ಜನಪರ, ಜೀವಪರ ಸಾಹಿತ್ಯದ ಮೂಲಕ ಜನರಲ್ಲಿ ಅರಿವು ಮೂಡಿಸುವ ಅಗತ್ಯ: ಡಾ.ಎಸ್.ತುಕಾರಾಮ್

KannadaprabhaNewsNetwork |  
Published : Dec 01, 2024, 01:30 AM IST
3 | Kannada Prabha

ಸಾರಾಂಶ

ಪ್ರಸ್ತುಕ ಕಾಲಘಟ್ಟದಲ್ಲಿ ಮರ್ಯಾದೆಯ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಕೊಲ್ಲಲಾಗುತ್ತಿದೆ. ಏಕ ಸಂಸ್ಕೃತಿಯ ಹೆಸರಿನಲ್ಲಿ ಬಹು ಸಂಸ್ಕೃತಿಯನ್ನು ನಾಶ ಮಾಡಲಾಗುತ್ತಿದೆ. ಇದರೊಂದಿಗೆ ಕೋಮುವಾದಿ ಶಕ್ತಿಗಳು ಅಟ್ಟಹಾಸ ಮೆರೆಯುತ್ತಿವೆ. ಹೀಗಾಗಿ, ಜನರಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕೋಮುವಾದಿ ಶಕ್ತಿಗಳು ವಿಜೃಂಭಿಸುತ್ತಿರುವ ಕಾಲಘಟ್ಟದಲ್ಲಿ ಜನಪರ, ಜೀವಪರ ಸಾಹಿತ್ಯದ ಮೂಲಕ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಲಹೆಗಾರ ಡಾ.ಎಸ್. ತುಕಾರಾಮ್ ತಿಳಿಸಿದರು.

ಮಾನಸಗಂಗೋತ್ರಿಯ ಇಎಂಎಂಆರ್‌ ಸಿ ಸಭಾಂಗಣದಲ್ಲಿ ದಲಿತ ಸಾಹಿತ್ಯ ಪರಿಷತ್ತು, ಮೈಸೂರು ವಿವಿ ಸಂಶೋಧಕರ ಸಂಘ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಬಿ. ರಾಜಣ್ಣ ಅವರ ಮ.ನ. ಜವರಯ್ಯ ಅವರ ಸೃಜನಶೀಲ ಸಾಹಿತ್ಯದ ಒಳನೋಟಗಳು- ಸಂಶೋಧನಾ ಕೃತಿಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರಸ್ತುಕ ಕಾಲಘಟ್ಟದಲ್ಲಿ ಮರ್ಯಾದೆಯ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಕೊಲ್ಲಲಾಗುತ್ತಿದೆ. ಏಕ ಸಂಸ್ಕೃತಿಯ ಹೆಸರಿನಲ್ಲಿ ಬಹು ಸಂಸ್ಕೃತಿಯನ್ನು ನಾಶ ಮಾಡಲಾಗುತ್ತಿದೆ. ಇದರೊಂದಿಗೆ ಕೋಮುವಾದಿ ಶಕ್ತಿಗಳು ಅಟ್ಟಹಾಸ ಮೆರೆಯುತ್ತಿವೆ. ಹೀಗಾಗಿ, ಜನರಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ ಎಂದರು.

ದೇವನೂರು ಮಹಾದೇವ, ಆಲನಹಳ್ಳಿ ಕೃಷ್ಣ, ಮ.ನ. ಜವರಯ್ಯ ಅವರು ನಡೆಸುತ್ತಿದ್ದ ರಾತ್ರಿ ಪಾಠಶಾಲೆಗಳು ಯುವ ಸಮುದಾಯಗಳಲ್ಲಿನ ಹೆಪ್ಪುಗಟ್ಟಿದ ಅಭಿವ್ಯಕ್ತಿ ಹೊರಬರಲು ಸಹಕಾರಿಯಾಗಿದ್ದವು. ಸಾಹಿತಿ ಮ.ನ. ಜವರಯ್ಯ ದಲಿತ ಚಳವಳಿಗೆ ಬೌದ್ಧಿಕ ಉತ್ತೇಜನ ನೀಡುತ್ತಿದ್ದರು. ಡಾ. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ತಮ್ಮ ಸಾಹಿತ್ಯದ ಮೂಲಕ ಯುವ ಸಮುದಾಯಗಳಿಗೆ ತಲುಪಿಸುತ್ತಿದ್ದರು. ಅವರ ಬರವಣಿಗೆ ಶೋಷಿತ ಸಮುದಾಯಗಳ ಧ್ವನಿಯಾಗಿ, ಮಾನವ ಪರ ನಿಲುವು ಮನಜ ಅವರ ಸಾಹಿತ್ಯದ ವಿಶೇಷತೆಯಾಗಿತ್ತು ಎಂದು ಅವರು ತಿಳಿಸಿದರು.

ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್. ನರೇಂದ್ರಕುಮಾರ್ ಮಾತನಾಡಿ, ಶೋಷಣೆಗೆ ಒಳಾಗಾಗುತ್ತಾ ಬಂದಿರುವ ದಲಿತ ಸಮುದಾಯದ ಸಾಹಿತಿಗಳು ಸಮಾನ ದುಃಖಿಗಳಾಗಿದ್ದರು. ದಲಿತ ಸಾಹಿತಿಗಳು ಶೋಷಿತರೆಲ್ಲರೂ ಒಗ್ಗಟ್ಟಾಗಿ ಸಾಗುವ ಕಾಳಜಿಯನ್ನು ಸಾಹಿತ್ಯ ಕೃತಿಗಳ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದರು ಎಂದರು.

ಸಂಶೋಧಕರು ದಲಿತ ಸಾಹಿತಿಗಳ ಕೃತಿಗಳನ್ನು ಅಧ್ಯಯನ ಮಾಡುವವಾಗ ಒಬ್ಬರು ಹೆಚ್ಚು ಮತ್ತೊಬ್ಬರು ಕಡಿಮೆ ಎಂದು ನೋಡಬಾರದು. ಸಂಶೋಧಕರು ದಲಿತ ಸಾಹಿತಿಗಳ ನೋವಿನ ಅನುಭವದ ಆಳವನ್ನು ಅರ್ಥ ಮಾಡಿಕೊಂಡರೆ ಎಲ್ಲಾ ದಲಿತ ಸಾಹಿತಿಗಳ ಸಾಹಿತ್ಯವೂ ವಿಶಾಲವಾದ ವೈಶಿಷ್ಟ್ಯವಾಗಿ ಕಾಣುತ್ತದೆ ಎಂದರು.

ಚಿಂತಕ ನಾ. ದಿವಾಕರ, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ, ಕೃತಿಯ ಕರ್ತೃ ಡಾ.ಬಿ. ರಾಜಣ್ಣ, ದಲಿತ ಸಾಹಿತ್ಯ ಪರಿಷತ್ತು ವಿಭಾಗೀಯ ಸಂಚಾಲಕ ಡಾ. ಚಂದ್ರಗುಪ್ತ, ಸಂಘಟಕ ಡಾ.ಬಿ. ಮೂರ್ತಿ, ಲೇಖಕ ತಲಕಾಡು ನಾಗರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಸುರಕ್ಷತೆಗೆ ಸಾರಿಗೆ ಇಲಾಖೆ ಎಐ ಆಧರಿತ ಕ್ಯಾಮೆರಾ ಅಳವಡಿಕೆ
ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌