ಸಮನ್ವಯತೆಯಿಂದ ಕೆಲಸ ಮಾಡುವ ಅಗತ್ಯವಿದೆ

KannadaprabhaNewsNetwork | Published : May 11, 2025 11:47 PM
Follow Us

ಸಾರಾಂಶ

ಸಂಕಷ್ಟದಲ್ಲಿನ ಮಕ್ಕಳನ್ನು ರಕ್ಷಿಸಿ ಅವರಿಗೆ ಸೂಕ್ತ ಪುನರ್ವಸತಿ ಕಲ್ಪಿಸಿ ಮುಖ್ಯವಾಹಿನಿಗೆ ಸೇರಿಸುವಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆಯಲ್ಲಿರುವ ಎಲ್ಲಾ ಭಾಗೀದಾರರು ಸಮನ್ವಯದಿಂದ ಕೆಲಸ ಮಾಡುವ ಅಗತ್ಯವಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಸಂಕಷ್ಟದಲ್ಲಿನ ಮಕ್ಕಳನ್ನು ರಕ್ಷಿಸಿ ಅವರಿಗೆ ಸೂಕ್ತ ಪುನರ್ವಸತಿ ಕಲ್ಪಿಸಿ ಮುಖ್ಯವಾಹಿನಿಗೆ ಸೇರಿಸುವಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆಯಲ್ಲಿರುವ ಎಲ್ಲಾ ಭಾಗೀದಾರರು ಸಮನ್ವಯದಿಂದ ಕೆಲಸ ಮಾಡುವ ಅಗತ್ಯವಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ತಿಳಿಸಿದರು. ಅವರು ತುಮಕೂರಿನ ಬಾಲ ಮಂದಿರದಲ್ಲಿ ನಡೆದ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಹಾಗೂ ಬಾಲಮಂದಿರಗಳ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದಲ್ಲಿ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು, ಅಪ್ರಾಪ್ತ ಹೆಣ್ಣು ಮಕ್ಕಳ ಗರ್ಭಧಾರಣೆ ಪ್ರಕರಣಗಳು, ಮಕ್ಕಳ ಅಪೌಷ್ಟಿಕತೆ, ಇತ್ಯಾದಿ ಸವಾಲುಗಳು ಮಕ್ಕಳನ್ನು ಕಾಡುತ್ತಿದ್ದು ಇದಕ್ಕೆ ಪರಿಣಾಮಕಾರಿ ಕಾರ್ಯಾಚರಣೆ ಮಾಡಲು ಹಾಗೂ ಸಂತ್ರಸ್ಥ ಮಕ್ಕಳಿಗೆ ಸಕಾಲಿಕ ನ್ಯಾಯದಾನ ಹಾಗೂ ಪುನರ್ವಸತಿ ಕಲ್ಪಿಸಲು ಎಲ್ಲರ ಸಂಘಟಿತ ಪ್ರಯತ್ನ ಅತ್ಯಾವಶ್ಯಕ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಪರಸ್ಪರ ಸಹಕಾರ ಮತ್ತು ಬದ್ದತೆಯಿಂದ ಕೆಲಸ ಮಾಡಬೇಕಿದೆ ಎಂದರು.ಇದಕ್ಕಾಗಿ ಪ್ರತೀ ಮೂರು ತಿಂಗಳಿಗೊಮ್ಮೆ ಸಮನ್ವಯ ಸಭೆ ನಡೆಸಿ ಪ್ರಗತಿ ಪರಿಶೀಲನೆಗೆ ಕ್ರಮವಹಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸೂಚಿಸಿದರು. ಸಭೆಯಲ್ಲಿ ಹಾಜರಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್ ಮಾತನಾಡಿ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಯೋಜಿತ ಕಾರ್ಯನ ಚಟುವಟಿಕೆಗಳು ಹಾಗೂ ವ್ಯಾಪಕ ಅರಿವು ಕಾರ್ಯಾ ಗಾರಗಳು ಅತ್ಯಗತ್ಯ. ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿದ್ದು ಇದು ಮಕ್ಕಳ ಆರೋಗ್ಯದ ಮೇಲಷ್ಟೇ ಅಲ್ಲದೇ ದೌರ್ಜನ್ಯಕ್ಕೂ ಕಾರಣವಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಮಕ್ಕಳ ರಕ್ಷಣಾ ಘಟಕ ಮತ್ತಷ್ಟು ಚುರುಕಾಗಿ ಕೆಲಸ ಮಾಡಬೇಕೆಂದರು. ಸಭೆಯಲ್ಲಿ ರಕ್ಷಣಾಧಿಕಾರಿಗಳಾದ ಶಿವಣ್ಣ, ಗೌತಮ್ ಹಾಗೂ ಮಕ್ಕಳ ಸಹಾಯವಾಣಿ ಸಂಯೋಜಕಿ ಅನುಷಾ ಹಾಗೂ ಇನ್ನಿತರೆ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.