ಆಹಾರ ಭದ್ರತೆಗಾಗಿ ಸ್ಮಾರ್ಟ್ ಕೃಷಿಗೆ ಬದಲಾಗಬೇಕಿದೆ: ಡಾ.ಎಸ್.ವಿ.ಸುರೇಶ ಪ್ರತಿಪಾದನೆ

KannadaprabhaNewsNetwork | Published : Jan 10, 2025 12:45 AM

ಸಾರಾಂಶ

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಕ್ಷೇಗೃಹದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಕೃಷಿ ಮತ್ತು ಕೃಷಿ ಅವಲಂಬಿತ ವಿಸ್ತರಣಾ ಚಟುವಟಿಕೆಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರುಕೃಷಿ ಪ್ರಧಾನ ರಾಷ್ಟ್ರವಾಗಿರುವ ದೇಶದ ಭವಿಷ್ಯದ ಕೃಷಿಯಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿನಿಲ್ಲಬೇಕಾಗಿದ್ದು, ಆ ನಿಟ್ಟಿನಲ್ಲಿ ಕೃಷಿಯಲ್ಲಿ ಕೃತಕ ಬುದ್ಧಮತ್ತೆಯ ಬಳಕೆಯನ್ನು ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಡಾ.ಎಸ್.ವಿ.ಸುರೇಶ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ದಕ್ಷಿಣ ವಲಯ ಭಾರತೀಯ ವಿಸ್ತರಣಾ, ಶಿಕ್ಷಣ ಸಂಘ ಹಾಗೂ ಹೈದರಾಬಾದ ಮತ್ತು ಬೆಂಗಳೂರುಗಳಲ್ಲಿ ಸ್ಥಿತ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಕೃಷಿ ತಾಂತ್ರಿಕ ವರ್ಗಾವಣೆ ಸಂಸ್ಥೆಗಳ ಸಹಯೋಗ ದೊಂದಿಗೆ ಏರ್ಪಡಿಸಿದ್ದ ಕೃಷಿ ಮತ್ತು ಕೃಷಿ ಅವಲಂಬಿತ ವಿಸ್ತರಣಾ ಚಟುವಟಿಕೆಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಗುರುವಾರ ಮಾತನಾಡಿದ ಅವರು, ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಭವಿಷ್ಯದಲ್ಲಿ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಸಾಧಿಸಲು ನಾವು ಸ್ಮಾರ್ಟ್ ಕೃಷಿಗೆ ಬದಲಾಗಬೇಕಾಗಿದೆ ಎಂದರು.ಕೃತಕ ಬುದ್ಧಿಮತ್ತೆಯು ಸ್ಮಾರ್ಟ್ ಕೃಷಿಗಳಲ್ಲಿ ಒಂದಾಗಿದ್ದು, ಇದು ನೈಜ ಸಮಯದಲ್ಲಿ ಪರಿಹಾರಗಳನ್ನು ರೈತರಿಗೆ ತಲುಪಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಈ ಕೃತಕ ಬುದ್ಧಿಮತ್ತೆಯು ಹೊಂದಾಣಿಕೆಯಾಗುತ್ತದೆಯೇ ಎಂಬ ಪ್ರಶ್ನೆಗಳು ಹುಟ್ಟುತ್ತಿವೆ ಹಾಗೂ ಈ ಸಮಸ್ಯೆಗಳನ್ನು ನಾವೆಲ್ಲರೂ ಸೇರಿ ಸಂಶೋಧನೆ ಕೈಗೊಂಡು ಪರಿಹಾರಿಸಬೇಕಾಗಿದೆ. ಕೃತಕ ಬುದ್ಧಿಮತ್ತೆ ಪರಿಕಲ್ಪನೆಯ ಬಳಕೆಯ ಬಗ್ಗೆ ರೈತರನ್ನು ಸಬಲೀಕರಣಗೊಳಿಸಲು ವಿಸ್ತರಣಾ ವೃತ್ತಿಪರರು ಇದರ ಬಗ್ಗೆ ಜ್ಞಾನ ಮತ್ತು ಕೌಶಲ್ಯವನ್ನು ಹೊಂದಿದಾಗ ಮಾತ್ರ ರೈತರನ್ನು ಪ್ರೇರೇಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ನಾವುಗಳು ಇನ್ನೂ ಮುಂದೆ ಸಾಗಬೇಕಾಗಿದೆ ಎಂದು ತಿಳಿಸಿದರು.ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ವಿಸ್ತರಣಾ ವಿಭಾಗದ ಸಹಾಯಕ ಮಹಾನಿರ್ದೇಶಕ ಡಾ.ಆರ್.ರಾಯ್, ಬರ್ಮನ್ ಮಾತನಾಡಿ, ಕೃಷಿ ವ್ಯವಸ್ಥೆಯಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನ, ದತ್ತಾಂಶಗಳನ್ನು ಆಧಾರಿಸಿ ಅಭಿವೃದ್ಧಿಗೊಂಡ ಕೃತಕ ಬುದ್ಧಿಮತ್ತೆಯ ಬಳಕೆಯ ಬಗ್ಗೆ ತಿಳಿಸಿದರು. ಇದು ಕೃಷಿ ವಲಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ರೈತರಿಗೆ ಇದರ ಬಗ್ಗೆ ಜ್ಞಾನ ಮತ್ತು ಕೌಶಲ್ಯವನ್ನು ನೀಡುವುದು ಅತ್ಯವಶ್ಯವಾಗಿದೆ ಎಂದರು.ಅಧ್ಯಕ್ಷತೆಯನ್ನು ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿ ಆಡಳಿತ ಮಂಡಳಿಯ ಸದಸ್ಯರಾದ ತಿಮ್ಮಪ್ಪ ಸೋಮಪ್ಪ ಚವಡಿ,ಡಿ.ಮಲ್ಲಿಕಾರ್ಜುನ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ಎಸ್. ಬಿ. ಗೌಡಪ್ಪ,ಡಾ. ಸಿ. ನಾರಾಯಣ ಸ್ವಾಮಿ, ಅಧಿಕಾರಿಗಳು, ದೇಶದಾದ್ಯಂತ ಆಗಮಿಸಿದ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳನ್ನೊಳಗೊಂಡಂತೆ 300 ಕ್ಕೂ ಹೆಚ್ಚು ಗಣ್ಯರು ಮತ್ತು ಪ್ರತಿನಿಧಿಗಳು ಇದ್ದರು.

Share this article