ಕನ್ನಡಪ್ರಭ ವಾರ್ತೆ ಮಂಗಳೂರು ಡ್ರಗ್ಸ್ ಜಾಲದ ವಿರುದ್ಧ ಕರ್ನಾಟಕ ಸರ್ಕಾರ ಯುದ್ಧವನ್ನೇ ಸಾರಿದೆ. ಡ್ರಗ್ಸ್ ಪೂರೈಸುವ ಪೆಡ್ಲರ್‌ಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಹೇಳಿದ್ದಾರೆ.
ಡ್ರಗ್ಸ್ ಹಾವಳಿ ಬಗ್ಗೆ ಸದನದಲ್ಲಿ ಮುಖ್ಯಮಂತ್ರಿ ಮತ್ತು ನಾನು ಮಾತನಾಡಿದ್ದೇವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಡ್ರಗ್ಸ್ ಜಾಲದ ಹಿಂದಿನ ಶಕ್ತಿಗಳನ್ನು ಮಟ್ಟಹಾಕುವ ಕೆಲಸ ನಡೆಯುತ್ತಿದೆ. ಈ ಜಾಲದ ಹಿಂದೆ ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಆಗಮಿಸುವ ವಿದೇಶಿ ವಿದ್ಯಾರ್ಥಿಗಳ ಕೈವಾಡವೂ ಪತ್ತೆಯಾಗುತ್ತಿದ್ದು, ಅಂತಹವರ ಬಗ್ಗೆ ಆಯಾ ದೇಶಗಳ ರಾಯಭಾರ ಕಚೇರಿಗೆ ಮಾಹಿತಿ ನೀಡಿ ಅವರನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವು ಕಡೆಗಳಲ್ಲಿ ಗೂಂಡಾ ಕಾಯ್ದೆ ಹಾಕಿದ್ದು, ಈ ವಿಚಾರದಲ್ಲಿ ಯಾವುದೇ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ ಎಂದರು.
ಡ್ರಗ್ಸ್ ಪತ್ತೆಯಾದರೆ ಪೊಲೀಸರೇ ಹೊಣೆ: ಡ್ರಗ್ಸ್ ದಂಧೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸರ್ಕಾರ ಪಣ ತೊಟ್ಟಿದೆ. ಅದಕ್ಕಾಗಿ ಪೊಲೀಸರು ಶಕ್ತಿಮೀರಿ ಶ್ರಮಿಸಬೇಕು. ಇದರ ಹೊರತೂ ಡ್ರಗ್ಸ್ ದಂಧೆ ಪತ್ತೆಯಾದರೆ ಅದಕ್ಕೆ ಪೊಲೀಸರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವ ಡಾ.ಪರಮೇಶ್ವರ್ ಎಚ್ಚರಿಕೆ ನೀಡಿದರು.ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಮ್ಮದೇ ಮಕ್ಕಳು ದಂಧೆಗೆ ಸಿಲುಕಿ ಹಾಳಾಗುತ್ತಾರೆ. ಹಾಗಾಗಿ ಇನ್ನು ಮುಂದೆ ಶಾಲಾ ಕಾಲೇಜುಗಳಿಗೆ ಪೊಲೀಸರೇ ಭೇಟಿ ನೀಡಿ ಡ್ರಗ್ಸ್ ಸೇರಿದಂತೆ ಮಾದಕದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರತಿ ತಿಂಗಳು ಪೊಲೀಸರು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ಸೇವನೆ ವಿರುದ್ಧ ಮನವರಿಕೆ ಮಾಡಬೇಕು ಎಂದರು.
ನಕ್ಸಲರು ಶರಣಾದರೆ ಒಳ್ಳೇದು: ವಿಕ್ರಂ ಗೌಡನ ಹತ್ಯೆ ಬಳಿಕ ನಕ್ಸಲರ ಹಾದಿ ಕಠಿಣವಾಗಿದೆ. ಆತನ ಸಹಚರರಿಗೆ ಸಮಾಜದ ಮುಖ್ಯವಾಹಿನಿಗೆ ಬರಲು ಶರಣಾಗುವಂತೆ ನಕ್ಸಲರಿಗೆ ಅವಕಾಶ ನೀಡಲಾಗಿದೆ. ಇದನ್ನು ಒಪ್ಪಗೆ ನಕ್ಸಲ್ ಆಗಿ ಮುಂದುವರಿಯುವುದು ಬೇಡ. ಶರಣಾಗುವ ನಕ್ಸಲರಿಗೆ ಸರ್ಕಾರದಿಂದಲೇ ಜೀವನಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದು, ಶರಣಾಗುವಂತೆ ನಕ್ಸಲರಿಗೆ ಅರಣ್ಯಗಳಲ್ಲಿ ಕೂಂಬಿಂಗ್ ನಿರತ ಪೊಲೀಸ್ ಪಡೆ ಆಹ್ವಾನ ನೀಡಿದೆ. ಹಾಗಾಗಿ ಶರಣಾದರೆ ನಕ್ಸಲರಿಗೆ ಒಳ್ಳೆಯದು ಎಂದರು.
ಮುಸ್ಲಿಂ ವೋಟ್ ಬ್ಯಾನ್ ಹೇಳಿಕೆ ನೀಡಿದ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಡಾ.ಪರಮೇಶ್ವರ್ ಪ್ರತಿಕ್ರಿಯಿಸಿದರು.
ಬಿಜೆಪಿಯವರ ಪತ್ರ ಇರಬಹುದು!: ಹಾಸನದಲ್ಲಿ ಕಾಂಗ್ರೆಸ್ ನಡೆಸುವ ಸ್ವಾಭಿಮಾನ ಸಮಾವೇಶಕ್ಕೆ ಅಸಮಾಧಾನದ ಅನಾಮಧೇಯ ಪತ್ರದ ಕುರಿತಂತೆ ಮಾತನಾಡಿದ ಡಾ.ಪರಮೇಶ್ವರ್, ಸಮಾವೇಶಕ್ಕೆ ಯಾರ ಅಸಮಾಧಾನವೂ ಇಲ್ಲ. ಅನಾಮಧೇಯ ಪತ್ರವನ್ನು ಬಿಜೆಪಿಯವರು ಯಾಕೆ ಬರೆಯಬಾರದು, ಅವರೇ ಅನಾಮಧೇಯ ಪತ್ರಗಳನ್ನು ಬರೆಯುತ್ತಾರೆ ಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ, ಸಂಪುಟ ಪುನರ್ ರಚನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಡಾ.ಪರಮೇಶ್ವರ್, ಇವೆರಡು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು.