭೀರ್ಯ ಗತ್ತಿನಿಂದ ಹೂಗಳಿಂದ ನಿರ್ಮಿಸಲಾಗಿರುವುದು ವಿಶೇಷವಾಗಿದೆ.

ಹೊಸಪೇಟೆ ಕಲಾವಿದ ಜಗದೀಶ್ ಕೈಚಳಕದಲ್ಲಿ ಮೂಡಿಬಂದ ಎರಡು ಕಲಾಕೃತಿಗಳು ಉತ್ಸವಕ್ಕೆ ಮೆರಗು ತಂದಿದ್ದವು. ಚಂಡು ಹೂಗಳಿಂದ ಬಡವಿ ಶಿವಲಿಂಗ, ಸಾಸಿವೆಕಾಳು ಗಣಪ ನಿರ್ಮಿಸಲಾಗಿದೆ. ಬಡವಿ ಶಿವಲಿಂಗ ನಿರ್ಮಾಣಕ್ಕೆ ೧೦ ಸಾವಿರ ಹಾಗೂ ಸಾಸಿವೆ ಕಾಳು ಗಣಪತಿ ನಿರ್ಮಾಣಕ್ಕೆ ೫ ಸಾವಿರ ಹೂಗಳು ಬಳಕೆ ಮಾಡಿದ್ದಾರೆ. ಪುಷ್ಪಲೋಕದಲ್ಲಿ ಅರಳಿದ ಬೃಹತ್ ಬಡವಿ ಶಿವಲಿಂಗ, ಸಾಸಿವೆಕಾಳು ಗಣಪತಿ ಪ್ರಮುಖ ಆಕರ್ಷಣೆ ಎನಿಸಿವೆ. ನೇರಳೆ, ಹಳದಿ ಬಣ್ಣದ ಸೇವಂತಿ, ಗುಲಾಬಿ, ಬಿಳಿ, ಕೆಂಪು ಬಣ್ಣಗಳಿಂದ ಫಲಪುಷ್ಪ ಪ್ರದರ್ಶನ ಜನಮನ ಸೂರೆಗೊಳ್ಳುತ್ತಿದೆ.

ಸುಗ್ಗಿ ಸಂಭ್ರಮದ ಮೆರಗು:

ದವಸ ಧಾನ್ಯಗಳ ರಾಶಿ ಪೂಜೆ ಮಾಡುವ ಮೂಲಕ ಸುಗ್ಗಿ ಸಂಭ್ರಮಕ್ಕೆ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಚಾಲನೆ ನೀಡಿದರು. ಕೃಷಿ ವಸ್ತುಗಳ ಪ್ರದರ್ಶನ ನಾಡಿನ ರೈತರ ಬದುಕನ್ನು ಅನಾವರಣಗೊಳಿಸಿತು. ಸುಗ್ಗಿ ಸಂಭ್ರಮ, ಪಾರಂಪರಿಕ ಹಾಗೂ ಆಧುನಿಕ ಕೃಷಿ ಪದ್ಧತಿಗಳ ಸಹಯೋಗದೊಂದಿಗೆ ಸುಸ್ಥಿರ ಕೃಷಿ ಅಭಿವೃದ್ಧಿ ಸಾಧ್ಯತೆಯನ್ನು ವಸ್ತು ಪ್ರದರ್ಶನ ಸಾರುತ್ತಿದೆ. ಸಂಕ್ರಾಂತಿ ಹಬ್ಬ, ರಾಶಿಪೂಜೆ, ಬೀಜಗಳ ಒಕ್ಕಣೆ ಮಾಡುತ್ತಾ ಹಾಗೂ ಒಳಕಲ್ಲಿನಲ್ಲಿ ಧಾನ್ಯ ಬೀಸುತ್ತಾ ಜನಪದ ಗೀತೆ ಹಾಡುವ ಗ್ರಾಮೀಣ ಮಹಿಳೆಯರು, ಎತ್ತಿನ ಬಂಡಿ ಹಳ್ಳಿ ಸೊಗಡನ್ನು ಚಿತ್ರಣವನ್ನು ನೋಡುಗರ ಕಣ್ಣಿಗೆ ಕಟ್ಟಿಕೊಡುತ್ತಿವೆ. ಜಿಲ್ಲಾಡಳಿತ ಉತ್ಸವದಲ್ಲಿ ಕೃಷಿಗೆ ವಿಶೇಷ ಆಧ್ಯತೆ ನೀಡಿದ್ದು ಎಲ್ಲೆಡೆ ಕಂಡುಬಂತು.


ಸಿರಿಧಾನ್ಯಗಳಲ್ಲಿ ಮೂಡಿಬಂದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವಿನೀತಳಾಗಿ ಕೈಮುಗಿದು ನಿಂತ ಪ್ರತಿಮೆ, ಪರಿಸರ ರಕ್ಷಣೆ ನೋಡುಗರನ್ನು ಪ್ರೇರೆಪಿಸುತ್ತದೆ. ತೋಟಗಾರಿಕೆ ಇಲಾಖೆಯವರು ಉತ್ಸವದಲ್ಲಿ ಸರಳ ಬೇಸಾಯ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ವಿವಿಧ ಮಾಹಿತಿಗಳನ್ನು ಪ್ರದರ್ಶಿಸಿ ರೈತರನ್ನು ಸೆಳೆಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

ಫಲಪುಷ್ಪ ಪ್ರದರ್ಶನ:

ಹಂಪಿಯ ಮಾತಂಗ ಪರ್ವತ ಮೈದಾನದಲ್ಲಿ ಆಯೋಜಿಸಲಾಗಿದ್ದ ಫಲಪುಷ್ಪ, ಕೃಷಿ, ಅರಣ್ಯ, ಮತ್ಸ್ಯ, ವ್ಯಾಪಾರ ಮಳಿಗೆಗೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಚಾಲನೆ ನೀಡಿದರು. ಉಪವಿಭಾಗಧಿಕಾರಿ ವಿವೇಕ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪ್ರಭುರಾಜ್ ಹಿರೇಮಠ, ಕೃಷಿ ಜಂಟಿ ನಿರ್ದೇಶಕ ಬಿ.ಟಿ.ಮಂಜುನಾಥ, ಉಪನಿರ್ದೇಶಕ ಡಾ.ನಹೀಂಪಾಷ, ಉಪಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ಮೀನುಗಾರಿಕೆ ಇಲಾಕೆ ಉಪನಿರ್ದೇಶಕ ಬಿ.ಮಲ್ಲೇಶ್ ಸೇರಿದಂತೆ ಇತರರಿದ್ದರು.

ಪ್ರದರ್ಶನದಲ್ಲಿ ಕುಲಾಂತರಿ ಹಾಗೂ ವಿದೇಶಿ ಬೀಜಗಳ ನಡುವೆಯೂ ಜವಾರಿ ಹಾಗೂ ನಾಟಿ ಬೀಜ ಸಂಪತ್ತು, ಜೀವ ಹಾಗೂ ಸಸ್ಯ ವೈವಿಧ್ಯತೆ ಕಾಪಾಡುವ ಮಹತ್ವ ಸಾರುತ್ತಿವೆ. ಕೃಷಿ ವಸ್ತು ಪ್ರದರ್ಶನದಲ್ಲಿ ದೇಶಿ ಪಾರಂಪರಿಕ ಕೃಷಿ ಉತ್ಪನ್ನಗಳು ರೈತರ ಜೀವನ ತರೆದಿಡುತ್ತಿವೆ. ಸಿರಿಧಾನ್ಯಗಳಲ್ಲಿ ಮೂಡಿಬಂದ ಗಣಪತಿ, ಕೆ.ಎಸ್.ಡಿ.ಎ ಲಾಂಚನ ಹಾಗೂ ನಂದಿ ಜನರನ್ನು ಸಳೆಯುತ್ತಿವೆ. ಇದರೊಂದಿಗೆ ಕೃಷಿಯಲ್ಲಿ ದ್ರೋಣಗಳ ಬಳಕೆ, ಟ್ರಾಕ್ಟರ್, ಪಶುಪಾಲನೆಯೊಂದಿಗೆ ಸಮಗ್ರ ಕೃಷಿ ಪದ್ದತಿ ಬಗ್ಗೆ ತಿಳಿಸುವ ಕೃಷಿ ಬ್ರ‍್ರಹ್ಮಾಂಡ, ರೇಷ್ಮೆ ಕೃಷಿ, ಸಿರಿಧಾನ್ಯಗಳ ಖಾದ್ಯಗಳ ಹಾಗೂ ಸಾವಯವ ಕೃಷಿ ಉತ್ಪನ್ನ ಮಾರಾಟ ಈ ಬಾರಿಯ ಕೃಷಿ ಪ್ರದರ್ಶನದಲ್ಲಿ ಪ್ರಮುಖ ಎನಿಸಿವೆ.

ಜೀವ ವೈವಿಧ್ಯತೆಗೆ ಆದ್ಯತೆ:

ಜಿಲ್ಲೆಯ ಹೆಮ್ಮೆಯ ದರೋಜಿ ಕರಡಿಧಾಮವನ್ನು ಹಂಪಿಯ ಅಂಗಳದಲ್ಲಿ ಅರಣ್ಯ ಇಲಾಖೆ ಅತ್ಯಂತ ಸುಂದರವಾಗಿ ಸೃಷ್ಟಿಸಿದೆ. ವಿಜಯನಗರ ಜಿಲ್ಲೆಯ ಸಮೃದ್ಧ ಜೀವ ವೈವಿಧ್ಯತೆಯನ್ನು ಪರಿಚಯಿಸುವ ಅರಣ್ಯ ಇಲಾಖೆಯ ವಸ್ತು ಪ್ರದರ್ಶನ ಮಳಿಗೆಯು ಪ್ರವಾಸಿಗರ ಮನಗೆಲ್ಲುತ್ತಿದೆ. ಬೆಟ್ಟಗುಡ್ಡಗಳ ಸಾಲು, ಕಲ್ಲುಗಳ ನಡುವಿನ ಗುಹೆಗಳು ಮತ್ತು ಹಸಿರಿನ ಹೊದಿಕೆಯನ್ನು ಕಂಡು ಪ್ರವಾಸಿಗರು ನಿಬ್ಬೆರಗಾಗುತ್ತಿದ್ದಾರೆ. ಹುಲಿ, ಚಿರತೆ, ಕರಡಿ ಹಾಗೂ ವಿವಿಧ ಉರಗಗಳ ಕಲಾಕೃತಿಗಳು ಪ್ರೇಕ್ಷಕರನ್ನು ಸ್ವಾಗತಿಸುತ್ತವೆ. ಇವುಗಳನ್ನು ಕಂಡ ಪ್ರವಾಸಿಗರು ಇವುಗಳ ಮುಂದೆ ನಿಂತು ಫೋಟೋ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ.

ಮಾತಂಗ ಪರ್ವತ ಮೈದಾನದಲ್ಲಿ ಮೀನುಗಾರಿಕೆ ಇಲಾಖೆ ಆಯೋಜಿಸಿರುವ ಮತ್ಸ್ಯ ಮೇಳವು ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಸಾಗರದ ಆಳದಲ್ಲಿನ ಮತ್ಸ್ಯ ಸಂಪತ್ತಿನ ವೈವಿಧ್ಯತೆಯನ್ನು ಪರಿಚಯಿಸುವ ಉದ್ದೇಶದಿಂದ ಏರ್ಪಡಿಸಿರುವ ಪ್ರದರ್ಶನದಲ್ಲಿ ದೇಶಿ ಹಾಗೂ ವಿದೇಶಿ ಮೂಲದ ೪೫ಕ್ಕೂ ಹೆಚ್ಚು ತಳಿಯ ಅಲಂಕಾರಿಕ ಮೀನುಗಳಿವೆ. ಪ್ರಮುಖ ಆಕರ್ಷಣೆಯಾಗಿ ಜಿಲ್ಲೆಯ ಮತ್ಸ್ಯ ಸಂಪತ್ತಿನ ಆಕರವಾದ ತುಂಗಭದ್ರಾ ಜಲಾಶಯದ ಪ್ರತಿಕೃತಿ ನಿರ್ಮಿಸಲಾಗಿದೆ.