ಹಾವೇರಿ: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಎನ್‌ಎಸ್‌ಯುಐ ಹಾಗೂ ಯೂತ್ ಕಾಂಗ್ರೆಸ್ ವತಿಯಿಂದ ಸಂಸತ್ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.
ಛಾತ್ರೋಂ ಕಿ ಗೂಂಜ್ ಅಭಿಯಾನವು ಇಂದಿನಿಂದ ಪ್ರಾರಂಭಗೊಂಡು 28 ನಗರಗಳಲ್ಲಿ ಕರಪತ್ರಗಳ ವಿತರಣೆ, ಸಭೆಗಳು ಮತ್ತು ವಿದ್ಯಾರ್ಥಿಗಳ ಸಂಪರ್ಕದ ಮೂಲಕ ತಳಮಟ್ಟದಲ್ಲಿ ಜನ ಸಂಘಟನೆ ಮಾಡಲಾಗುವುದು. ಜುಲೈ ತಿಂಗಳು ಪೂರ್ತಿ ವಿದ್ಯಾರ್ಥಿ ಚಟುವಟಿಕೆಗಳು, ಕ್ಯಾಂಪಸ್ ಸಂಪರ್ಕ ಆಂದೋಲನ ಮತ್ತು ಅಂಬೇಡ್ಕರ್ ಸಂವಾದ ನಡೆಸಲಾಗುವುದು. ಆ.1ರಂದು ಅಭಿಯಾನದಲ್ಲಿ ಭಾಗವಹಿಸುವ ಎಲ್ಲಾ 287 ನಗರಗಳಲ್ಲಿ ಏಕ ಕಾಲದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಮನವಿ ನೀಡಲಾಗುವುದು. ಆ.9ರಂದು ವಿದ್ಯಾರ್ಥಿಗಳ ಧ್ವನಿಯನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಲು ದಿಲ್ಲಿಯಲ್ಲಿ ಸಂಸತ್ ಮುತ್ತಿಗೆ ಹಾಕಲಾಗುವುದು ಎಂದು ವಿವರಿಸಿದರು.
ವಿದ್ಯಾರ್ಥಿಗಳ ಸಾವಿಗೆ ನ್ಯಾಯ ಬೇಕು: ಯೂತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಹಿರೇಮಠ ಮಾತನಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಅಕ್ರಮದ ಪರಿಣಾಮ ದೇಶದಲ್ಲಿ 23 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸ್ಥಾಪನೆಯಾದ ಬಳಿಕ ದೇಶದಲ್ಲಿ ವಿವಿಧ ಹಂತದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು 22 ಬಾರಿ ಸೋರಿಕೆಯಾಗಿವೆ ಎಂದು ಆರೋಪಿಸಿ, ಎನ್‌ಟಿಎಯನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ ಗಂಗಾಧರ ಇಂಗಳಗೊಂದಿ ಮಾತನಾಡಿ, ನೀಟ್ ವೇಳಾಪಟ್ಟಿ, ಫಲಿತಾಂಶ ಹಾಗೂ ನೇಮಕಾತಿ ದಿನಾಂಕಗಳನ್ನು ಮುಂಚಿತವಾಗಿಯೇ ನಿಗದಿಪಡಿಸಿ ಪ್ರಕಟಿಸಬೇಕು. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಕಿಂಗ್‌ಪಿನ್‌ಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ನೀಟ್ ಅಕ್ರಮದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ 23 ವಿದ್ಯಾರ್ಥಿಗಳ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಗೆ ಎರಡು ಸಚಿವ ಸ್ಥಾನಗಳ ನಿರೀಕ್ಷೆ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಜು.10ರಂದು ನಡೆಯಲಿದ್ದು, ಈ ಬಾರಿ ಹಾವೇರಿ ಜಿಲ್ಲೆಗೆ ಎರಡು ಸಚಿವ ಸ್ಥಾನಗಳು ದೊರೆಯುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ವಿಶ್ವಾಸ ವ್ಯಕ್ತಪಡಿಸಿದರು.