ರಾಜ್ಯದಲ್ಲಿ ನೀಟ್‌ ರದ್ದು ಚಿಂತನೆ: ಡಿಕೆಶಿ ಸುಳಿವು

KannadaprabhaNewsNetwork |  
Published : Jun 19, 2024, 01:02 AM IST
ವೈದ್ಯಕೀಯ ಕೋರ್ಸ್‌ಗಳು | Kannada Prabha

ಸಾರಾಂಶ

ಸ್ಥಳೀಯ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳು ದೊರೆಯಬೇಕು ಎನ್ನುವ ದೃಷ್ಟಿಯಿಂದ ತಮಿಳುನಾಡು ಸರ್ಕಾರ ನೀಟ್‌ ರದ್ದತಿಗೆ ನಿರ್ಣಯ ಕೈಗೊಂಡಿದೆ. ಇದೇ ಹಾದಿಯನ್ನು ಕರ್ನಾಟಕವೂ ಅನುಸರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನೀಟ್‌ನಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಭಾರೀ ಅನ್ಯಾಯವಾಗುತ್ತಿರುವುದರಿಂದ ಕರ್ನಾಟವೂ ತಮಿಳುನಾಡು ಮಾದರಿಯನ್ನು ಅನುಸರಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಈ ಪರೀಕ್ಷೆಯಿಂದ ನಮ್ಮ ರಾಜ್ಯದ ಮಕ್ಕಳಿಗೆ ದೊಡ್ಡ ಅನ್ಯಾಯವಾಗುತ್ತಿವೆ. ನಾವು ಕಾಲೇಜುಗಳನ್ನು ಕಟ್ಟಿದ್ದೇವೆ. ನೀಟ್ ಪರೀಕ್ಷೆಯಿಂದ ಉತ್ತರ ಭಾರತದ ರಾಜ್ಯಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಹೀಗಾಗಿ ನಮ್ಮ ಮಕ್ಕಳಿಗೆ ತಾರತಮ್ಯವಾಗುತ್ತಿದೆ. ನಮ್ಮ ಮಕ್ಕಳಿಗೆ ನ್ಯಾಯ ಒದಗಿಸಲು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆಯನ್ನು ರಾಜ್ಯಗಳೇ ನಡೆಸಲು ಅವಕಾಶ ಮಾಡಿಕೊಡುವುದು ಉತ್ತಮ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಇತ್ತೀಚೆಗಷ್ಟೆ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಇದೀಗ ನೀಟ್‌ ವಿರುದ್ಧ ತಮಿಳುನಾಡು ಮಾದರಿ ಅನುಸರಿಸುವುದಾಗಿ ಹೇಳಿಕೆ ನೀಡಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸ್ಥಳೀಯ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳು ದೊರೆಯಬೇಕು ಎನ್ನುವ ದೃಷ್ಟಿಯಿಂದ ತಮಿಳುನಾಡು ಸರ್ಕಾರ ನಿರಂತರವಾಗಿ ನೀಟ್‌ ವಿರೋಧಿಸುತ್ತಲೇ ಬರುತ್ತಿದೆ. ಇದೇ ಹಾದಿಯನ್ನು ಕರ್ನಾಟಕವೂ ಅನುಸರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗಂಭೀರವಾಗಿ ಈ ವಿಚಾರ ಚರ್ಚಿಸಲಾಗುವುದು. ಈ ಬಗ್ಗೆ ಇಡೀ ರಾಷ್ಟ್ರಮಟ್ಟದಲ್ಲಿ ಕೂಡ ಚರ್ಚೆಯಾಗಬೇಕು ಎಂದರು.

ನೀಟ್‌ ಅಕ್ರಮದ ಬಗ್ಗೆ ಕೇಂದ್ರ ಸಚಿವರೇ ಒಪ್ಪಿಕೊಂಡಿದ್ದಾರೆ. ಹಾಗಾಗಿ ಈ ಬಾರಿ ನಡೆಸಿರುವ ನೀಟ್‌ ಪರೀಕ್ಷೆಯನ್ನು ರದ್ದುಪಡಿಸಿ ಎಲ್ಲ ವಿದ್ಯಾರ್ಥಿಗಳಿಗೂ ಮರು ಪರೀಕ್ಷೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ತಮಿಳ್ನಾಡು ಏನು ಮಾಡಿದೆ?:

ನೀಟ್‌ನಿಂದ ವಿನಾಯಿತಿ ಪಡೆಯಲು ನಿರಂತರ ಕಾನೂನು ಹೋರಾಟ, ಉಭಯ ಸದನಗಳಲ್ಲಿ ಮಸೂದೆ ಅಂಗೀಕಾರ ಸೇರಿದಂತೆ ಹಲವು ದಾರಿಗಳಲ್ಲಿ ಪ್ರಯತ್ನ ನಡೆಸಿದೆ. ಜೊತೆಗೆ ಸ್ಥಳೀಯ ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಶೇ.7.5 ಸೀಟುಗಳ ಮೀಸಲಾತಿಗೆ ಮಸೂದೆ ತಂದಿರುವುದು ಇಲ್ಲಿ ಗಮನಾರ್ಹ.

ತಮಿಳುನಾಡು ಏನು ಮಾಡಿದೆ?ನೀಟ್‌ ರದ್ದು ಕೋರಿ ತಮಿಳುನಾಡು ವಿಧಾನಸಭೆ 2017ರಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಿತ್ತು. 2019ರಲ್ಲಿ ಅದನ್ನು ಕೇಂದ್ರ ತಿರಸ್ಕರಿಸಿತ್ತು. 2022ರಲ್ಲಿ ಮತ್ತೆ ವಿಧಾನಸಭೆ ಇದೇ ಮಾದರಿ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಿದೆ. ಅದು ಸದ್ಯ ರಾಷ್ಟ್ರಪತಿಗಳ ಬಳಿ ಉಳಿದಿದೆ.-----

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ವರ್ಷಾಚರಣೆಗೆ ಸಿಲಿಕಾನ್‌ ಸಿಟಿ ಸಜ್ಜು
ಹಸಿರು ಮಾರ್ಗಕ್ಕೆ ಬರಲಿವೆ 21 ಹೊಸ ರೈಲುಗಳು