- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಪ್ತ ಸಮಾಲೋಚನೆ ಮತ್ತು ಮಾರ್ಗದರ್ಶನ ಕೋರ್ಸ್ ಉದ್ಘಾಟನೆ
ಕನ್ನಡಪ್ರಭವ ವಾರ್ತೆ, ನರಸಿಂಹರಾಜಪುರಯುವ ಜನಾಂಗದವರು ಸಾಮಾಜಿಕ ಮಾಧ್ಯಮಗಳನ್ನು ಅತಿಯಾಗಿ ಬಳಕೆ ಮಾಡುವುದರಿಂದ ಋಣಾತ್ಮಕ ಪರಿಣಾಮ ಎದುರಿಸುತ್ತಿದ್ದಾರೆ ಎಂದು ಶಿವಮೊಗ್ಗ ಕಟೀಲ್ ಅಶೋಕಪೈ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಕೆ.ಅರ್ಚನಾ ಭಟ್ ಹೇಳಿದರು.
ಸೋಮವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಪ್ತ ಸಮಾಲೋಚನೆ ಮತ್ತು ಮಾರ್ಗದರ್ಶನ ಎಂಬ ವಿಷಯದ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟಿಸಿ ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ 18 ರಿಂದ 23 ವರ್ಷದ ಒಳಗಿನ ಯುವಜನತೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮಾನಸಿಕ ಒತ್ತಡ ಗಳಿಂದ ಖಿನ್ನತ, ಮದ್ಯ ಮತ್ತು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇದು ಜೀವನ ಗುಣಮಟ್ಟವನ್ನು ಇಳಿಸಿ ಸಮಾಜದ ಅಭಿವೃದ್ಧಿಗೆ ಮಾರಕವಾಗಿದೆ ಎಂದರು. ಸಾಮಾಜಿಕ ಮಾಧ್ಯಮಗಳ ಸಾಧಕ, ಬಾಧಕಗಳನ್ನು ಅರಿತಾಗ ಮಾತ್ರ ಅವುಗಳನ್ನು ಮಿತವಾಗಿ ಬಳಸಲು ಸಾಧ್ಯ. ಮೊಬೈಲ್ ಗಳಲ್ಲಿ ಅತಿಯಾಗಿ ಆನ್ ಲೈನ್ ಆಟಗಳಿಗೆ ಬಲಿ ಪಶುವಾಗಿ ಕ್ರೂರ ವರ್ತನೆ ಮತ್ತು ಆತ್ಮಹತ್ಯೆ ಇತ್ಯಾದಿ ನಕಾರಾತ್ಮಕ ಪರಿಣಾಮ ಅನುಭವಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಅವಾಸ್ತವಿಕ ನಿರೀಕ್ಷೆಗಳು ಹೆಚ್ಚಾಗಿ ಮಾನಸಿಕ ಸಮಸ್ಯೆಗಳು ಹೆಚ್ಚಾಗಿದೆ ಎಂದರು.
ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ದಿನಕರ್ ಮಾತನಾಡಿ, ಸಮಾಜದಲ್ಲಿ ಜನರು ಪರಿಪೂರ್ಣ ಜೀವನ ನಡೆಸಲು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ. ವ್ಯಕ್ತಿಗಳ ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕ ಚಟುವಟಿಕೆಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಆಧುನಿಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಆಪ್ತ ಸಮಾಲೋಚನೆ, ಮಾರ್ಗದರ್ಶನ, ಕೌಶಲ ಜನರ ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಅವಶ್ಯಕ. ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದರು.ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಆರ್.ಕೆ.ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳನ್ನು ಪರಿಪೂರ್ಣ ವ್ಯಕ್ತಿ ಯಾಗಿ ರೂಪಿಸಲು ಶಿಕ್ಷಣವು ಪೂರಕವಾಗಿದೆ. ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಆತ್ಮವಿಶ್ವಾಸದಿಂದ ಅಧ್ಯಯನದಲ್ಲಿ ತೊಡಗಿಕೊಂಡಾಗ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ಮಾತನಾಡಿ, ವಿದ್ಯಾರ್ಥಿಗಳು ಅತಿಯಾಗಿ ಮೊಬೈಲ್ ಬಳಸುವುದು ಮಾನಸಿಕ ಸಮಸ್ಯೆಗೆ ಕಾರಣವಾಗುತ್ತಿದೆ. ನೈತಿಕ ಮೌಲ್ಯ ಅಳವಡಿಸಿಕೊಂಡಾಗ ನೆಮ್ಮದಿ ಜೀವನ ನಡೆಸಲು ಸಾಧ್ಯ. ಯುವ ಜನಾಂಗ ಕಾನೂನುಗಳಿಗೆ ಬದ್ಧವಾಗಿ ಅದನ್ನು ಪಾಲಿಸಬೇಕು ಎಂದರು.ಸಮಾಜ ಕಾರ್ಯವಿಭಾಗದ ಉಪನ್ಯಾಸಕರಾದ ರುಖಿಯತ್, ಹೇಮಲತಾ, ಸುರೇಶ್, ವಿದ್ಯಾರ್ಥಿಗಳಾದ ಸಂಧ್ಯಾ, ಕವನ, ಈಶಾನ್ಯ ಪಾಲ್ಗೊಂಡಿದ್ದರು.