ಮೇ 3ಕ್ಕೆ ನೀಟ್ ಪರೀಕ್ಷೆ: ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ

KannadaprabhaNewsNetwork |  
Published : Apr 30, 2026, 01:45 AM IST
ಕ್ಯಾಪ್ಷನ29ಕೆಡಿವಿಜಿ31 ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ನೀಟ್ ಪರೀಕ್ಷೆ-2026 ಪೂರ್ವಭಾವಿ ಸಭೆ ನಡೆಯಿತು. | Kannada Prabha

ಸಾರಾಂಶ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-2026) ಮೇ 3ರಂದು ನಡೆಯಲಿದ್ದು, ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

- ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸೂಚನೆ ।

- ಪೊಲೀಸ್‌ ಬಂದೋಬಸ್ತ್‌ಗೂ ತಾಕೀತು

- - - ಕನ್ನಡಪ್ರಭ ವಾರ್ತೆ ದಾವಣಗೆರೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-2026) ಮೇ 3ರಂದು ನಡೆಯಲಿದ್ದು, ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ನೀಟ್ ಪರೀಕ್ಷೆ-2026 ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು. ಬೇಸಿಗೆಯ ತಾಪ ಹೆಚ್ಚಿರುವುದರಿಂದ ಪರೀಕ್ಷೆಯ ಅವಧಿಯಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾದ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳು ಕಡ್ಡಾಯವಾಗಿ ತರಬೇತಿ ನೀಡಬೇಕು ಎಂದರು.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಿಯಮಗಳಂತೆ, ಕ್ಯಾಲ್ಕುಲೇಟರ್, ಸ್ಕೇಲ್, ರೈಟಿಂಗ್ ಪ್ಯಾಡ್, ಪೆನ್ ಡ್ರೈವ್‌ಗಳು, ಎರೇಸರ್, ಲಾಗ್‌ಟೇಬಲ್, ಎಲೆಕ್ಟ್ರಾನಿಕ್ ಉಪಕರಣಗಳು, ಪೆನ್ ಸ್ಕ್ಯಾನರ್, ಮೊಬೈಲ್ ಫೋನ್, ಬ್ಲೂಟೂತ್, ಇಯರ್‌ಫೋನ್‌ಗಳು, ಮೈಕ್ರೋಫೋನ್, ಪೇಜರ್, ಹೆಲ್ತ್ ಬ್ಯಾಂಡ್ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೇಂದ್ರದೊಳಗೆ ತೆಗೆದುಕೊಂಡು ಹೋಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದರು.

14 ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಡಳಿತ ವತಿಯಿಂದಜಿಲ್ಲಾ ಮಟ್ಟದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಪರೀಕ್ಷೆ ಪಾರದರ್ಶಕವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯಲು, ಕಾನೂನುಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ತಡೆಯುವ ದೃಷ್ಟಿಯಿಂದ ಪರೀಕ್ಷೆ ನಡೆಯುವ ದಿನ, ಪರೀಕ್ಷೆ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿಯಾವುದೇ ಜೆರಾಕ್ಸ್ ಹಾಗೂ ಕಂಪ್ಯೂಟರ್ ಸೆಂಟರ್‌ಗಳು ನಿಷೇಧಾಜ್ಞೆ ಸಮಯದಲ್ಲಿ ಕಾರ್ಯನಿರ್ವಹಿಸುವಂತಿಲ್ಲ ಎಂದರು.

ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು. ತುರ್ತು ವೈದ್ಯಕೀಯ ಸೇವೆಗಾಗಿ ಆರೋಗ್ಯ ಇಲಾಖೆಯ ವತಿಯಿಂದ ಪ್ರಥಮ ಚಿಕಿತ್ಸಕರ ತಂಡ ನಿಯೋಜಿಸಬೇಕು. ಪರೀಕ್ಷಾ ಕೇಂದ್ರದೊಳಗೆ ಯಾವುದೇ ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸದಂತೆ ಸೂಕ್ತ ಮುಂಜಾಗ್ರತಾಕ್ರಮ ಕೈಗೊಳ್ಳಬೇಕು. ಪರೀಕ್ಷಾ ದಿನದಂದು ನಿರಂತರ ವಿದ್ಯುತ್ ಸರಬರಾಜು ನೀಡಬೇಕು. ಬಿ.ಎಸ್.ಎನ್.ಎಲ್. ವತಿಯಿಂದ ಇಂಟರ್ ನೆಟ್ ಸೇವೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಸಾರಿಗೆ ವ್ಯವಸ್ಥೆ:

14 ಪರೀಕ್ಷಾ ಕೇಂದ್ರಗಳಿಗೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದಿಂದ ವಿಶೇಷ ನಗರ ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಸದರಿ ಬಸ್‌ಗಳು ಬೆಳಗ್ಗೆ 9 ಗಂಟೆಯಿಂದ ಸಂಚರಿಸಲಿವೆ ಎಂದು ತಿಳಿಸಿದರು.

ನೀಟ್ ಪರೀಕ್ಷೆ ಜಿಲ್ಲಾ ಸಂಯೋಜಕಿ ಎ.ಲೇಖಾ ಮಾತನಾಡಿ, ಜಿಲ್ಲೆಯಲ್ಲಿ ದಾವಣಗೆರೆ 13 ಮತ್ತು ಹರಿಹರ 1 ಸೇರಿ ಒಟ್ಟು 14 ಪರೀಕ್ಷಾ ಕೇಂದ್ರಗಳಿವೆ. ಒಟ್ಟು 7280 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯು ಬೆಳಗ್ಗೆ 10.30 ರಿಂದ ಅಪರಾಹ್ನ 1.30 ರವರೆಗೆ ನಡೆಯಲಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಕಡೆಯಿಂದ ಮೆಟಲ್ ಡಿಡೆಕ್ಟರ್ ಅಳವಡಿಸಲಾಗುತ್ತದೆ. ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಪ್ರಿಸ್ಕಿಂಗ್ ನಡೆಸಲಾಗುವುದು. ಬಯೋಮೆಟ್ರಿಕ್ ದೃಢೀಕರಣದ ನಂತರವೇ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಪ್ರತಿ ಕೊಠಡಿಯಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಇದರ ಜೊತೆಗೆ ಪರೀಕ್ಷಾ ಪ್ರಕ್ರಿಯೆ ಸಂಪೂರ್ಣವಾಗಿ ವಿಡಿಯೋಗ್ರಫಿ ಮಾಡಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಡಿವೈಎಸ್‌ಪಿ ಶರಣಬಸವೇಶ್ವರ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ಉಪ ನಿರ್ದೇಶಕ ಪಳನಿಸ್ವಾಮಿ, ಡಿಎಚ್‌ಒ ಡಾ.ಷಣ್ಮುಖಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

- - -

(ಬಾಕ್ಸ್‌) ಪರೀಕ್ಷಾ ಕೇಂದ್ರಗಳು: ದಾವಣಗೆರೆಯ ದಾವಣಗೆರೆ ವಿಶ್ವವಿದ್ಯಾಲಯ, ಶಿವಗಂಗೋತ್ರಿ, ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜು, ಪಿ.ಜೆ. ಬಡಾವಣೆ, ಪಿ.ಬಿ. ರಸ್ತೆ, ಡಿಆರ್‌ಎಂ ಸರ್ಕಾರಿ ಪದವಿ ಪೂರ್ವ ಕಾಲೇಜು, ಜಿಲ್ಲಾ ಕ್ರೀಡಾಂಗಣ ಹತ್ತಿರ, ಹದಡಿ ರಸ್ತೆ, ಎಸ್.ಎಲ್. ಪದವಿಪೂರ್ವ ಕಾಲೇಜು, ಎಸ್.ಎನ್. ಲೇಔಟ್, ಬಕ್ಕೇಶ್ವರ ಕಲ್ಯಾಣ ಮಂಟಪ ಹತ್ತಿರ, ಎಸ್‌ಎಜಿಬಿ ಪಿಯು ಕಾಲೇಜು, 2ನೇ ಮುಖ್ಯ, 2 ನೇ ಕ್ರಾಸ್, ಪಿ.ಜೆ. ಬಡಾವಣೆ, ಪಿ.ಎಂ. ಶ್ರೀ ಕೇಂದ್ರಿಯ ವಿದ್ಯಾಲಯ, ಕೊಂಡಜ್ಜಿ ರಸ್ತೆ, ಅವರಗೊಳ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಜೀವ ಆರ್ಯುವೇದಿಕ ಆಸ್ಪತ್ರೆ ಹತ್ತಿರ, ಆಂಜನೇಯ ಬಡಾವಣೆ, ಬಿಡಿಟಿ ಇಂಜಿನಿಯರಿಂಗ್ ಕಾಲೇಜು, ಹದಡಿ ರಸ್ತೆ, ಮೋತಿ ವೀರಪ್ಪ ಸರ್ಕಾರಿ ಪಿಯು ಕಾಲೇಜು, ಪಿ.ಜೆ.ಬಡಾವಣೆ, ಗುಂಡಿ ಸರ್ಕಲ್ ಹತ್ತಿರ, ಎಆರ್‌ಜಿ ಕಲಾ ಮತ್ತು ವಾಣಿಜ್ಯ ಕಾಲೇಜು, ಬಾಪೂಜಿ ಡೆಂಟಲ್ ಕಾಲೇಜು ಹಿಂಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಡೆಂಟಲ್ ಕಾಲೇಜು ರಸ್ತೆ, ಎಂ.ಸಿ.ಸಿ ಬಿ ಬ್ಲಾಕ್, ಅನುಭವ ಮಂಟಪ ಶಾಲೆ ಹಿಂಭಾಗ, ಎ.ವಿ.ಕಮಲಮ್ಮ ಪಿಯು ಮಹಿಳಾ ಕಾಲೇಜು, ಅಕ್ಕಮಹಾದೇವಿ ರಸ್ತೆ, ರಾಜನಹಳ್ಳಿ ಸೀತಮ್ಮ ಸರ್ಕಾರಿ ಪಿಯು ಮಹಿಳಾ ಕಾಲೇಜು, ಪಿ.ಜೆ.ಬಡಾವಣೆ, ಮತ್ತು ಹರಿಹರದ ಡಿಆರ್‌ಎಂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯಲಿವೆ.

- - -

-29ಕೆಡಿವಿಜಿ31:

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ನೀಟ್ ಪರೀಕ್ಷೆ-2026 ಪೂರ್ವಭಾವಿ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ಒಪ್ಪಿಗೆ ಪಡೆಯದೇ ಭೂಮಿ ಸ್ವಾಧೀನಕ್ಕೆ ಮುಂದಾಗಿದ್ದಕ್ಕೆ ವಿರೋಧ
ಮಳೆಗೂ ಮುನ್ನ ಪ್ರತಿ ಗ್ರಾಮಕ್ಕೆ ಕುಡಿವ ನೀರಿನ ವ್ಯವಸ್ಥ ಮಾಡಿ: ಶಾಸಕ ಬಿ.ವೈ.ವಿಜಯೇಂದ್ರ