೨೧ಕ್ಕೆ ನೀಟ್ ಪರೀಕ್ಷೆ: ಬಿಗಿ ಭದ್ರತೆಗೆ ಡಿಸಿ ಸೂಚನೆ

KannadaprabhaNewsNetwork |  
Published : Jun 18, 2026, 01:45 AM IST
೧೬ಕೆಎಲ್‌ಆರ್-೭ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ. | Kannada Prabha

ಸಾರಾಂಶ

ಕೋಲಾರದಲ್ಲಿ ೬ ಹಾಗೂ ಬಂಗಾರಪೇಟೆಯಲ್ಲಿ ೫ ಕೇಂದ್ರಗಳು ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು ೧೧ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಪ್ರತಿಷ್ಠಿತ ನೀಟ್ ಪರೀಕ್ಷೆ ಜಿಲ್ಲೆಯಲ್ಲಿ ಅತ್ಯಂತ ಪಾರದರ್ಶಕ ಹಾಗೂ ಲೋಪರಹಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಸೂಚನೆ ನೀಡಿದರು.

ಬುಧವಾರ ಡಿಸಿ ಕಚೇರಿಯಲ್ಲಿ ನೀಟ್ ಪರೀಕ್ಷೆಯ ಪೂರ್ವಸಿದ್ಧತಾ ಸಭೆಯಲ್ಲಿ ಪರೀಕ್ಷಾ ನಿರ್ವಹಣೆ, ಭದ್ರತಾ ಕ್ರಮಗಳು ಹಾಗೂ ಅಧಿಕಾರಿಗಳ ಜವಾಬ್ದಾರಿ ಕುರಿತು ಚರ್ಚಿಸಿ ಸೂಚನೆ ನೀಡಿದರು.

ಕೋಲಾರದಲ್ಲಿ ೬ ಹಾಗೂ ಬಂಗಾರಪೇಟೆಯಲ್ಲಿ ೫ ಕೇಂದ್ರಗಳು ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು ೧೧ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು ೩,೯೪೪ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗುತ್ತಿದ್ದು, ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದಂತೆ ಆಸನ ವ್ಯವಸ್ಥೆ ಕಲ್ಪಿಸಲು ನಿರ್ದೇಶಿಸಲಾಗಿದೆ ಎಂದರು.

ಪರೀಕ್ಷೆಯು ಜೂ.೨೧ರಂದು ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೫.೧೫ ರವರೆಗೆ ನಡೆಯಲಿದೆ. ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧.೩೦ ರವರೆಗೆ ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಾದ ಬಯೋಮೆಟ್ರಿಕ್ ಪರಿಶೀಲನೆ ಹಾಗೂ ತಪಾಸಣೆ ನಡೆಯಲಿದೆ. ವಿದ್ಯಾರ್ಥಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕೇಂದ್ರಗಳಿಗೆ ಆಗಮಿಸುವುದು ಕಡ್ಡಾಯ. ತಪಾಸಣಾ ಕಾರ್ಯಕ್ಕಾಗಿ ಹೊರಗುತ್ತಿಗೆ ಸಿಬ್ಬಂದಿಯ ಜೊತೆಗೆ ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನೂ ಭದ್ರತೆಗಾಗಿ ನಿಯೋಜಿಸಲಾಗುವುದು ಎಂದು ತಿಳಿಸಿದರು.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಎನ್‌ಟಿಎ ಮಾರ್ಗಸೂಚಿಯಂತೆ ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿಯಲ್ಲಿದೆ. ಫುಲ್ ಶರ್ಟ್, ಜೀನ್ಸ್ ಪ್ಯಾಂಟ್, ಕಿವಿಯೋಲೆ ಮತ್ತು ಸ್ಮಾರ್ಟ್ ವಾಚ್‌ಗಳನ್ನು ಧರಿಸುವಂತಿಲ್ಲ. ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲೇ ಪೆನ್ ಒದಗಿಸಲಾಗುವುದು.

ಎಸ್‌ಬಿಐ ಮತ್ತು ಯೂನಿಯನ್ ಬ್ಯಾಂಕ್‌ಗಳಲ್ಲಿ ಭದ್ರವಾಗಿರಿಸಲಾಗುವ ಗೌಪ್ಯ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸಾಗಿಸಲು ಸಶಸ್ತ್ರ ಮೀಸಲು ಪಡೆಯ ಭದ್ರತೆಯೊಂದಿಗೆ ಪ್ರತ್ಯೇಕ ವಾಹನಗಳ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸ್ಟ್ರಾಂಗ್ ರೂಮ್‌ಗಳ ಮೂಲಕ ಪ್ರಶ್ನೆಪತ್ರಿಕೆಗಳ ರಕ್ಷಣೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹಬ್ಬಿಸುವವರ ಮೇಲೆ ಹದ್ದಿನ ಕಣ್ಣಿಡಲು ಸೈಬರ್ ಪೊಲೀಸರಿಗೆ ಸೂಚಿಸಲಾಗಿದೆ. ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪ್ರತಿಯೊಬ್ಬರೂ ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಎಡಿಸಿ ಎಸ್.ಎಂ. ಮಂಗಳ, ಎಎಸ್ಪಿ ರವಿಶಂಕರ್, ಡಿವೈಎಸ್ಪಿ ವಿ. ಲಕ್ಷ್ಮಯ್ಯ, ಎನ್‌ಟಿಎ ನೋಡಲ್ ಅಧಿಕಾರಿ ಉಮೇಶ್ ಪ್ರಜಾಪತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೌಟುಂಬಿಕ ಕಲಹ: ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ
ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳ ತೆರವು