ಸರ್ಕಾರಿ ಶಾಲೆ ಮಕ್ಕಳಿಗೂ ನೀಟ್‌, ಸಿಇಟಿ ತರಬೇತಿ

KannadaprabhaNewsNetwork |  
Published : Aug 01, 2024, 12:27 AM IST

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ನೀಟ್‌, ಸಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳಿಸಲು ಪ್ರಸಕ್ತ ವರ್ಷದಲ್ಲಿ 25 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಉಚಿತ ತರಬೇತಿ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ನೀಟ್‌, ಸಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳಿಸಲು ಪ್ರಸಕ್ತ ವರ್ಷದಲ್ಲಿ 25 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಉಚಿತ ತರಬೇತಿ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುವುದಕ್ಕೆ ಲಕ್ಷಾಂತರ ರು. ಶುಲ್ಕ ಪಾವತಿಸುವುದನ್ನು ತಡೆಯುವ ಸಲುವಾಗಿ ಮುಂದಿನ ವರ್ಷದಿಂದ 25 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದಲೇ ತರಬೇತಿ ನೀಡಲು ನಿರ್ಧರಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾಗೂ ಇಲಾಖೆಯಿಂದ ನೀಡಲಾಗುವ ಪ್ರತ್ಯೇಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ 25 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿಗೆ ಆಯ್ಕೆ ಮಾಡಲಾಗುವುದು. ತರಬೇತಿಯ ತರಗತಿಗಳು ಆನ್‌ಲೈನ್ ಮೂಲಕ ನಡೆಯಲಿದ್ದು, ಅವರೊಂದಿಗೆ ಇತರ ವಿದ್ಯಾರ್ಥಿಗಳೂ ಅದರ ಲಾಭ ಪಡೆಯಬಹುದು. ಅಲ್ಲದೆ, ಈ ಯೋಜನೆಗಾಗಿ ಇಲಾಖೆಯು 12.50 ಕೋಟಿ ರು. ವ್ಯಯಿಸಲಿದೆ ಎಂದು ವಿವರಿಸಿದರು.

ರಾಜ್ಯದ ವಿದ್ಯಾರ್ಥಿಗಳ ವಿಜ್ಞಾನ ವಿಷಯದಲ್ಲಿನ ಕಲಿಕೆಯನ್ನು ಉತ್ತಮಗೊಳಿಸಲು ಮರು ಸಿಂಚನ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ 93 ತಾಲೂಕುಗಳ ಪ್ರೌಢಶಾಲೆಗಳಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ವಿಶೇಷ ತರಗತಿ ಹಾಗೂ ತರಬೇತಿಗಳನ್ನು ನೀಡಲಾಗುವುದು. ಈ ಕಾರ್ಯಕ್ರಮದಿಂದ 8.07 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿ 10 ಹಾಗೂ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳ ದಾಖಲಾತಿ ಇರುವ 4 ಸಾವಿರಕ್ಕೂ ಹೆಚ್ಚಿನ ಶಾಲೆಗಳಿವೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ, ಅಂತಹ ಶಾಲೆಗಳನ್ನು ಮುಚ್ಚುವುದು ಹಾಗೂ ಬೇರೆ ಶಾಲೆಗಳೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯನ್ನು ನಾವು ಮಾಡುವುದಿಲ್ಲ. ಅದರ ಬದಲು ಖಾಸಗಿ ಸಂಸ್ಥೆಗಳ ಸಿಎಸ್‌ಆರ್‌ ನಿಧಿಯ ನೆರವಿನೊಂದಿಗೆ 600 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ನಿರ್ಮಿಸಲಾಗುತ್ತಿದ್ದು, ಕಡಿಮೆ ಸಂಖ್ಯೆ ವಿದ್ಯಾರ್ಥಿಗಳು ಕೆಪಿಎಸ್‌ಗೆ ದಾಖಲಾಗುವಂತೆ ಮಾಡಲಾಗುವುದು. ಆ ಮೂಲಕ ವಿದ್ಯಾರ್ಥಿಗಳಿಗೆ ಮತ್ತಷ್ಟು ಉತ್ತಮ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮೊಟ್ಟೆ ಹೊಣೆ ಎಸ್‌ಡಿಎಂಸಿಗಳಿಗೆ: ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಸಹಯೋಗದಲ್ಲಿ ರಾಜ್ಯದ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನಗಳ ಕಾಲ ಉಚಿತವಾಗಿ ಮೊಟ್ಟೆ ನೀಡುವ ಕಾರ್ಯಕ್ರಮ ಆರಂಭಿಸಲಾಗಿದೆ. ಈವರೆಗೆ ಸರ್ಕಾರದಿಂದ 2 ದಿನ ಮಾತ್ರ ಮೊಟ್ಟೆ ನೀಡಲಾಗುತ್ತಿತ್ತು. ಇದೀಗ ಅದನ್ನು 6 ದಿನಕ್ಕೆ ವಿಸ್ತರಿಸಲಾಗಿದೆ. ಅಲ್ಲದೆ, ಇಲಾಖೆಯಿಂದ ಮೊಟ್ಟೆ ನೀಡುವುದರಿಂದ ಗುಣಮಟ್ಟದ ಬಗ್ಗೆ ಪ್ರಶ್ನೆ ಉದ್ಭವವಾಗಲಿದೆ. ಹೀಗಾಗಿ ಆಯಾ ಶಾಲೆಯ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಗಳಿಗೇ ಮೊಟ್ಟೆ ನೀಡುವ ಹೊಣೆಯನ್ನು ನೀಡಲಾಗುತ್ತಿದೆ. ಆ ಎಸ್‌ಡಿಎಂಸಿಗಳಿಗೆ ಮೊಟ್ಟೆ ಖರೀದಿಗೆ ತಗಲುವ ಹಣವನ್ನು ಇಲಾಖೆಯಿಂದ ನೀಡಲಾಗುತ್ತದೆ ಎಂದು ಮಧು ಬಂಗಾರಪ್ಪ ತಿಳಿಸಿದರು.ಶಿಕ್ಷಕರಿಗೆ ಖಾಸಗಿ ಸಂಸ್ಥೆಗಳಿಂದ ತರಬೇತಿ: ರಾಜ್ಯದ ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯ ಹಾಗೂ ಶಾಲೆಗಳ ಅಭಿವೃದ್ಧಿಗಾಗಿ ಖಾಸಗಿ ಸಂಸ್ಥೆಗಳ ನೆರವನ್ನೂ ಪಡೆಯಲಾಗುತ್ತಿದೆ. ಶಾಲೆಗಳ ಅಭಿವೃದ್ಧಿಗಾಗಿ ನಮ್ಮ ಶಾಲೆ, ನಮ್ಮ ಜವಾಬ್ದಾರಿ ಅಡಿಯಲ್ಲಿ ಶಾಲೆಗಳ ಹಿರಿಯ ವಿದ್ಯಾರ್ಥಿಗಳಿಂದ ಆರ್ಥಿಕ ನೆರವು ಪಡೆಯಲಾಗುತ್ತಿದೆ. ಈಗಾಗಲೆ 29 ಸಾವಿರಕ್ಕೂ ಹೆಚ್ಚಿನ ಶಾಲೆಗಳ ಹಿರಿಯ ವಿದ್ಯಾರ್ಥಿಗಳನ್ನು ಆಯಾ ಶಾಲೆಯ ಅಭಿವೃದ್ಧಿಗೆ ಒಗ್ಗೂಡಿ, 20 ಸಾವಿರಕ್ಕೂ ಹೆಚ್ಚಿನ ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ರಚಿಸಲಾಗಿದೆ. ಆ ಹಿರಿಯ ವಿದ್ಯಾರ್ಥಿಗಳು ಈಗಾಗಲೇ ಶಾಲೆಗಳಿಗೆ ಆರ್ಥಿಕ ನೆರವನ್ನೂ ನೀಡುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು.

ಪುಸ್ತಕದ ಹೊರೆ ಕಡಿಮೆ ಮಾಡಲು ಕ್ರಮ: ಮಕ್ಕಳ ಶಾಲಾ ಬ್ಯಾಗ್‌ನ ಹೊರೆ ಕಡಿಮೆ ಮಾಡಲು ಈಗಾಗಲೇ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರತಿ ತಿಂಗಳ 3ನೇ ಶನಿವಾರ ಬ್ಯಾಗ್‌ ರಹಿತ ದಿನವನ್ನಾಗಿ ಮಾಡಲಾಗುತ್ತಿದೆ. ಅದರ ಜತೆಗೆ ನೋಟ್‌ ಬುಕ್‌ಗಳ ಪ್ರಮಾಣ ಕಡಿಮೆ ಮಾಡಲು ಬಹು ವಿಷಯಗಳಿಗೆ ಒಂದೇ ನೋಟ್‌ ಪುಸ್ತಕ ಅಥವಾ ನೋಟ್‌ ಶೀಟ್‌ ಪರಿಚಯಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದರು.

ಹಿಂದಿನ ಸರ್ಕಾರದ ನಿರ್ಧಾರದಿಂದ ಆರ್ಥಿಕ ಹೊರೆ: ರಾಜ್ಯದಲ್ಲಿ 2017ರ ನಂತರದಿಂದ ಕಾಯಂ ಶಿಕ್ಷಕರ ನೇಮಕವಾಗಿಲ್ಲ. ಸದ್ಯ 12,500 ಕಾಯಂ ಶಿಕ್ಷಕರ ನೇಮಕಕ್ಕೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅದರ ಜತೆಗೆ 42 ಸಾವಿರ ಅತಿಥಿ ಶಿಕ್ಷಕರನ್ನು ಈಗಾಗಲೆ ನೇಮಿಸಲಾಗಿದೆ. ಹಿಂದಿನ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು, ಈಗ ನಮಗೆ ಹೊರೆಯಾಗುವಂತಾಗಿದೆ. ಅಲ್ಲದೆ ಶಾಲೆಗಳಲ್ಲಿ 8,311 ವಿವೇಕ ಕೊಠಡಿ ನಿರ್ಮಾಣದ ಘೋಷಣೆ ಮಾಡಿದ್ದ ಬಿಜೆಪಿ ಸರ್ಕಾರ, ಅದಕ್ಕೆ ಅನುದಾನ ಮೀಸಲಿಟ್ಟಿರಲಿಲ್ಲ. ನಮ್ಮ ಸರ್ಕಾರ ವಿವೇಕ ಕೊಠಡಿ ನಿರ್ಮಾಣಕ್ಕೆ ಹಂತಹಂತವಾಗಿ ಅನುದಾನ ನೀಡುತ್ತಿದೆ. ಅಲ್ಲದೆ, ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅನುದಾನ ಕೊರತೆ ಮಾಡಿಲ್ಲ ಎಂದು ಮಧು ಬಂಗಾರಪ್ಪ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ