ರಾಜಸ್ಥಾನ ಮತ್ತಿತರೆ ರಾಜ್ಯಗಳಲ್ಲಿ ನೀಟ್ ಯುಜಿ-2025ರ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ರಾಜಸ್ಥಾನ ಮತ್ತಿತರೆ ರಾಜ್ಯಗಳಲ್ಲಿ ನೀಟ್ ಯುಜಿ-2025ರ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಗರದ ತಾಲೂಕು ಕಚೇರಿ ಎದುರು ಎಸ್‌ಎಫ್‌ಐ ಸಂಚಾಲನಾ ಸಮಿತಿ ನೇತೃತ್ವದಲ್ಲಿ ಪ್ರತಿಭಟಿಸಿದ ಸಂಘಟನೆ ಪದಾಧಿಕಾರಿಗಳು, ಕಾರ್ಯಕರ್ತರು, ವಿದ್ಯಾರ್ಥಿಗಳು, ತಾಲೂಕು ಕಚೇರಿ ಅಧಿಕಾರಿಗಳ ಮುಖಾಂತರ ರಾಷ್ಟ್ರಪತಿ ಅವರಿಗೆ ಮನವಿ ಅರ್ಪಿಸಿದರು.
ಸಂಘಟನೆ ಮುಖಂಡ ಸಂಜುನಾಯ್ಕ ಮಾತನಾಡಿ, ನೀಟ್ ಯುಜಿ 2026 ಪರೀಕ್ಷೆಯನ್ನು ರದ್ದುಪಡಿಸಲು ಕಾರಣರಾದ ರಾಜಸ್ಥಾನ ಮತ್ತು ಇತರೆ ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಉನ್ನತಮಟ್ಟದ ತನಿಖೆಗೆ ಒಪ್ಪಿಸಬೇಕು. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಆರಂಭದಿಂದಲೂ ಪರೀಕ್ಷೆಗಳನ್ನು ದುರುಪಯೋಗಪಡಿಸಿಕೊಳ್ಳಲು ಕುಖ್ಯಾತಿ ಪಡೆದಿದೆ. ಈಗಲೂ ಅದನ್ನೇ ಮುಂದುವರಿಸಿದೆ ಎಂದು ಆರೋಪಿಸಿದರು.
ನೀಟ್-2026ರ ಪರೀಕ್ಷೆಗಳ ನಿರ್ವಹಣೆಯಲ್ಲಿ ಎನ್‌ಟಿಎ ತನ್ನ ಅಸಮರ್ಥತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ವರದಿಗಳ ಪ್ರಕಾರ ಒಟ್ಟು 720 ಅಂಕಗಳಿಗೆ ಬರೆದ ಪರೀಕ್ಷೆಯನ್ನು ಸುಮಾರು 600 ಅಂಕಗಳಿಗೆ ರಾಜಿ ಮಾಡಿಕೊಳ್ಳಲಾಗಿದ್ದು, ಮೌಲ್ಯಮಾಪನಕ್ಕೆ ಮುಂದಾಗಿದೆ. ಇದು ಪರೀಕ್ಷೆಯ ಸಮಗ್ರತೆ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಪರೀಕ್ಷೆಯಲ್ಲಿನ 180 ಪ್ರಶ್ನೆಗಳಲ್ಲಿ ಸುಮಾರು 15 ಪ್ರಶ್ನೆಗಳನ್ನು ಸಂಭಾವ್ಯ (ಗೆಸ್ ಪೇಪರ್)ದ ಹೆಸರಿನ ಪ್ರಶ್ನೆಪತ್ರಿಕೆ ಮೂಲಕ ಮುಂಚಿತವಾಗಿದೆ ಹಂಚಲಾಗಿದೆ. ರಸಾಯನಶಾಸ್ತ್ರ ವಿಭಾಗದಿಂದ ಸುಮಾರು 120 ಪ್ರಶ್ನೆಗಳನ್ನು ಅಕ್ಷರಶಃ ಸೋರಿಕೆ ಮಾಡಲಾಗಿದೆ ಎಂದು ಅವರು ದೂರಿದರು.
ಪ್ರತಿಷ್ಟಿತ ಸಂಸ್ಥೆಗಳ ಪರೀಕ್ಷೆಗಳಲ್ಲಿ ಆಗುವ ದುಷ್ಪರಿಣಾಮಗಳಿಗೆ ಕೇಂದ್ರ ಸರ್ಕಾರವೇ ನೇರ ಹೊಣೆಯಾಗಿದೆ. ಎನ್‌ಟಿಎ ನಡೆಸುವ ಹೆಚ್ಚಿನ ಸಂಖ್ಯೆಯ ಪರೀಕ್ಷೆಗಳಲ್ಲಿ ಕಳಪೆ, ಲೋಪವಾಗಿರುವುದು ಪುನಃ ಪುನಃ ಸಾಬೀತಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಹಲವಾರು ಪರೀಕ್ಷಾ ಮಾಫಿಯಾಗಳು ಹುಟ್ಟಿಕೊಳ್ಳಲು ಕೇಂದ್ರ ಸರ್ಕಾರದ ಕೇಂದ್ರೀಕರಣದ ಪ್ರಯತ್ನಗಳು ದುಷ್ಪರಿಣಾಮಕ್ಕೆ ಕಾರಣವಾಗಿವೆ. ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಸರಿಯಾದ ತನಿಖೆ ಕೈಗೊಳ್ಳುವಂತೆ ಎಸ್ಎಫ್ಐ ಸಂಘಟನೆ ಕೇಂದ್ರಕ್ಕೆ ಒತ್ತಾಯಿಸುತ್ತದೆ ಎಂದು ತಿಳಿಸಿದರು.
ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಎನ್‌ಟಿಎ ಎಲ್ಲ ಸಮಸ್ಯೆಗಳಲ್ಲೂ ತೊಡಗಿದೆ. ಎನ್‌ಟಿಎ ಸೃಷ್ಟಿಸುವ ಇಂತಹ ದುಷ್ಪರಿಣಾಮವು ವಿದ್ಯಾರ್ಥಿಗಳಿಗೆ ಭಾರೀ ವೆಚ್ಚ ಮತ್ತು ಆತಂಕ ಉಂಟುಮಾಡುತ್ತದೆ. ಇದಕ್ಕಾಗಿ ಎನ್‌ಟಿಎಯಿಂದ ವಿದ್ಯಾರ್ಥಿಗಳಿಗೆ ನಷ್ಟದ ಪರಿಹಾರ ನೀಡಬೇಕು. ಇದಲ್ಲದೇ, ಪ್ರಶ್ನೆಪತ್ರಿಕೆ ಸೋರಕೆ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಬೇಕು. ನೀಟ್ ಸೇರಿದಂತೆ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತನ್ನ ಅವೈಜ್ಞಾನಿಕ ಮತ್ತು ಅಸಮರ್ಥ ಕೇಂದ್ರೀಕರಣ ಪ್ರಯತ್ನಗಳನ್ನು ಕೇಂದ್ರ ಗುರುತಿಸಲಿ. ಎನ್‌ಟಿಎ ಸಂಸ್ಥೆಯ ಅವೈಜ್ಞಾನಿಕ ಪರೀಕ್ಷಾ ನೀತಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭ ಎಸ್ಎಫ್ಐ ಮುಖಂಡರಾದ ಅಪ್ಪು, ಬಸವರಾಜ, ಶರತ್, ದಯಾನಂದ, ಸಂತೋಷ, ರಾಹುಲ್ ಇತರರು ಇದ್ದರು.
- - -
** (ಟಾಪ್ ಕೋಟ್)
ರಾಜಸ್ಥಾನ ಮತ್ತಿತರೆ ರಾಜ್ಯಗಳಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮೂಲಕ ದೇಶದ 22 ಲಕ್ಷ ವಿದ್ಯಾರ್ಥಿಗಳ ಜೀವನದ ಜೊತೆಗೆ ಚೆಲ್ಲಾಟ ಆಡುತ್ತಿರುವ ಕೇಂದ್ರ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ. ಎನ್‌ಟಿಎ ಸಂಸ್ಥೆಯ ಹಗರಣವನ್ನು ಸಿಬಿಐ ಸೇರಿದಂತೆ ಉನ್ನತಮಟ್ಟದ ತನಿಖಾ ಸಂಸ್ಥೆಗೆ ತನಿಖೆಗೆ ಒಪ್ಪಿಸಬೇಕು.
- ಸಂಜು ನಾಯ್ಕ, ಜಿಲ್ಲಾ ಮುಖಂಡ, ಎಸ್‌ಎಫ್‌ಐ.
- - -
-13ಕೆಡಿವಿಜಿ1: ನೀಟ್ ಯುಜಿ-2025ರ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದಾವಣಗೆರೆಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್‌ನಿಂದ ಮನವಿ ಅರ್ಪಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.